ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿ, ಅದರ ಕಲಾಕೃತಿಗಳನ್ನು ಮಾರಾಟ ಮಾಡುತ್ತಿರುವ ಬೆಂಗಳೂರು ಮೂಲದ ಪೇಂಟಿಂಗ್ ಸೆಲ್ಲರ್ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇಂಕೋಲಾಗಿ (Inkologie) ಎಂಬ ಸಂಸ್ಥೆಯು ಅಮೆಜಾನ್‌ನಲ್ಲಿ (Amazon) ಮಗ್‌ಗಳು, ಕಾರ್ಡ್ಸ್ ಹಾಗೂ ಪೇಂಟಿಂಗ್ಸ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಇಂಕೋಲಾಗಿ ಕಂಪನಿಯು ಶ್ರೀಕೃಷ್ಣನ ಅಶ್ಲೀಲ ಪೇಂಟಿಂಗ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳು ಅಮೆಜಾನ್‌ನಲ್ಲಿ ಲಭ್ಯವಾಗಿವೆ. ಹಾಗಾಗಿ, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಾ.ಬನಾರಸಿ ಕನ್ಯಾ ಎಂಬುವರು ಟ್ವೀಟರ್‌ನಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. “ನೀವು ಏನು ಮಾರಾಟ ಮಾಡುತ್ತಿದ್ದೀರಿ ಎಂಬುದನ್ನು ಅಮೆಜಾನ್ ಸಿಬ್ಬಂದಿಯು ಮೊದಲು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಉತ್ಪನ್ನಗಳನ್ನು ಒಬ್ಬರೂ ಖರೀದಿಸುವುದಿಲ್ಲ” ಎಂದು ಹೇಳಿದ್ದಾರೆ.
ಹಾಗೆಯೇ, ಕನ್ಯಾ ಅವರು ಟ್ವಿಟರ್‌ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi Surya) ಹಾಗೂ ಬೆಂಗಳೂರು ಸಿಟಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. “ಪೇಂಟಿಂಗ್‌ಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಇವೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ” ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.