ಶಶಿಧರ ಮೇಟಿ, ಬಳ್ಳಾರಿ
ದಲಿತ ಸಮುದಾಯದ ಮತ ಬ್ಯಾಂಕ್ ಸೆಳೆಯುವ ಪ್ರಯತ್ನ, ಮುಂದಿನ ಚುನಾವಣೆಗೆ ಕಾಂಗ್ರೆಸ್‌ಗೆ ಪಂಥಾಹ್ವಾನ, ಎಸ್‌ಟಿ ಮೀಸಲಾತಿ ಹೆಚ್ಚಿಸುವ ಬಿಜೆಪಿ ನಿರ್ಧಾರದ ಬಗ್ಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಟೀಕೆಗೆ ಪತ್ಯುತ್ತರ, ದಲಿತರ ಪರವಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ತೆಗೆದು ಕೊಂಡಿರುವ ನಿರ್ಧಾರಗಳು, ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಶ್ರೀರಾಮುಲು ಬಗೆಗಿನ ಟೀಕೆಗೆ ಭಾವೋದ್ವೇಗದ ಪ್ರತ್ಯುತ್ತರದ ಮಾತುಗಳಿಗೆ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶ ಆಕ್ಷರಶಃ ವೇದಿಕೆಯಾಗಿತ್ತು. ಜೆ.ಪಿ. ನಡ್ಡಾದಿಂದ ಆದಿಯಾಗಿ ವೇದಿಕೆಯ ಪ್ರತಿಯೊಬ್ಬರು ಮಾತುಗಳಲ್ಲಿ ಈ ವಿಚಾರಗಳು ಎದ್ದು ಕಾಣುತ್ತಿತ್ತು.
ಗಣಿನಾಡು ಬಳ್ಳಾರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶ ಕೇವಲ ಒಂದು ಸಮುದಾಯದ ಸಮಾವೇಶವಾಗಿ ಉಳಿಯದೆ, ಇದೊಂದು ದಲಿತ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ದಲಿತರ ಪಕ್ಷ, ಬಿಜೆಪಿ ಮೇಲ್ವರ್ಗ ಪಕ್ಷ ಎನ್ನುವ ಹಣೆಪಟ್ಟಿ ಕಳಚಿಹಾಕುವ ಪ್ರಯತ್ನ ನಡೆಯಿತು. ಇದಕ್ಕೆ ಉದಾಹರಣೆ ಸಹಿತವಾಗಿ ಪ್ರಮುಖ ಮುಖಂಡರು ಕೆಲವೊಂದು ಉದಾಹರಣೆಗಳನ್ನು ಲಕ್ಷಾಂತರ ಜನರ ಮಧ್ಯೆ ತೆರೆ ದಿಡುವ ಪ್ರಯತ್ನ ಮಾಡಿದರು. ಅಂಬೇಡ್ಕರ್ ಅವರ ಸಮಾಧಿಯ ಸ್ಥಳದ ವಿಚಾರವನ್ನು ಎಳೆದುತಂದು ಕಾಂಗ್ರೆಸ್ ಪಕ್ಷವನ್ನು ಕಾಲೆಳೆಯುವ ಕೆಲಸ ಮಾಡಿದರು.
ಮತ ಬ್ಯಾಂಕಿಗೆ ದಲಿತರ ಬಳಕೆ ಮಾಡಿದ ಕಾಂಗ್ರೆಸ್!
ಕಾಂಗ್ರೆಸ್ ದಲಿತರ ಪಕ್ಷವೆಂದು ಹೇಳಿಕೊಂಡು ದಲಿತ ಮತಗಳನ್ನು ಸೆಳೆಯುವ ಕೆಲಸ ಮಾಡಿತೆ ಹೊರತು ದಲಿತರಿಗೆ ಕಾಂಗ್ರೆಸ್‌ನಿಂದ ಆಗಿರುವ ಲಾಭವೇನೆಂದು ಪ್ರಶ್ನಿಸುವ ಜೊತೆಗೆ ಬಿಜೆಪಿಯಿಂದ ದಲಿತರಿಗೆ ಆಗಿರುವ ಲಾಭವನ್ನು ತೆರೆದಿಟ್ಟರು. ತಮ್ಮ ಭಾಷಣದಲ್ಲಿ ಬುಡಕಟ್ಟು ವರ್ಗಕ್ಕೆ ಸೇರಿದ ದ್ರೌಪತಿ ಮುರ್ಮು ಅವರಿಗೆ ರಾಷ್ಟ್ರಪತಿ ಮಾಡಿದ್ದು, ಜಾರ್ಖಂಡ್ ಸಿಎಂ ಮತ್ತು ಛತ್ತಿಸ್‌ಘಡ ರಾಜ್ಯಪಾಲರ ನೇಮಕ, ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ದಲಿತರ ಪರವಾದ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆ. ಸ್ವತಂತ್ರ ಬಂದು ೭೫ ವರ್ಷಗಳ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಮಾಡಿದ್ದೇನು ಎಂಬ ಪ್ರಶ್ನೆಯನ್ನು ನೆರೆದ ಜನರ ಮುಂದೆ ಇಟ್ಟರು.
ಸಿದ್ದು ಟಾರ್ಗೆಟ್, ಡಿಕೆಶಿಯ ಮಾತಿಲ್ಲ
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಹುತೇಕರ ಭಾಷಣದಲ್ಲಿ ಟಾರ್ಗೆಟ್ ಮಾಡಿದರು, ಎಲ್ಲಿಯೂ ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ. ಆದರೆ ಯಡಿಯೂರಪ್ಪ ಮಾತ್ರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಕಾಂಗ್ರೆಸ್‌ನವರು ಮಾಡಿದ್ದಾರೆ ಎಂಬ ವಿಷಯ ಪ್ರಸ್ತಾಪಿಸಿ, ಈ ಮಾತನ್ನು ನೀವೆಲ್ಲಾ ನೆನಪಿನಲ್ಲಿಟ್ಟುಕೊಳ್ಳಲು ಹೇಳಿದರು.
ಬಿಜೆಪಿ ಪರವಾಗಿ ಅಹಿಂದಾ, ಇಲ್ಲಿ ಬಂದು ನೋಡಪ್ಪ!
ಸಿಎಂ ಬಸವರಾಜ್ ಬೊಮ್ಮಾಯಿ ಒಂದು ಹಜ್ಜೆ ಮುಂದೆ ಹೋಗಿ ಸಿದ್ರಾಮಣ್ಣ ಇಲ್ಲಿ ಬಂದು ನೋಡಪ್ಪ, ಎಸ್‌ಟಿ ಎಸ್‌ಸಿ ಸಮಾಜ ನಮ್ಮ ಜೊತೆ ಇದೆ, ಇಲ್ಲಿರುವುದು ಅಹಿಂದಾ ಸಮಾಜ, ಭಾರತ ಜೋಡೋದಲ್ಲಿ ಒಂದು ಸಣ್ಣ ಮೈದಾನದಲ್ಲಿ ಕಾರ್ಯಕ್ರಮ ಮಾಡಿ, ಸುನಾಮಿ ಎಂದ ರೂ, ಅದಲ್ಲ ಸುನಾಮಿ, ಇಲ್ಲಿರುವುದು ಸುನಾಮಿ ಎಂದು ಕಾಂಗ್ರೆಸ್ ಪಕ್ಷವನ್ನು ಸ್ವತಃ ಸಿಎಂ ಕಾಲೆಳೆದರು. ಮುಂದೆ ಶ್ರೀರಾಮುಲು ಸಿಎಂ ಆಗುವ ಅವಕಾಶ ಬರಬಹುದೆಂದು ಹೇಳಿದಾಗ, ಜನರು ಶಿಳ್ಳೆ ಹೊಡೆದರು.
ರೆಡ್ಡಿ ಹೆಸರು ಪ್ರಸ್ತಾಪಿಸಿದ ಯಡ್ಡಿ
ನಾನು ಸಿಎಂ ಆದಾಗ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಕೇಳಿದ್ದೆಲ್ಲಾ ಬಳ್ಳಾರಿಗೆ ಕೊಟ್ಟಿದ್ದೇವೆ, ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಜನಾರ್ದನ ರೆಡ್ಡಿ ಅವರ ಹೆಸರನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಜಾತಿ ಮತ್ತು ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಅದರಲ್ಲೂ ಸಿದ್ದರಾಮಯ್ಯ ಅವರ ಮಾತನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಹಿಂದು ವಿರೋಧಿ ಎನ್ನುವುದನ್ನು ಬಿಂಬಿಸುವ ಪ್ರಯತ್ನ ಸಿ.ಟಿ.ರವಿಯವರು ಮಾಡಿದರು. ಸಿದ್ದರಾಮಯ್ಯ ಅವರಿಗೆ ಕುಂಕುಮ, ಕೇಸರಿ ಕಂಡರೆ ಆಗಲ್ಲ, ಇಂತಹವರಿಗೆ ನಿಮ್ಮ ಮತ ಕೊಡಬೇಕಾ? ಕಾಂಗ್ರೆಸ್‌ನಲ್ಲಿ ಪೊಮೋಷನ್ ಸಿಗಬೇಕಾದರೆ ಮತಾಂತರ ಆಗಬೇಕು, ಇಲ್ಲವೇ ಮತಾಂತರವನ್ನು ಪ್ರೋತ್ಸಾಹಿಸಬೇಕು, ರಾಮ ಇಲ್ಲ, ಆಂಜಿನೇಯ ಇಲ್ಲ ಎಂದಾದರೆ ವಾಲ್ಮೀಕಿಯವರ ರಾಮಾಯಣ ಇಲ್ಲ ಎಂದರ್ಥ ಎಂದು ವಾಲ್ಮೀಕಿ ಸಮುದಾಯಕ್ಕೆ ಕಾಂಗ್ರೆಸ್‌ನ ನಿಲುವು ತಿಳಿಸುವ ಕೆಲಸ ಸಿಟಿ ರವಿ ಮಾಡಿದರು. ಮದಕರಿ ನಾಯಕನನ್ನು ಮೋಸದಿಂದ ಕೊಂದ ಟಿಪ್ಪುನನ್ನು ಬೆಂಬಲಿಸುವ ಕಾಂಗ್ರೆಸ್‌ಗೆ ಓಟು ಹಾಕುತ್ತೀರಾ ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟರು.
ಅಂಬೇಡ್ಕರ್ ಅವರನ್ನು ಸಮಾವೇಶಕ್ಕೆ ಕರೆತಂದ ನಾಯಕರು!
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ ಪಕ್ಷವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರೆ, ಇನ್ನೊಬ್ಬ ಮುಖಂಡ ಅಂಬೇಡ್ಕರ್ ಅವರ ಸಮಾಧಿಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಳ ನೀಡಲಿಲ್ಲ ಎನ್ನುವ ವಿಷಯ ಪ್ರಸ್ತಾಪಿಸಿ, ದಲಿತ ವಿಚಾರದಲ್ಲಿ ಕಾಂಗ್ರೆಸ್ ನಿಲುವ ನೆರೆದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು. ಇನ್ನು ಕಾಂಗ್ರೆಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮುನಿಯಪ್ಪನಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ, ಎಸ್‌ಸಿ ಮತ್ತು ಎಸ್‌ಟಿಗೂ ಅನ್ಯಾಯ ಮಾಡಿದೆ, ಕಾಂಗ್ರೆಸ್ ಮುಳುಗುವ ಹಡಗು ಅದಕ್ಕೆ ಖರ್ಗೆ ಅವರಿಗೆ ನೇತೃತ್ವ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರು ವಾಗ್ದಾಳಿ ಮಾಡಿದರು.
ಜನರ ಮುಂದೆ ಭಾವನೆ ತೆರೆದಿಟ್ಟ ರಾಮುಲು
ಶ್ರೀರಾಮುಲು ಅವರಿಗೆ ಈ ಸಮಾವೇಶವು ಪ್ರತಿಷ್ಟೆಯ ಪ್ರಶ್ನೆಯಾಗಿತ್ತು, ತಮ್ಮ ಭಾಷಣ ಆರಂಭದಿಂದಲೂ ಭಾವೋದ್ವದ ಮಾತುಗಳನ್ನು ಆಡಿದರು. ಮುಂದೆ ಲಂಕ ದಹನ ಇದೆ ಎಂದು ಚುನಾವಣೆಯ ದೃಷ್ಟಿಕೋನದಲ್ಲಿ ಮಾತನಾಡಿದ ರಾಮುಲು, ಕಾಂಗ್ರೆಸ್ ಪತನ ಈ ಸಮಾವೇಶದಿಂದಲೇ ಆರಂಭವಾಗಲಿದೆ, ೨೦೨೩ರಲ್ಲಿ ವಾಲ್ಮೀಕಿ ಸಮುದಾಯವು ಬಿಜೆಪಿ ಪರವಾಗಿ ನಿಲ್ಲುತ್ತದೆ, ನಮ್ಮ ಸಿಎಂ ಸುದರ್ಶನ ಚಕ್ರ ಬಿಟ್ಟಿದ್ದಾರೆ, ಇದರಿಂದಾಗಿ ಕಾಂಗ್ರೆಸ್ ಶಿರಚ್ಛೇದನವಾಗಲಿದೆ, ತಾಕತ್ತಿದ್ದರೆ ತಡೆಯಲಿ, ಇಲ್ಲಿಗೆ ಬರಲಿ, ನಾವೇನು ಬಳೆ ತೊಟ್ಟುಕೊಂಡಿಲ್ಲ. ಈಗ ಬನ್ನಿಯಪ್ಪ ನೋಡೋಣ ಎಂದು ಸಿದ್ದರಾಮಯ್ಯನವರಿಗೆ ಪಂಥಾಹ್ವಾನ ಮಾಡಿದರು.
ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಸಮಾಜದ ಅನ್ನ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದು ತಮ್ಮ ಸಮಾಜದ ಮಹತ್ವವನ್ನು ಎತ್ತಿ ಹಿಡಿದರು. ತಮ್ಮ ಪರವಾಗಿ ದಲಿತ ಸಮುದಾಯವನ್ನು ಸೆಳೆಯುವ ಕೆಲಸವನ್ನು ವೇದಿಕೆಯ ಪ್ರತಿಯೊಬ್ಬರು ಭಾಷಣದಲ್ಲಿ ಎದ್ದು ಕಾಣುತ್ತಿತ್ತು. ಇದು ಪರಿಶಿಷ್ಟ ಪಂಗಡದ ನವಶಕ್ತಿ ಬೃಹತ್ ಸಮಾವೇಶ ಎಂದಾದರೂ, ಇದನ್ನು ಪರಿವರ್ತನಾ ಸಮಾವೇಶ, ಸಾಧನಾ ಸಮಾವೇಶ, ಸಂಕಲ್ಪ ಸಮಾವೇಶ ಸೇರಿದಂತೆ ಇತರ ಹೆಸರಿನಿಂದ ನಾಯಕರು ಹೆಸರಿಸಿದರು.
ಸಮಾವೇಶದಲ್ಲಿ ತಲೆಗಳ ಲೆಕ್ಕಾಚಾರ!
ಸಮಾವೇಶ ನಡೆದ ನಂತರದಲ್ಲಿ ಸೇರಿರುವ ಜನಸ್ತೋಮದ ಲೆಕ್ಕಾಚಾರಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಈ ಸಮಾವೇಶದೊಂದಿಗೆ ಬಳ್ಳಾರಿ ಭಾರತ ಜೋಡೋ ಸಮಾವೇಶ ಮತ್ತು ದಾವಣಗೆರೆಯ ಸಿದ್ದರಾಮೋತ್ಸವಕ್ಕೆ ಸೇರಿರುವ ಜನಸ್ತೋಮದ ಹೋಲಿಕೆಗೆ ರಾಜ ಕೀಯ ಪಕ್ಷಗಳು ಲೆಕ್ಕಾಚಾರ ಶುರು ಹಂಚಿಕೊಂಡಿವೆ. ಬಳ್ಳಾರಿ ಜೋಡೋ ಯಾತ್ರೆಯ ಸಮಾವೇಶವು ರಾಹುಲ್ ಗಾಂಧಿ ರಾಷ್ಟ್ರೀಯ ಪ್ರಮುಖ ಮುಖಂಡರ ಕಾರ್ಯಕ್ರಮವಾದರೆ, ಎಸ್‌ಟಿ ಸಮಾವೇಶ ಒಂದು ಸಮುದಾಯಕ್ಕೆ ಸೀಮಿತವಾದ ಕಾರ್ಯಕ್ರಮ ಸೇರಿದಂತೆ ಇತರ ಚರ್ಚೆಗಳು ಈ ಸಮಾವೇಶದ ಕುರಿತಾಗಿ ನಡೆಯುತ್ತಿವೆ. ಈ ಸಮಾವೇಶಕ್ಕೆ ಎಷ್ಟು ಜನರ ಸೇರಿದ್ದರೂ ಎಂದು ತಲೆಗಳನ್ನು ಎಣಿಸುವ ಕೆಲಸವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಒಟ್ಟಾರೆ ಸಮಾವೇಶವು ಹಲವು ಸಂದೇಶಗಳನ್ನು ರವಾನೆ ಮಾಡಿದೆ.
ಇದನ್ನೂ ಓದಿ | ನವಶಕ್ತಿ ಸಮಾವೇಶ | ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲ ಬರುತ್ತದೆ ಎಂದ ಸಿಎಂ ಬೊಮ್ಮಾಯಿ