ಬಳ್ಳಾರಿ: ನಾವು ಮೀಸಲಾತಿ ಜಾಸ್ತಿ ಮಾಡಿದ್ದೀವಿ. ತಾಕತ್ತಿದ್ದರೆ ನಮ್ಮನ್ನು ತಡೀರಿ ಎನ್ನುತ್ತ ಕಾಂಗ್ರೆಸ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಉಗ್ರ ಭಾಷಣ ಮಾಡಿದ ಸಚಿವ ಶ್ರೀರಾಮುಲು, ವೇದಿಕೆಯಲ್ಲಿ ತಲೆಗೆ ಪೇಟ ಕಟ್ಟಿಕೊಂಡು ಲಕ್ಷಾಂತರ ಜನರಲ್ಲಿ ಸಂಚಲನ ಮೂಡಿಸಿದರು.
ನವಶಕ್ತಿ ಸಮಾವೇಶದಲ್ಲಿ ನೆರೆದಿರುವ ಲಕ್ಷಾಂತರ ಜನರನ್ನು ಉದ್ದೇಶಿಸಿ ಶ್ರೀರಾಮುಲು ಆಗಮಿಸುತ್ತಿದ್ದಂತೆಯೇ ಇಡೀ ಕಾರ್ಯಕ್ರಮದಲ್ಲಿ ಘೋಷಣೆಗಳು, ಶಿಳ್ಳೆಗಳು ಮುಗಿಲು ಮುಟ್ಟಿದವು.
ನಮ್ಮ ಪಕ್ಷ ನಮ್ಮ ಮುಖ್ಯಮಂತ್ರಿಗಳು ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ ಎನ್ನುವುದು ಈ ಜನಶಕ್ತಿ, ಜನಸಾಗರವನ್ನು ನೋಡಿದರೆ ತಿಳಿಯುತ್ತದೆ. ರಾಮನಿಗೆ, ವಾಲ್ಮೀಕಿಗಳಿಗೆ ನ್ಯಾಯ ಕೊಟ್ಟ ಪಕ್ಷ ಬಿಜೆಪಿ. ಮುಂದೆ ಲಂಕಾದಹನ ಮಾಡಬೇಕಿದೆ.
ಸಮಾವೇಶಕ್ಕೆ 10 ಲಕ್ಷ ಜನರು ಆಗಮಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಪತನ ಮಾಡಲು ಈ ಸಮಾವೇಶದಿಂದಲೇ ಆರಂಭ ನೀಡಬೇಕಿದೆ. ಇದೊಂದು ಸಮಾವೇಶ ಮಾತ್ರವಲ್ಲ, ಸಾಧನ ಸಮಾವೇಶ. ವಾಲ್ಮೀಕಿ ಸಮುದಾಯ 2023ಕ್ಕೆ ಸಮುದಾಯ ಬಿಜೆಪಿ ಪರವಾಗಿ ನಿಲ್ಲಲ್ಲಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಜೋಡು ಗುಂಡಿಗೆ ಇವೆ. ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಎಂಟು ಗುಂಡಿಗೆ ಪ್ರದರ್ಶನವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿಣದ ವಾಜಪೇಯಿ ಆಗಿದ್ದಾರೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಮೀಸಲಾತಿ ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ ಶ್ರೀರಾಮುಲು, ನಮ್ಮ ಬಿಜೆಪಿಯಿಂದ ಮೀಸಲಾತಿ ಹೆಚ್ಚಿಸಿ ಬದ್ಧತೆ ತೋರಿದೆ. ಕೃಷ್ಷ ಸುದರ್ಶನ ಚಕ್ರ ಬಿಟ್ಟಂತೆ, ನಮ್ಮ ಸಿಎಂ ಅವರು ಸುದರ್ಶನ ಚಕ್ರ ಬಿಟ್ಟಿದ್ದಾರೆ. ಈ ಚಕ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಿರಚ್ಚೇಧವಾಗಲಿದೆ. ಇಂದು ತಾಕತ್ತಿದ್ದರೆ ಕಾಂಗ್ರೆಸ್ ಬರಲಿ ನೋಡೋಣ, ನಾವೇನು ಬಳೆ ತೊಟ್ಟಿಲ್ಲ. ಈಗ ಬನ್ನಿ ಅಪ್ಪ ನೋಡೋಣಾ ಎಂದು ಕಾಂಗ್ರೆಸ್ ಗೆ ಸವಾಲು ಹಾಕುತ್ತ, ಹೆಗಲ ಮೇಳಿದ್ದ ಶಾಲನ್ನು ತೆಗೆದುಕೊಂಡು ತಲೆಗೆ ಪೇಟ ಕಟ್ಟಿಕೊಂಡರು.
ಮೀಸಲಾತಿ ನಾವು ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಸಮಾಜದ ಅನ್ನದ ಋಣವನ್ನು ಮೀಸಲಾತಿ ಹೆಚ್ಚಿಸಿ ತೀರಿಸಿದ್ದೇವೆ. ನುಡಿದಂತೆ ನಡೆದ ಸರ್ಕಾರ ಬಿಜೆಪಿ ಸರ್ಕಾರ. ಶ್ರೀರಾಮುಲು ಬೇಡರ ಕುಲದಲ್ಲಿ ಹುಟ್ಟಿರಬಹುದು, ಎಲ್ಲ ಜಾತಿಯ ಜನರು ನನ್ನನ್ನು ಮಗ ಎಂದು ಸ್ವೀಕರಿಸಿದ್ದಾರೆ ಎಂದರು.
ಚುನಾವಣೆಯಲ್ಲಿ ಸುನಾಮಿಯಾಗಲಿದೆ ಎನ್ನುವ ಸಿದ್ದರಾಮಯ್ಯ ಅವರಿಗೆ ಉತ್ತರಿಸಿದ ಶ್ರೀರಾಮುಲು, ಈ ಸಮಾವೇಶದ ನಂತರ ಕಾಂಗ್ರೆಸ್ ಪಕ್ಷದ ಅಂತ್ಯ ಕಾಲ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷನ್ಮು ರಾಜ್ಯದಲ್ಲಿ ಬೇರು ಸಮೇತ ಕಿತ್ತಿ ಹಾಕುತ್ತಾರೆ ಜನರು. ಗುರುಭಕ್ತಿಗೆ ಬೆರಳು ಕೊಟ್ಟ ಸಮುದಾಯ ನಮ್ಮದು. ಭಕ್ತಿಗೆ ಕಣ್ಣು ಕಿತ್ತು ಕೊಟ್ಡ ಸಮುದಾಯ ವಾಲ್ಮೀಕಿ ಸಮುದಾಯ. ಬಿಜೆಪಿ ಬೆನ್ನಿಗೆ ಇಡೀ ಸಮುದಾಯ ನಿಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ವಾಲ್ಮೀಕಿ ಮಹರ್ಷಿಯನ್ನು ಅವಮಾನಿಸಿದ ಕಾಂಗ್ರೆಸ್ ನಿರ್ಮೂಲನೆಯಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ