ಬೆಳಗಾವಿ: ಈ ಬಾರಿ ಬೆಳಗಾವಿಯ ಐತಿಹಾಸಿಕ ಹಿನ್ನೆಲೆಯ ಬೆಳಗಾವಿ ಗಣೇಶೋತ್ಸವದಲ್ಲಿ ʻವೀರ್ ಸಾವರ್ಕರ್’ ಹವಾ ಕಂಡುಬಂದಿದೆ. ಹಲವಾರು ಗಣೇಶ ಮಂಟಪಗಳಲ್ಲಿ ವೀರ ಸಾವರ್ಕರ್ ಫೋಟೋಗಳು ಕಂಡುಬಂದಿವೆ.
ಈ ಬಾರಿಯ ಗಣೇಶೋತ್ಸವವನ್ನು ವೀರ ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸಲು ಹಿಂದೂ ಸಂಘಟನೆಗಳು ಕರೆ ನೀಡಿದ್ದವು. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ವಿವಿಧ ಗಣೇಶ ಮಂಟಪಗಳಿಗೆ ಸ್ಥಳೀಯ ಬೆಳಗಾವಿ ಮಹಾನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರ ಗೌಡ ಪಾಟೀಲ್ ನೇತೃತ್ವದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ವಿತರಿಸಲಾಯಿತು.
ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 378 ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆದಿದೆ. ಗಣೇಶ ಪ್ರತಿಷ್ಠಾಪನೆಗೂ ಮುನ್ನವೇ ಮಂಟಪಗಳಿಗೆ ತೆರಳಿ ಸಾವರ್ಕರ್ ಭಾವಚಿತ್ರ ವಿತರಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಈ ಬಾರಿ ʼಸಾವರ್ಕರ್ ಗಣೇಶ ಉತ್ಸವʼವನ್ನಾಗಿ ಆಚರಿಸಲು ಹಿಂದೂ ಸಂಘಟನೆಗಳ ನಿರ್ಧರಿಸಿದ್ದು, ಸ್ಥಳೀಯ ಬಿಜೆಪಿ ಶಾಸಕರು, ನಾಯಕರು ಬೆಂಬಲ ಸೂಚಿಸಿದ್ದರು.
ಬೆಳಗಾವಿ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. 1905ರಲ್ಲಿ ಸ್ವತಃ ಬಾಲಗಂಗಾಧರ ತಿಲಕ್‌ರಿಂದ ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೆ ಚಾಲನೆ ದೊರೆತಿತ್ತು. ಪ್ರತಿ ವರ್ಷ 11 ದಿನಗಳ ಕಾಲ ಅದ್ಧೂರಿ ಗಣೇಶೋತ್ಸವ ನಡೆಯುತ್ತದೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ 2006ರಲ್ಲಿ ಗಣೇಶೋತ್ಸವ, ಶಿವರಾತ್ರಿ ಆಚರಣೆ ನಡೆದಿತ್ತು?