Site icon Vistara News

Sexual Abuse: ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಬ್ಯ್ಲಾಕ್‌ಮೇಲ್‌ ಮಾಡಿದ ಡಕಾಯಿತಿ ಗ್ಯಾಂಗ್

gokak sexual abuse and dacoity

ಬೆಳಗಾವಿ: ಡಕಾಯಿತರ ಗ್ಯಾಂಗ್‌ (Dacoity case) ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Sexual abuse) ನಡೆಸಿದ, ಅದನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್‌ (Blackmail case) ಮಾಡಿದ ಅಮಾನುಷ ಘಟನೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸೆ.5ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕದಲ್ಲಿ ಮನೆ ನುಗ್ಗಿ ಡಕಾಯತಿ ಮಾಡುತ್ತಿದ್ದ ಗ್ಯಾಂಗ್‌ನಿಂದ ಅತ್ಯಾಚಾರ ನಡೆದಿದ್ದು, ಗ್ಯಾಂಗ್‌ನ ಆರು ಜನ ಮಹಿಳೆ ಮೇಲೆ ರೇಪ್ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಗೋಕಾಕ ನಗರ, ಗ್ರಾಮೀಣ ಹಾಗೂ ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಡಕಾಯಿತಿ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು. ಇವರು ಬೆಣಚಿಣಮರಡಿ ಖಿಲಾರಿ ಗ್ಯಾಂಗ್, ಗೋಕಾಕನ ಎಸ್ಪಿ ಸರ್ಕಾರ್ ಗ್ಯಾಂಗ್ ಎಂಬ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದರು. ಈ ಖದೀಮರು ಡಕಾಯತಿ ಮಾಡುವುದಕ್ಕಾಗಿಯೇ ವಾಟ್ಸ್ಯಾಪ್ ಗ್ರೂಪ್ ಕೂಡ ಕ್ರಿಯೇಟ್ ಮಾಡಿಕೊಂಡಿದ್ದುದು ಸುದ್ದಿಯಾಗಿತ್ತು. ಇವರನ್ನು ಈಚೆಗಷ್ಟೇ ಗೋಕಾಕ ಪೊಲೀಸರು ಹೆಡೆಮುರಿ ಕಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅತ್ಯಾಚಾರ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರ ಬಂಧನ ವೇಳೆ ಒಬ್ಬ ಆರೋಪಿ ತಪ್ಪಿಸಿಕೊಂಡು ಹೋಗಿದ್ದ. ಆತನಿಗೆ ಅಪಘಾತವಾಗಿದ್ದು, ಗಾಯಗೊಂಡಿದ್ದ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಾಪತ್ತೆಯಾಗಿದ್ದ ಆರೋಪಿಗೆ ಗೋಕಾಕ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣ ಸಂಬಂಧ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿ‌ ನಡೆಸಿ ಮಾಹಿತಿ ನೀಡಿದ್ದಾರೆ. ಸೆ.5ರಂದು ಈ ಅಮಾನವೀಯ ಘಟನೆ ನಡೆದಿದೆ. ಮಹಿಳೆ ಮತ್ತು ಪುರುಷನೊಬ್ಬನನ್ನು ಪುಸಲಾಯಿಸಿ ಒಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಸವರಾಜ ಖಿಲಾರಿ ಎಂಬಾತ ಕರೆದುಕೊಂಡು ಹೋಗಿದ್ದ ಆರೋಪಿ. ಬಳಿಕ ತನ್ನ ಗ್ಯಾಂಗ್‌ನ ಸದಸ್ಯರಿಗೆ ಪೋನ್ ಕರೆ ಮಾಡಿ ಕರೆಸಿಕೊಂಡಿದ್ದ. ನಂತರ ಒಬ್ಬೊಬ್ಬರಾಗಿ ಮಹಿಳೆ ಮೇಲೆ ಎರಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರ ಮಾಡಿದ ನಂತರ ಪರಿಚಯಸ್ಥ ಪುರುಷ ಮತ್ತು ಮಹಿಳೆಯ ವಿಡಿಯೋ ಮಾಡಿಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದರೆ ಮಾನ ಹರಾಜು ಮಾಡುವ, ಜೀವ ತೆಗೆಯುವ ಬೆದರಿಕೆಯನ್ನು ಗ್ಯಾಂಗ್ ಹಾಕಿತ್ತು. ಬಳಿಕ ಪುರುಷ ಮತ್ತು ಮಹಿಳೆ ಬಳಿಯಿದ್ದ ಹಣ, ಚಿನ್ನಾಭರಣ, ಎಟಿಎಂ ಪಾಸವರ್ಡ್ ಪಡೆದು ಹಣವನ್ನೂ ದೋಚಿತ್ತು. ನೊಂದ ಮಹಿಳೆ ಸೆ.29ರಂದು ದೂರು ದಾಖಲು ಮಾಡಿದ್ದು, ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Dacoity Case: ಡಕಾಯಿತಿ ಮಾಡಲೆಂದೇ ವಾಟ್ಸ್ಯಾಪ್‌ ಗ್ರೂಪ್‌ ಮಾಡಿಕೊಂಡಿದ್ದ ಖದೀಮರು ಅಂದರ್!

Exit mobile version