ಬೆಳಗಾವಿ: ದುಬೈನ ಓಮಾನ್‌ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ಕುಟುಂಬ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನೊಳಗೆ ಸಿಲುಕಿದ ಕುಟುಂಬಸ್ಥರು ಸಜೀವ ದಹನವಾಗಿದ್ದಾರೆ. ಪವನಕುಮಾರ್ ತಹಶಿಲ್ದಾರ, ಪೂಜಾ, ವಿಜಯಾ, ಆದಿಶೇಷ ಮೃತ ದುರ್ದೈವಿಗಳು.
ಇಬ್ಬರು ಮಕ್ಕಳು, ತಾಯಿ ಹಾಗೂ ಅಳಿಯನ ಸಾವಾಗಿದೆ. ಮೃತರ ಶವವನ್ನು ಭಾರತಕ್ಕೆ ತರಲು ರಾಜ್ಯಸಭಾ ಈರಣ್ಣ ಕಡಾಡಿ ಮಾತುಕತೆ ನಡೆಸಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಪ್ರಹ್ಲಾದ್ ಜೋಶಿಗೆ ಮನವಿ ಮಾಡಿದ್ದಾರೆ.
ಸರಣಿ ಅಪಘಾತದಲ್ಲಿ ಎಲ್ಲರೂ ಜಸ್ಟ್ ಮಿಸ್
ಶಾಲಾ ವಾಹನ, ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ. ಕಾರು ಮತ್ತು ಶಾಲಾ ವಾಹನದಲ್ಲಿದ್ದವರಿಗೆ ಗಾಯವಾಗಿದ್ದು, ಸ್ವಲ್ಪದರಲ್ಲೆ ಬಾರಿ ದುರಂತ ತಪ್ಪಿದೆ. ಮಂಡ್ಯದ ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಘಟನೆ ನಡೆದಿದೆ.
ಮಾಜಿ ಸಚಿವ ಸಿಎಸ್ ಪುಟ್ಟರಾಜು ಒಡೆತನಕ್ಕೆ ಸೇರಿದ ಎಸ್‌ಟಿಜಿ ಶಾಲಾ ವಾಹನ ಇದಾಗಿದ್ದು, ಶಾಲಾ ವಾಹನದಲ್ಲಿದ್ದ ಶಿಕ್ಷಕಿಯರಿಗೆ ಸಣ್ಣಪುಟ್ಟ ಗಾಯವಾಗಿದೆ. ಕಾರಿನಲ್ಲಿದ್ದ ವ್ಯಕ್ತಿಗೆ ತಲೆಗೆ ಪೆಟ್ಟಾಗಿದೆ. ರಸ್ತೆ ಕಿರಿದಾಗಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Viral News: ತಂಗಿ ಮನೆಯಲ್ಲೇ ಚಿನ್ನ ಕದ್ದು ಸಿಕ್ಕಿಬಿದ್ದ ಅಕ್ಕ
ಬಸ್‌ಗೆ ಕಲ್ಲು ತೂರಿದ ಪುಂಡರು
ಕುಡಿದ ಮತ್ತಲ್ಲಿ ಪುಂಡರು ಸರ್ಕಾರಿ ಬಸ್‌ಗೆ ಕಲ್ಲು ತೂರಿದ್ದಾರೆ. ಬಸ್‌ಗೆ ಹತ್ತಿಸಿಕೊಳ್ಳದ ಕಾರಣಕ್ಕೆ ಕೆಲ ಯುವಕರು ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲು ತೂರಿದ್ದಾರೆ. ಮಂಡ್ಯದ ಮದ್ದೂರು ಪಟ್ಟಣದ ಕೊಪ್ಪ ವೃತ್ತದ ಬಳಿ ಘಟನೆ ನಡೆದಿದೆ. ಕಂಠ ಪೂರ್ತಿ ಕುಡಿದು ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹತ್ತಲು ಮುಂದಾದರು.
ಈ ವೇಳೆ ನಿರ್ವಾಹಕ ಬಸ್‌ಗೆ ಹತ್ತಿಸಿಕೊಳ್ಳದೆ ರೈಟ್ ಹೇಳಿದ್ದರಿಂದ ಆಕ್ರೋಶಗೊಂಡಿದ್ದಾರೆ. ಬಸ್ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಬಸ್‌ಗೆ ಕಲ್ಲು ತೂರಾಟ ಮಾಡಿದ್ದಾರೆ. ಹಿಂಬದಿ ಗ್ಲಾಸ್ ಒಡೆದು ಬಸ್‌ನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ. ತಕ್ಷಣ ಬಸ್ ನಿಲ್ಲಿಸಿ ಚಾಲಕ ನಿರ್ವಾಹಕ ಹಾಗು ಪ್ರಯಾಣಿಕರಿಂದ ಓರ್ವ ಯುವಕನ ಬಂಧನವಾಗಿದೆ. ಈ ವೇಳೆ ನಾಲ್ವರು ಯುವಕರು ಸ್ಥಳದಿಂದ ಪರಾರಿ ಆಗಿದ್ದಾರೆ. ಸಿಕ್ಕಿಬಿದ್ದ ಓರ್ವನನ್ನು ಪೊಲೀಸರ ವಶಕ್ಕೆ ನೀಡಿ ದೂರು ದಾಖಲಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ