ಹುಬ್ಬಳ್ಳಿ/ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ಎಂಬ ಮಾತನ್ನು ಮಾಜಿ ಸಚಿವ ಸಂತೋಷ್ ಲಾಡ್ ಪುನರುಚ್ಚರಿಸಿದ್ದು, ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳ್ಳಿ ಸಹ ಹೊಸ ರೀತಿಯ ವಿಶ್ಲೇಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸಂತೋಷ್ ಲಾಡ್, ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವಂತೆ ಕರ್ನಾಟಕದ ಎಲ್ಲ ಕಡೆ ಆಹ್ವಾನಿಸುತ್ತಿದ್ದಾರೆ. ಕಲಘಟಗಿಗೆ ಬಂದರೂ ಸ್ವಾಗತ ಎಂದಿದ್ದೇನೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲಿಯೂ ಸ್ಪರ್ಧೆ ಮಾಡಬಾರದು ಎನ್ನುವುದು ನನ್ನ ವೈಯಕ್ತಿಕ ಹೇಳಿಕೆ. ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದರೆ ನಮಗೆ ಪ್ರಚಾರಕ್ಕೆ ಒಳ್ಳೆದಾಗತ್ತದೆ ಹಾಗಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದೆ ಎಂದರು.
ಬೆಳಗಾವಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಿತ್ತೂರು ಕ್ಷೇತ್ರದಲ್ಲಿ ಅಳಿಯ ಮಾವನ ಮಧ್ಯೆ ಕಾಂಗ್ರೆಸ್ ಟಿಕೆಟ್ ಫೈಟ್ ವಿಚಾರದಲ್ಲಿ ಸರ್ವೇಯಲ್ಲಿ ಯಾರು ಹೆಸರು ಬರುತ್ತದೆಯೋ ಅವರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದೇವೆ. ಸರ್ವೇಯಲ್ಲಿ ಡಿ.ಬಿ. ಇನಾಂದಾರ್ ಹೆಸರು ಬಂದರೆ ಅವರಿಗೇ ನೀಡುತ್ತೇವೆ. ಬಾಬಾಸಾಹೇಬ್ ಪಾಟೀಲ್ ಹೆಸರು ಬಂದರೆ ಅವರಿಗೇ ನೀಡುತ್ತೇವೆ. ಅಂತಹ ಕ್ಷೇತ್ರಗಳು ನಮ್ಮ ಜಿಲ್ಲೆಯಲ್ಲಿ ಬಹಳಷ್ಟು ಇವೆ.
ಬೆಳಗಾವಿ ಜಿಲ್ಲೆಯ ಪ್ರತಿ ಕ್ಷೇತ್ರಕ್ಕೂ ಐದು, ಹತ್ತು ಜನ ಅರ್ಜಿ ಸಲ್ಲಿಸಿದ್ದಾರೆ. ಕುಡಚಿಯಲ್ಲಿ 12, ಅಥಣಿಯಲ್ಲಿ 10 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದರು. ಸವದತ್ತಿಯಿಂದ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅರ್ಜಿ ಹಾಕಲು ಎಲ್ಲರಿಗೂ ಅವಕಾಶ ಇದೆ ಹೀಗಾಗಿ ಹಾಕಿದ್ದಾರೆ. ಇನ್ನೂ ಅಂತಿಮವಾಗಿ ಸರ್ವೇ ಮಾಡಿದ ಬಳಿಕ ನಿರ್ಧಾರ ಮಾಡಲಾಗುತ್ತದೆ. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ಮೂವರು ಸರ್ವೇ ಮಾಡುತ್ತಿದ್ದಾರೆ. ಸವದತ್ತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಪರ್ಧಿಸುತ್ತಾರೆಂಬ ವಿಚಾರದಲ್ಲಿ ಪ್ರತಿಕ್ರಿಯಿಸಿ, ಪಕ್ಷ ಅಧಿಕಾರಕ್ಕೆ ಬರಲಿ ಎಂಬುದು ನಮ್ಮ ಆಶಯ. ಹೀಗಾಗಿ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧಿಸಬಾರದು ಎಂದೇನಿಲ್ಲ. ಡಿ.ಕೆ.ಶಿವಕುಮಾರ್ ಅವರು ಗೆದ್ದೇ ಗೆಲ್ಲುತ್ತಾರೆ, ಅವರ ಬಗ್ಗೆಯಂತೂ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಜಾಸ್ತಿ ಹೋಗದೇ ಇರುವಂತಹ ಕ್ಷೇತ್ರ ಆಯ್ಕೆ ಮಾಡುವುದು ಒಳ್ಳೆಯದು. ಅವರಿಗೆ ಹೆಚ್ಚು ಹೊರಗಡೆ ಹೋಗಲು ಅವಕಾಶ ಸಿಗುತ್ತದೆ. ಕಳೆದ ಬಾರಿ ಬಾದಾಮಿ ತರಹ ಆದರೆ ಪಕ್ಷಕ್ಕೂ ಮತ್ತು ಅವರಿಗೂ ತೊಂದರೆ ಆಗುತ್ತದೆ. ಸೇಫ್ ಇದ್ದ ಕ್ಷೇತ್ರ ನೋಡಿದರೆ ಒಂದೆರಡು ದಿವಸ ಹೋಗಿ ಕೊನೆಗೆ ಗೆಲ್ಲುವಂತಹ ಕ್ಷೇತ್ರ ಆಯ್ಕೆ ಮಾಡಬೇಕು. ಅಂತಹ ಕ್ಷೇತ್ರಗಳು ಬಹಳ ಇವೆ, ಕೊನೆಗೆ ಹೇಳುತ್ತೇವೆ. ಈಗ ಹೇಳಿದರೆ ಸಮಸ್ಯೆ ಆಗುತ್ತದೆ ಎಂದರು.
ಇದನ್ನೂ ಓದಿ | ಎಲೆಕ್ಷನ್ ಹವಾ | ಕಲಘಟಗಿ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ