ಬೆಂಗಳೂರು: ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಕರ್ನಾಟಕದ ಗಡಿ ದಾಟಿದ ನಂತರ ಆಯೋಜಿಸಿದ್ದ ಅನೌಪಚಾರಿಕ ಮಾತುಕತೆ ವೇಳೆ, ಸಿದ್ದರಾಮಯ್ಯ ಅವರು ಯಾವುದೇ ಹಂತದಲ್ಲಿ ತಮ್ಮ ಫಾಲೋಯರ್‌ಗಳನ್ನು ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ ಈಗಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಹಿಂದು ಪದದ ಕುರಿತು ಮಾಜಿ ಸಚಿವ, ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಾರಂಭದಲ್ಲಿ ಹಿಂದು ಧರ್ಮದ ಕುರಿತು ನಕಾರಾತ್ಮಕವಾಗಿಯೇ ಮಾತನಾಡಿದ ಜಾರಕಿಹೊಳಿ, ವಿವಾದ ಹೆಚ್ಚಳವಾಗುತ್ತಿರುವಂತೆ ತಾವು ಹೇಳಿದ್ದು ಹಾಗಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
ಜಾರಕಿಹೊಳಿ ವಿಡಿಯೋ ವೈರಲ್ ಆಗುತ್ತಿರುವಂತೆಯೇ ಮೊದಲು ಪ್ರತಿಕ್ರಿಯೆ ನೀಡಿದವರು ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ. ಹಿಂದು ಧರ್ಮ ಎನ್ನುವುದು ಜೀವನ ಪದ್ಧತಿಯಾಗಿದ್ದು, ಜಾರಕಿಹೊಳಿ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಈ ಹೇಳಿಕೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಇದಕ್ಕೆ ದನಿಗೂಡಿಸಿ, ಇಂತಹ ಮಾತನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಸಹ ಖಂಡತುಂಡವಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಸತೀಶ್ ಜಾರಕಿಹೊಳಿ ಯಾವುದೋ ಪುಸ್ತಕದಲ್ಲಿದೆ ಅಂತ ಹೇಳ್ತಿದ್ದಾರೆ. ಯಾವ ಪುಸ್ತಕದಲ್ಲಿದೆ ನಂಗಂತೂ ಗೊತ್ತಿಲ್ಲ. ಇದನ್ನು ಪಕ್ಷದ ಅಧ್ಯಕ್ಷನಾಗಿ ಖಂಡಿಸಿದ್ದೇನೆ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ, ಅದನ್ನು ನಾವು ಖಂಡಿಸುತ್ತೇವೆ. ಈಗಲೂ ಅವರು ಮತ್ತೆ ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ಅದನ್ನು ಗಮನಿಸಿ ಮಾತನಾಡುತ್ತೇನೆ. ಬಿಜೆಪಿಯವರು ರಾಜಕೀಯ ಬಳಿಸಿಕೊಳ್ಳಲು ಏನು ಬೇಕಾದರೂ ಮಾಡಿಕೊಳ್ಳಲಿ, ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತೇನೆ ಅದು ತಪ್ಪು ಎಂದಿದ್ದಾರೆ.
ಆದರೆ ಸಿದ್ದರಾಮಯ್ಯ ಅವರ ಹೇಳಿಕೆ ಮಾತ್ರ ವಿಚಿತ್ರವೆನಿಸಿದೆ. “ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರತಿಕ್ರಿಯೆಯೇ ನಮ್ಮ ನಿಲುವು” ಎಂದಷ್ಟೇ ಹೇಳಿ ಹೊರಟಿದ್ದಾರೆ.
ಏಕಾಂಗಿಯಾದ ಜಾರಕಿಹೊಳಿ
ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸಮರ್ಥನೆ ಮಾಡಿಕೊಂಡರೂ ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ತಮ್ಮ ಪರ ನಿಲ್ಲದೇ ಇರುವುದು ಸತೀಶ್ ಜಾರಕಿಹೊಳಿ ಅವರನ್ನು ಏಕಾಂಗಿಯಾಗಿಸಿದೆ. ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್ ಎಂದರೆ ಹಿಂದುತ್ವ ವಿರೋಧಿ ಎಂಬುದನ್ನು ಮತ್ತೆ ಬ್ರ್ಯಾಂಡ್ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ತಮ್ಮ ಆಪ್ತ ಸತೀಶ್ ಜಾರಕಿಹೊಳಿಯವರನ್ನು ಸಮರ್ಥನೆ ಮಾಡಿಕೊಳ್ಳಲು ಸಿದ್ದರಾಮಯ್ಯ ಬಂದೇ ಬರುತ್ತಾರೆ, ಆಗ ಕಾಂಗ್ರೆಸ್ ಹಿಂದು ವಿರೋಧಿ ಎಂಬ ಬ್ರ್ಯಾಂಡಿಂಗ್ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ಆಲೋಚನೆ ಹೊಂದಿದೆ.
ಆದರೆ ಇದೆಲ್ಲವನ್ನೂ ಅರಿತಿರುವ ಸಿದ್ದರಾಮಯ್ಯ ಮಾತ್ರ ಹೆಚ್ಚು ಮಾತನಾಡದೆ ಮೌನವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಎರಡು ದಿನದಿಂದ ಹೆಚ್ಚು ಕಾಣಿಸಿಕೊಂಡಿಲ್ಲ.ತಮ್ಮ ಹಿಂಬಾಲಕರನ್ನು ಯಾವುದೇ ಸಂದರ್ಭದಲ್ಲಿ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂಬ ಹಿರಿಮೆ ಸಿದ್ದರಾಮಯ್ಯ ಅವರದ್ದು. ಅದನ್ನು ಸ್ವತಃ ರಾಹುಲ್ ಗಾಂಧಿ ಅವರ ಎದುರೇ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಈಗಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂದಿಗ್ಧದಲ್ಲಿ ಸಿಲುಕಿದ್ದಾರೆ.
ಜಾರಕಿಹೊಳಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರೆ ಇತ್ತ ಕಡೆ ತಮ್ಮ ವಿರುದ್ಧ ಹಿಂದು ವಿರೋಧಿ ಹಣೆಪಟ್ಟಿ ಗಟ್ಟಿಯಾಗುತ್ತದೆ, ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ. ಸಮರ್ಥನೆ ಮಾಡದೆ ಖಂಡಿಸಿದರೆ, ತಮ್ಮ ಆಪ್ತನನ್ನು ಸಿದ್ದರಾಮಯ್ಯ ಬಿಟ್ಟುಕೊಟ್ಟರು ಎಂಬ ಸಂದೇಶ ರವಾನೆ ಆಗುತ್ತದೆ. ಇವೆರಡರ ನಡುವೆ ಯಾವ ರೀತಿ ಸಮತೋಲನ ಕಾಯ್ದುಕೊಳ್ಳುವುದು ಎಂದು ಚಿಂತೆಯಲ್ಲಿದ್ದಾರೆ ಎಂದು ಪಕ್ಷದ ವಲಯದಲ್ಲಿ ಚರ್ಚೆ ಆಗುತ್ತಿದೆ.
ಇದನ್ನೂ ಓದಿ | ಹಿಂದು-ಹಿಂದುತ್ವ ವಿಷಯದಲ್ಲಿ ಸಮಸ್ಯೆ ಇದ್ದವರು ಪಾಕಿಸ್ತಾನಕ್ಕೆ ಹೋಗಿ; ಸತೀಶ್ ಜಾರಕಿಹೊಳಿಗೆ ಮಧ್ಯಪ್ರದೇಶ ಸಂಸದನ ತಿರುಗೇಟು