ವಿಧಾನಸಭೆ: ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಉಂಟಾದ ಸಾವುಗಳು ಅಲ್ಲಿನ ವಿದ್ಯುತ್ ಕಡಿತದಿಂದ ಆಗಿದೆ ಎಂಬ ಕುರಿತು ಚರ್ಚೆ ನಡೆಯುತ್ತಿರುವಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಸಿದ ಪದಪ್ರಯೋಗ ಕೆಲಹೊತ್ತು ವಾಗ್ವಾದಕ್ಕೆ ಕಾರಣವಾಯಿತು.
ಹಳೆ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ವೆಂಟಿಲೇಟರ್ ಗೆ ವಿದ್ಯುತ್ ಸಂಪರ್ಕ ಕಡಿತವಾಗಿ ಮೃತಪಟ್ಟಿದ್ದಾರೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರೇಟರ್ ಅನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಿದ್ದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ವಿದ್ಯುತ್ ವೈಫಲ್ಯವಾಗಿ ಮೃತಪಟ್ಟಿದ್ದಾರೆ. ಇದು ಸರ್ಕಾರವೇ ರೂಪಿಸಿರುವ ಸಂಚು, ಕೊಲೆ. ಇದಕ್ಕೆ ಹೊಣೆ ಹೊತ್ತು ಕೂಡಲೆ ಪರಿಹಾರ ನೀಡಬೇಕು ಎಂದರು.
ನಂತರ ಮಾತನಾಡಲು ಆರಂಭಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದರಾಮಯ್ಯ ಅವರಿಂತ ಈ ರೀತಿ ಭಾಷೆಯ ಬಳಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು. ಈ ಹಂತದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಗಳು ನಡೆದವು. ಸದನ ನಿಯಂತ್ರಣಕ್ಕೇ ಬಾರದಿದ್ದಾಗ ಸ್ಪೀಕರ್ ಕಾಗೇರಿಯವರು ಎಲ್ಲರ ಮೈಕ್‌ಗಳನ್ನೂ ಆಫ್ ಮಾಡಿಸಿ ಎಚ್ಚರಿಕೆ ನೀಡಿದರು. ಈಗ ಸರ್ಕಾರದ ಕಡೆಯಿಂದ ಸಚಿವ ಶ್ರೀರಾಮುಲು ಉತ್ತರಿಸುತ್ತಾರೆ ಎಂದರು.
ಇದನ್ನೂ ಓದಿ | ಬಳ್ಳಾರಿ ವಿಮ್ಸ್ ಆಸ್ಪತ್ರೆ ವಿದ್ಯುತ್ ಸಮಸ್ಯೆ: ಇಬ್ಬರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚನೆ
ಶ್ರೀರಾಮುಲು ಮಾತನಾಡಿ, ಸೆಪ್ಟೆಂಬರ್ 11ನೇ ತಾರೀಖು ಮುಲಾ ಹುಸೇನ್ ಎಂಬ 35 ವರ್ಷದ ವ್ಯಕ್ತಿ ದಾಖಲಾಗಿದ್ದರು. ಆಗ ಕಿಡ್ನಿ ವಿಫಲವಾಗಿತ್ತು. ಅವರಿಗೆ ಬೇರೆ ಆರೋಗ್ಯ ಸಮಸ್ಯೆಗಳೂ ಇದ್ದವು. ಇದೆಲ್ಲದರ ನಂತರ ಸೆಪ್ಟೆಂಬರ್ 14ರಂದು ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಸರ್ಕಾರವೇ ಕೊಲೆ ಮಾಡಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಅವರೂ ಈ ಹಿಂದೆ ಸರ್ಕಾರ ನಡೆಸಿದ್ದಾರೆ, ಆಗಲೂ ಇಂತಹ ಸಾವುಗಳಾಗಿವೆ. ಆದರೆ ನಾವು ಈ ರೀತಿ ಮಾತನಾಡಿಲ್ಲ. ಕರೆಂಟ್ ಹೋಗಿದ್ದರಿಂದ ಈ ಸಾವು ಸಂಭವಿಸಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ನಿಧನರಾದ ಚಿಟ್ಟಮ್ಮ ಅವರಿಗೆ ಹಾವು ಕಚ್ಚಿತ್ತು, ಚಂದ್ರಮ್ಮ ಅವರಿಗೆ ಸೆಪ್ಟಿಕ್ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಅಗತ್ಯ ಬ್ಯಾಕ್‌ಅಪ್ ಇತ್ತು, ಸುಮಾರು ಒಂದೂವರೆ ಗಂಟೆ ಯುಪಿಎಸ್ ಚಾಲನೆಗೊಂಡಿತ್ತು ಎಂದರು.
ಸಿದ್ದರಾಮಯ್ಯ ಮಾತನಾಡಿ, ಬೆಳಗ್ಗೆ 8.20ರಿಂದ 10.30ರವರೆಗೆ ಕರೆಂಟ್ ಹೋಗಿತ್ತು. ಇದೇ ಸಮಯದಲ್ಲಿ ಮೂವರು ನಿಧನರಾಗಿದ್ದಾರೆ. ವೈದ್ಯಾಧಿಕಾರಿ ಹೇಳಿದ್ದೇ ಸತ್ಯ ಅಲ್ಲ, ಸರ್ಕಾರ ತನಿಖೆ ನಡೆಸಬೇಕು. ಪರಿಹಾರ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ತನಿಖೆ ನಡೆಸಿ ಸದನಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದಿಂದಲೇ, ಆಸ್ಪತ್ರೆಯಿಂದಲೇ ತಪ್ಪಾಗಿದೆ ಎಂಬುದು ಕಂಡುಬಂದರೆ ಪರಿಹಾರ ನೀಡುತ್ತೇವೆ ಎಂದರು.
ಇದನ್ನೂ ಓದಿ | ಇಬ್ಬರು ರೋಗಿಗಳ ಸಾವಿಗೆ ತೀವ್ರ ಅನಾರೋಗ್ಯವೇ ಕಾರಣ ಎಂದು ವಿಮ್ಸ್ ನಿರ್ದೇಶಕ ಸ್ಪಷ್ಟನೆ