ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ (Bellary VIMS Hospital) ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ (Medical Negligence) ಸಾವನ್ನಪ್ಪಿದ್ದಾರೆ ಎಂದು ಸಿಟ್ಟಾದ ಮಗನೊಬ್ಬ ವಿಮ್ಸ್‌ನ ಮಹಿಳಾ (VIMS Hospital ) ವೈದ್ಯೆ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ. ವೈದ್ಯೆಯ ತಲೆ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ದಿಢೀರ್ ಕೈಗೊಂಡ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್ ಕಿರಿಕ್; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್
ಪ್ರತ್ಯೇಕ ಕಡೆ ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಸೇರಿ ಹಸು ಬಲಿ
ಉಡುಪಿ/ ಆನೇಕಲ್: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.
ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.
ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ
ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.
ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ