Site icon Vistara News

Theft Case : ಬೆಳಗಾವಿಯಲ್ಲಿ ಇರಾನಿ ಗ್ಯಾಂಗ್ ಆ್ಯಕ್ಟಿವ್! ಒಂಟಿ ಮಹಿಳೆಯರೇ ಟಾರ್ಗೆಟ್‌

Irani gang active in Belagavi Single women are the target

ಬೆಳಗಾವಿ: ಇರಾನಿ ಗ್ಯಾಂಗ್ ಬೆಳಗಾವಿ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದಿದೆ. ಇರಾನಿ ಗ್ಯಾಂಗ್ (Irani gang) ಮಹಿಳೆಯರು ಧೈರ್ಯದಿಂದ ಬೀದಿಯಲ್ಲಿ ಓಡಾಡದ ಪರಿಸ್ಥಿತಿಗೆ ತಂದಿದೆ. ಬೀದಿಯಲ್ಲಿ ಸಂಚರಿಸುವ ಒಂಟಿ ಮಹಿಳೆಯರು ಹಾಗೂ ಖಾಲಿ ಮನೆಗಳೆ ಈ ಗ್ಯಾಂಗ್ (Theft Case) ಟಾರ್ಗೆಟ್ ಆಗಿದೆ.

ರಾತ್ರಿ ಹೊತ್ತು ಮನೆಗಳ ಮುಂಭಾಗ ಬೀಗ ಹಾಕಿದ್ದರೆ, ಹಗಲು ಹೊತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಮಹಾಂತೇಶ ನಗರ, ಅಮನ್ ನಗರದಲ್ಲಿ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿದ್ದಾರೆ. 2.5 ಲಕ್ಷ ರೂ. ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹಾಗೂ 2.20 ಲಕ್ಷ ‌ನಗದು ಸೇರಿ 7 ಲಕ್ಷ ಮೌಲ್ಯದ ವಸ್ತು ಎಗರಿಸಿ ಖದೀಮರು ಕಾಲ್ಕಿತ್ತಿದ್ದಾರೆ. ಜತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್‌ ಕದ್ದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿತ್ರದುರ್ಗದಲ್ಲಿ ಎಟಿಎಂ ಕಳ್ಳತನಕ್ಕೆ ಕಳ್ಳನ ಯತ್ನ

ಚಿತ್ರದುರ್ಗ ನಗರದಲ್ಲಿ ಎಟಿಎಂ (ATM) ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಗರದ ಸರಸ್ವತಿ ಪುರಂ ಶಾಲೆಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕೃತ್ಯ ನಡೆದಿದ್ದು, ಚಾಲಾಕಿ ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ (CCTV) ಸೆರೆಯಾಗಿದೆ. ಮಂಕಿ ಕ್ಯಾಪ್, ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಖತರ್ನಾಕ್ ಕಳ್ಳ ಬಳಿಕ ಸಿಸಿಕ್ಯಾಮೆರಾ ಗಳಿಗೆ ಕಪ್ಪು ಮಸಿ ಸ್ಪ್ರೇ ಮಾಡಿದ್ದಾನೆ. ಕಬ್ಬಿಣದ ರಾಡ್‌ನಿಂದ ಎಟಿಎಂಗೆ ಹೊಡೆದು ಹಣ ಎಗರಿಸಲು ಯತ್ನಿಸಿದ್ದಾನೆ. ಮಿಷನ್ ಸೇಪ್ ಲಾಕ್ ಡೋರ್ ಡ್ಯಾಮೇಜ್ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಮೋಹನ್ ರಾವ್ ಅವರಿಂದ ದೂರು ದಾಖಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧೆಯ ಚಿನ್ನದ ಸರ ಕದ್ದ ಮುಸುಕುಧಾರಿಗಳು

ಅಂಗಡಿಗೆ ತೆರಳುತ್ತಿದ್ದ ವೃದ್ದೆ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಚಿತ್ರದುರ್ಗದ ಎಸ್‌ಪಿ ಕಚೇರಿ ಸಮೀಪದಲ್ಲೇ ಘಟನೆ ನಡೆದಿದೆ. ಇಬ್ಬರು ಮುಸುಕು ಧಾರಿ ಬೈಕ್ ಸವಾರರಿಂದ ಕೃತ್ಯ ನಡೆದಿದೆ. ಮುನ್ಸಿಪಲ್ ಕಾನೋನಿ ನಿವಾಸಿ ಅನ್ನಪೂರ್ಣಮ್ಮ ಎಂಬುವವರು 45 ಗ್ರಾಂ ತೂಕದ ಚಿನ್ನಾಭರಣ ಕಳೆದುಕೊಂಡವರು. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

ಚಿಕ್ಕಮಗಳೂರಲ್ಲಿ ಕಳ್ಳರ ಕೈ ಚಳಕ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿನಿಮೀಯ ಶೈಲಿಯಲ್ಲಿ ಏಕಕಾಲದಲ್ಲಿ ನಾಲ್ಕು ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ.‌ ನಾಲ್ಕು ಮನೆಯವರು ತುರ್ತು ಕೆಲಸದ ನಿಮಿತ್ತ ವಿವಿಧೆಡೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ದೇವನೂರು ಗ್ರಾಮದಲ್ಲಿ ಸರಣಿ ಕಳ್ಳತನಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ದೇವನಹಳ್ಳಿಯಲ್ಲಿ ಬೈಕ್‌ ಕಳ್ಳ ಅರೆಸ್ಟ್‌

ದ್ವಿಚಕ್ರ ವಾಹನಗಳನ್ನೇ ಕಳವು ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳನ ಬಂಧನವಾಗಿದೆ. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸರಿಂದ ಚಿಕ್ಕಬಳ್ಳಾಪುರದ ನೆಲಮಾಕನಹಳ್ಳಿ ಗ್ರಾಮದ ಸಾಗರ್ ( 25) ಬಂಧಿತ ಆರೋಪಿ ಆಗಿದ್ದಾನೆ.

ಈತ ಕೊಯಿರಾ ಗ್ರಾಮದ ಮನೋಜ್ ಎಂಬಾತನ‌ ಮನೆ ಮುಂದೆ ನಿಲ್ಲಿಸಿದ್ದ ಆರ್ ಎಕ್ಸ್ ಬೈಕ್ ಕದ್ದು‌ ಎಸ್ಕೇಪ್‌ ಆಗಿದ್ದ. ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಯ ಮುಂದೆ ಬೈಕ್‌ಗಳ ಕದಿಯುತ್ತಿದ್ದ ಸಾಗರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 4 ಆರ್ ಎಕ್ಸ್ ಬೈಕ್, 2 ಆಕ್ಟಿವ್ ಹೊಂಡಾ ಸೇರಿದಂತೆ 6 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version