ಬಳ್ಳಾರಿ: ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದಲ್ಲಿ ಬಂಧಿಸಲಾಗಿರುವ ಪಿಎಫ್ಐ ಸಂಘಟನೆಯ (PFI terrorist) ಪ್ರಮುಖ ಶಸ್ತ್ರಾಸ್ತ್ರ ತರಬೇತುದಾರ, ಸುಳ್ಳು ಹೆಸರಿನಲ್ಲಿ ಹಲವು ವರ್ಷಗಳಿಂದ ಬಳ್ಳಾರಿಯಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಗೊತ್ತಾಗಿದೆ.
ಈತನನ್ನು ಹೈದರಾಬಾದ್‌ನಿಂದ ಬಂದ ಎನ್‌ಐಎ ತಂಡ ದಾಳಿ ಮಾಡಿ (nia raid) ಬಂಧಿಸಿತ್ತು. ಆಂಧ್ರಪ್ರದೇಶದ ನಂದ್ಯಾಲದ ನೊಸಂ ಮಹಮದ್ ಯೂನುಸ್ (33) ಬಂಧಿತ ಆರೋಪಿ. ನಿಜಾಮಾಬಾದ್ ಭಯೋತ್ಪಾದನೆ ಪಿತೂರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದು, ಎನ್ಐಎ ಈತನಿಗಾಗಿ ಶೋಧಿಸುತ್ತಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಈತನ ನಂದ್ಯಾಲದ ಮನೆಯನ್ನು ಎನ್‌ಐಎ ಅಧಿಕಾರಿಗಳು ಶೋಧಿಸಿದಾಗ ಪತ್ನಿ, ಇಬ್ಬರು ಮಕ್ಕಳ ಜತೆ ಪರಾರಿಯಾಗಿದ್ದ.
ಬಳಿಕ ತನ್ನ ಕುಟುಂಬದೊಂದಿಗೆ ಬಳ್ಳಾರಿಗೆ ಬಂದು ಕೌಲ್ ಬಜಾರ್ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ತನ್ನ ಹೆಸರನ್ನು ಬಷೀರ್ ಎಂದು ಬದಲಿಸಿಕೊಂಡು ಪ್ಲಂಬರ್ ಕೆಲಸ ಮಾಡುತ್ತಿದ್ದ. ಪಿಎಫ್‌ಐ ಸಂಘಟನೆಗೆ ಸೇರಿಕೊಂಡಿರುವ ಅಮಾಯಕ ಯುವಕರಿಗೆ ಯೂನುಸ್ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ.
ವಿಚಾರಣೆ ಸಮಯದಲ್ಲಿ ಬಂಧಿತ ಯೂನುಸ್, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಇಲಿಯಾಸ್ ಎಂಬವನ ಬಗ್ಗೆ ಸುಳಿವು ನೀಡಿದ್ದಾನೆ. ಇಲಿಯಾಸ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣದ ಸಂಬಂಧ ತೆಲಂಗಾಣ ಪೊಲೀಸರು 2022ರ ಜುಲೈ 4ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ತನಿಖೆಯನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಎನ್ಐಎ ಮರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈವರಗೆ 16 ಆರೋಪಿಗಳ ವಿರುದ್ಧ 2 ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ನಿಜಾಮಾಬಾದ್ ಪ್ರಕರಣದಕ್ಕೆ ಸಂಬಂಧಿಸಿ ಈಗಾಗಲೇ ಶೇಕ್ ಶಾದುಲ್ಲಾ (40), ಮೊಹಮ್ಮದ್ ಇಮ್ರಾನ್ (22) ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ (27) ಎಂಬ ಮೂವರನ್ನು ಬಂಧಿಸಲಾಗಿದೆ. ಇವರು ಸ್ಥಳೀಯ ಮುಸ್ಲಿಂ ಯುವಕರನ್ನು ಗುರುತಿಸಿ, ಅವರನ್ನು ದುರ್ಬೋಧನೆಯ ಮೂಲಕ ಪ್ರೇರೇಪಿಸಿ ಭಯೋತ್ಪಾದನೆಗೆ ಛೂಬಿಡುತ್ತಿದ್ದುದು ಗೊತ್ತಾಗಿದೆ.
ಇದನ್ನೂ ಓದಿ: Murder Case: ಸೊಸೆಗೆ ಕಿರುಕುಳ ನೀಡಿದ ಸ್ನೇಹಿತನ ಇರಿದು ಕೊಲೆ