ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಗಣಿ ಜಿಲ್ಲೆಯಲ್ಲಿ ಈ ಬಾರಿಯ ರಾಜಕೀಯ ಚಿತ್ರಣ ವಿಭಿನ್ನ ಚುನಾವಣೆ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ. (ಬಳ್ಳಾರಿ ಜಿಲ್ಲೆ ಸಮೀಕ್ಷೆ ) ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪಾಳೆಯದಲ್ಲಿ ಬಿರುಕು, ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಭಿನ್ನಮತ, ಪಕ್ಷಾಂತರ ಪರ್ವಗಳು ಕೆಲವು ಕ್ಷೇತ್ರಗಳ ಫಲಿತಾಂಶದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ.
ಬಂಡಾಯ ಅಥವಾ ಪಕ್ಷಾಂತರಿಗಳೇ ಗೇಮ್ ಚೇಂಜರ್! : ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿಲ್ಲವೆಂದು ಮಾಜಿ ಶಾಸಕ ಅನಿಲ್ ಲಾಡ್ ಜೆಡಿಎಸ್‌ಗೆ ಹೋಗಿ ಸ್ಪರ್ಧಿಸಿರುವುದು, ಕಂಪ್ಲಿಯಲ್ಲಿ ತಮಗೆ ಟಿಕೆಟ್ ಸಿಕ್ಕಿಲ್ಲವೆಂದು ಕಾಂಗ್ರೆಸ್ ಆಕಾಂಕ್ಷಿ ರಾಜು ನಾಯಕ್ ಜೆಡಿಎಸ್ ನಿಂದ ಕಣಕ್ಕಿಳಿದಿರುವುದು ಮತ್ತು ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲವೆಂದು ಕೆ.ಎಸ್.ದಿವಾಕರ್ ಕೆಆರ್‌ಪಿ ಪಕ್ಷದಿಂದ ಕಣಕ್ಕಿಳಿದಿರುವುದು ಗಣಿ ಜಿಲ್ಲೆಯ ಪ್ರಮುಖ ರಾಜಕೀಯ ಬೆಳವಣಿಗೆಗಳಾಗಿವೆ.
ಬಳ್ಳಾರಿ ಗ್ರಾಮೀಣ: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ
2008ರ ಕ್ಷೇತ್ರ ಪುನರ್ವಿಂಗಡಣೆ ಪ್ರಕಾರ ಇದು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿಯಿಂದ ಸಚಿವ ಬಿ. ಶ್ರೀರಾಮುಲು ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ. ನಾಗೇಂದ್ರ ಸ್ಪರ್ಧೆಗಿಳಿದ್ದಿದ್ದಾರೆ. ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ನಡೆದಿದೆ.
ಕಳೆದ ಬಾರಿ ಕ್ಷೇತ್ರ ಬಿಟ್ಟು ಮೊಳಕಾಲ್ಮೂರದಿಂದ ಸ್ಪರ್ಧಿಸಿ ಶ್ರೀರಾಮುಲು ಕ್ಷೇತ್ರದ ಜನರಿಂದ ದೂರವಾಗಿದ್ದರು. ಇವರ ಕೆಲವೊಂದು ನಡೆಗಳು ಕ್ಷೇತ್ರದ ಜನರ ಮುನಿಸಿಗೆ ಕಾರಣವಾಗಿತ್ತು. ಹಾಗಾಗಿ ಮತದಾರರ ಮನವೊಲಿಸಲು ಶ್ರೀರಾಮುಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಬಿಜೆಪಿಯ ಸಣ್ಣಪಕ್ಕೀರಪ್ಪ ಅವರು ಅಲ್ಪಮತಗಳ ಅಂತರದಿಂದ ಸೋತಿದ್ದರು.
ಕಳೆದ ಬಾರಿಯ ಫಲಿತಾಂಶ ಏನು?
ನಾಗೇಂದ್ರ (ಕಾಂಗ್ರೆಸ್): 79,186 | ಸಣ್ಣಪಕ್ಕೀರಪ್ಪ (ಬಿಜೆಪಿ): 76, 507 | ಗೆಲುವಿನ ಅಂತರ: 2,679
ಬಳ್ಳಾರಿ ನಗರ : ಕೆಆರ್‌ಪಿಯಿಂದಾಗಿ ತ್ರಿಕೋನ ಸ್ಪರ್ಧೆ
ಇಲ್ಲಿ ತ್ರಿಕೋನ ಸ್ಪರ್ಧೆಯಾದರೂ ಜೆಡಿಎಸ್ ಮತಗಳು ನಿರ್ಣಾಯಕ. ಈ ಬಾರಿ ಬಳ್ಳಾರಿ ನಗರ ಕ್ಷೇತ್ರದ ಚುನಾವಣೆಯ ಕಾವು ತೀರಾ ಕುತೂಹಲ ಘಟ್ಟ ತಲುಪಿದೆ. ಚುನಾವಣೆಯ ಘೋಷಣೆಯಿಂದ ಟಿಕೆಟ್ ಹಂಚಿಕೆ ಯವರೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಕೆಆರ್‌ಪಿ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಯ ಹಂತದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅನಿಲ್ ಲಾಡ್ ಅವರು ತೆನೆಹೊತ್ತ ಮಹಿಳೆಯ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮತ್ತು ಅವರ ಪಡೆಯುವ ಮತಗಳು ಗೆಲುವಿನ ದಡ ಸೇರುವ ಪಕ್ಷದ ದಿಕ್ಕು ಬದಲಾಯಿಸುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ ರೆಡ್ಡಿ ಸ್ಪರ್ಧಿಸಿದ್ದಾರೆ. ಇನ್ನು ಕೆಆರ್‌ಪಿಯಿಂದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಕೆಆರ್‌ಪಿ ತುರುಸಿನ ಸ್ಪರ್ಧಿಯ ಮಧ್ಯೆ ಹಲವು ವೋಟುಗಳು ಛಿದ್ರವಾಗಲಿವೆ, ಆದರೆ ಬಿಜೆಪಿ ಸಾಂಪ್ರಾದಾಯಿಕ ಮತಗಳು ಪಡೆಯುವಲ್ಲಿ ಕಾಂಗ್ರೆಸ್ ಮತ್ತು ಕೆಆರ್‌ಪಿ ಪಕ್ಷಗಳು ಶಕ್ತವಾದರೆ ಬಿಜೆಪಿಗೆ ದೊಡ್ಡ ಪೆಟ್ಟಾಗಲಿದೆ. ಕ್ಷೇತ್ರದಲ್ಲಿ ಗೆಲುವಿನ ಅಂತರ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಎಎಸ್‌ಯುಸಿಐ, ಆಪ್ ಸೇರಿದಂತೆ ಪಕ್ಷೇತರರು ಪಡೆಯುವ ಮತಗಳು ಕೂಡ ಗೆಲ್ಲುವ ಅಭ್ಯರ್ಥಿಯ ಮತ ಪ್ರಮಾಣ ನಿರ್ಧರಿಸಲಿದೆ. ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಹೆಚ್ಚಿನ ಮತಗಳು ಪಡೆದರೆ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ. ಕ್ಷೇತ್ರದಲ್ಲಿ ಜಾತಿವಾರು, ಪಕ್ಷವಾರು ಪಡೆಯುವ ಮತಗಳು ಫಲಿತಾಂಶವನ್ನು ನಿರ್ಧರಿಸಲಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಅನಿಲ್ ಲಾಡ್ (ಕಾಂಗ್ರೆಸ್): 60,434 | ಜಿ. ಸೋಮಶೇಖರ ರೆಡ್ಡಿ (ಬಿಜೆಪಿ): 76, 589 | ಗೆಲುವಿನ ಅಂತರ: 16,155
ಸಂಡೂರು : ನಾಲ್ಕನೇ ಬಾರಿ
ಗೆದ್ದೀತೇ ಕಾಂಗ್ರೆಸ್?
ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರ. ಘೋರ್ಪಡೆ ಕಾಲದಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕಳೆದ ಮೂರು ಬಾರಿ ಕಾಂಗ್ರೆಸ್‌ನಿಂದ ಈ. ತುಕಾರಾಂ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಈ ಬಾರಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಲ್ಲಿ ತುಕಾರಾಂ ಅವರಿಗೆ ಪ್ರಬಲ ಎದುರಾಳಿ ಇಲ್ಲದಿರುವುದು ಕಾಂಗ್ರೆಸ್‌ಗೆ ಕಳೆದ ಮೂರು ಚುನಾವಣೆಯಲ್ಲಿ ಗೆಲುವು ಸುಲಭ ತುತ್ತಾಗಿತ್ತು. ಈ ಚುನಾವಣೆಯಲ್ಲಿ ಇದೇ ಪರಿಸ್ಥಿತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಎಸ್.ದಿವಾಕರ್ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಅವರು ಕೆಆರ್‌ಪಿ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಶಾಪವಾಗಿ ಪರಿಣಮಿಸಿ ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಈ. ತುಕಾರಾಂ ಸ್ಪರ್ಧಿಸಿದರೆ, ಬಿಜೆಪಿಯಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಾಘವೇಂದ್ರ (ಕೊರೊನಾದಿಂದ ಮೃತಪಟ್ಟಿದ್ದಾರೆ) ಅವರ ಪತ್ನಿ ಶಿಲ್ಪಾ ರಾಘವೇಂದ್ರ ಅವರು ಸ್ಪರ್ಧಿಸಿದ್ದರೆ, ಕೆಆರ್‌ಪಿಯಿಂದ ಕೆ.ಎಸ್.ದಿವಾಕರ್ ಸ್ಪರ್ಧಿಸಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಈ. ತುಕಾರಾಂ (ಕಾಂಗ್ರೆಸ್): 78,106| ರಾಘವೇಂದ್ರ (ಬಿಜೆಪಿ): 64,096 | ಗೆಲುವಿನ ಅಂತರ: 14,010
ಕಂಪ್ಲಿ : ಕಾಂಗ್ರೆಸ್ ಮತ್ತು ಬಿಜೆಪಿ
ಮಧ್ಯೆ ಜಿದ್ದಾಜಿದ್ದಿ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಕ್ಷೇತ್ರ ಕಂಪ್ಲಿ. ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಜೆ.ಎನ್.ಗಣೇಶ್ ಗೆಲುವು ಸಾಧಿಸಿದ್ದರು. ಹಲವು ಜನಪರ ಕಾರ್ಯಗಳು ಕಾಂಗ್ರೆಸ್‌ಗೆ ವರದಾನವಾಗಿದೆ. ಆದರೆ ಕಳೆದ ಬಾರಿ ಸೋತಿರುವ ಬಿಜೆಪಿಯ ಸುರೇಶ್ ಬಾಬು ಶತಾಯಗತಾಯವಾಗಿ ಜಯಗಳಿಸಲು ಶ್ರಮ ಪಡುತ್ತಿದ್ದಾರೆ.
ಎರಡು ಪಕ್ಷಗಳ ಮಧ್ಯೆ ತುರುಸಿನ ಪೈಪೋಟಿ ನಡುವೆ ಕಾಂಗ್ರೆಸ್ ಆಕಾಂಕ್ಷಿ ರಾಜು ನಾಯಕ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕಾಂಗ್ರೆಸ್‌ಗೆ ಸಂಕಟ ತಂದಿದೆ. ಕೊನೆಯ ಹಂತದ ಮತದಾರರ ಮನವೊಲಿಕೆಯ ಕಸರತ್ತು ಗೆಲುವನ್ನು ನಿರ್ಧರಿಸಲಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಜೆ.ಎನ್.ಗಣೇಶ್ (ಕಾಂಗ್ರೆಸ್): 80, 592| ಸುರೇಶ್‌ಬಾಬು (ಬಿಜೆಪಿ): 75,037 | ಗೆಲುವಿನ ಅಂತರ: 5,555
ಸಿರುಗುಪ್ಪ : ಕುತೂಹಲ
ಕೆರಳಿಸಿರುವ ತ್ರಿಕೋನ ಸ್ಪರ್ಧೆ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಲ್ಲಿ ಭಿನ್ನಮತ, ಆಡಳಿತ ವಿರೋಧಿ ಅಲೆ ಮತ್ತು ಕೆಆರ್‌ಪಿ ಸ್ಪರ್ಧೆಯು ಈ ಬಾರಿ ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದೆ. ಇನ್ನು ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಪೈಪೋಟಿಯು ಭಿನ್ನಮತಕ್ಕೆ ಕಾರಣವಾಗಲಿದೆ ಎಂಬ ಲೆಕ್ಕಾಚಾರ ಹುಸಿಯಾಗಿದೆ.
ಸಹಕಾರ ಕ್ಷೇತ್ರದ ಮುಖಂಡರಾದ ಚೊಕ್ಕ ಬಸವನ ಗೌಡ ಮತ್ತು ಚಂದ್ರಯ್ಯಸ್ವಾಮಿ ಒಂದಾಗಿ ಕಾಂಗ್ರೆಸ್ ಬೆನ್ನಿಗೆ ನಿಂತಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಎಂ.ನಾಗರಾಜ್, ಕೆಆರ್‌ಪಿಯಿಂದ ಧರಪ್ಪ ನಾಯಕ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇರುವುದರಿಂದ ಗೆಲುವಿನ ದಡ ಸೇರುವುದು ಯಾರೆಂಬುದು ನಿರ್ಧರಿಸುವುದು ಕಷ್ಟ.
ಕಳೆದ ಬಾರಿಯ ಫಲಿತಾಂಶ ಏನು?
ಮುರಳಿಕೃಷ್ಣ (ಕಾಂಗ್ರೆಸ್): 61,275 | ಎಂ.ಎಸ್.ಸೋಮಲಿಂಗಪ್ಪ (ಬಿಜೆಪಿ): 82, 546 | ಗೆಲುವಿನ ಅಂತರ: 21,271
ಇದನ್ನೂ ಓದಿ : Karnataka election 2023: ಬಳ್ಳಾರಿಯ 5 ಕ್ಷೇತ್ರದಲ್ಲಿ 7 ನಾಮಪತ್ರ ವಾಪಸ್; ಕಣದಲ್ಲಿ 56 ಅಭ್ಯರ್ಥಿಗಳು