ಬಳ್ಳಾರಿ: ನಾವೆಲ್ಲರೂ ಋಷಿ ಎಂದು ಪೂಜಿಸುವ ವಾಲ್ಮೀಕಿಯವರು ಬರೆದ ರಾಮಾಯಣವನ್ನು ನಿರಾಕರಿಸುವ ಮೂಲಕ ಕಾಂಗ್ರೆಸ್ ಅವಮಾನಿಸಿದ್ದು, ಅಕ್ಷರಶಃ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಬಹಳಷ್ಟು ದೇಶದಲ್ಲಿ ಕರೊನಾ ಕುರಿತು ಇನ್ನೂ ಕಷ್ಟದ ಪರಿಸ್ಥಿತಿ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಕ್ರಮಗಳಿಂದಾಗಿ ಭಾರತದಲ್ಲಿ ಸಾಕಷ್ಟು ನಿಯಂತ್ರಣದಲ್ಲಿದೆ. ಇದಕ್ಕಾಗಿ ನಾವೆಲ್ಲರೂ ಮೋದಿಯವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಬಿಜೆಪಿ ಬಂದರೆ ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ಆರೋಪಿಸಲಾಗಿತ್ತು. ಆದರೆ ಇಂದು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡುವ ಮೂಲಕ ಬದ್ಧತೆಯನ್ನು ತೋರಿಸಿದೆ. ಈ ವಿಚಾರವನ್ನು ನಾವು ಮರೆಯಬಾರದು.
ಮೀಸಲಾತಿ ಹೆಚ್ಚಳ ಮಾಡಿ ಬಿಜೆಪಿ ವಿಶ್ವಾಸಾರ್ಹತೆ ತೋರಿಸಿದೆ, ಕಾಂಗ್ರೆಸ್ ಪಕ್ಷಕ್ಕೆ ಎಸ್‌ಸಿ ಮತ್ತು ಎಸ್‌ಟಿ ಅಂದರೆ ಆಗುವುದಿಲ್ಲ. ಅಂಬೇಡ್ಕರ್‌ಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್. ಎಸ್‌ಸಿ ಮತ್ತು ಎಸ್‌ಟಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಮುಳುಗುವ ಹಡಗು, ಅದಕ್ಕೆ ಖರ್ಗೆಗೆ ನೇತೃತ್ವ ಕೊಟ್ಟರು. ಖರ್ಗೆ, ಪರಮೇಶ್ವರ್‌ಗೆ, ಮುನಿಯಪ್ಪಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರಲ್ಹಾದ ಜೋಶಿ, ಬಾದಾಮಿಯಲ್ಲಿ ಕೆಲಸ ಮಾಡದ ಭಯದಿಂದ ಸಿದ್ದು ಈ ಬಾರಿ ಕ್ಷೇತ್ರಕ್ಕೆ ಅಲೆದಾಡುತ್ತಿದ್ದಾರೆ. ರಾಹುಲ್ ಗಾಂಧಿ ದಿಕ್ಕೆಟ್ಟು ಅಲೆದಾಡುತ್ತಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್, ಕ್ಷುಲಕ ರಾಜನೀತಿಗೆ ಜನರನ್ನು ಬಳಸಿಕೊಂಡಿದ್ದಾರೆ. ವಾಲ್ಮೀಕಿ ರಾಮಯಣದ ಗ್ರಂಥವನ್ನು ಕಾಂಗ್ರೆಸ್ ಅಪಮಾನ ಮಾಡಿದೆ. ನಾವು ಋಷಿ ಎಂದು ಪೂಜಿಸುವ ವಾಲ್ಮೀಕಿಯವರನ್ನು ಅವಮಾನಿಸಿದೆ. ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಮನವಿ ಮಾಡಿದರು.
ಸುರಪುರ ಶಾಸಕ ರಾಜುಗೌಡ ಮಾತನಾಡಿ, ಕಸಿದ ಮೀಸಲಾತಿಯನ್ನು ಬಿಜೆಪಿ ನಮಗೆ ಕೊಟ್ಟಿದೆ. ದಲಿತರ ಪಕ್ಷ ಎಂದುಕೊಂಡ ಕಾಂಗ್ರೆಸ್ ಮೀಸಲಾತಿ ಕೊಡಲಿಲ್ಲ, ಆದರೆ ಬಿಜೆಪಿ ಸರ್ಕಾರ ಕೊಟ್ಟಿದೆ. ಎಲ್ಲ ಜಾತಿ ಜನಾಂಗವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಬಿಜೆಪಿ. ಬಿಜೆಪಿ ಪಕ್ಷ ಮೇಲ್ವರ್ಗದ ಪಕ್ಷ ಎನ್ನುತ್ತಾರೆ, ಆದರೆ ದಲಿತರ ಮೀಸಲಾತಿ ಹೆಚ್ಚಿಸಿ, ಭಾವನೆಗೆ ಬೆಲೆ ಕೊಟ್ಟ ಪಕ್ಷ ಬಿಜೆಪಿ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ದೀನದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಆಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಶವ ಸಂಸ್ಕರಾಕ್ಕೆ ಜಾಗ ಕೊಡದ ಕಾಂಗ್ರೆಸ್, ಅವಮಾನ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಹೋಗುತ್ತದೆ ಎಂದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ಕೇಸರಿ, ಕುಂಕುಮದ ಅಲೆಯಲ್ಲಿ ಕೊಚ್ಚಿ ಹೋಗಲಿದೆ ಕಾಂಗ್ರೆಸ್: ಸಿ.ಟಿ. ರವಿ ಭಾಷಣ