ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೊ ಯಾತ್ರೆ ಕುರಿತ ವಿಡಿಯೋದಲ್ಲಿ ಕೆಜಿಎಫ್-2 ಚಲನಚಿತ್ರದ ಹಾಡನ್ನು ಕಾನೂನು ಬಾಹಿರವಾಗಿ ಬಳಸಿಕೊಂಡ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಭಾರತ್ ಜೋಡೊ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲು ಬೆಂಗಳೂರಿನ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಈ ಕುರಿತು, ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಎಂಆರ್‌ಟಿ ಮ್ಯೂಸಿಕ್ ಪ್ರಕರಣ ದಾಖಲಿಸಿತ್ತು. ಈ ದೂರಿನ ಜತೆಗೆ, ರಾಹುಲ್ ಗಾಂಧಿ, ಜೈರಾಮ್ ರಮೇಶ್ ಹಾಗೂ ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧವೂ ಸಂಸ್ಥೆ ಎಫ್‌ಐಆರ್ ದಾಖಲಿಸಿದೆ.
ವಾದಗಳನ್ನು ಆಲಿಸಿದ ವಾಣಿಜ್ಯ ನ್ಯಾಯಾಲಯದ ಎದುರು, ಮೂಲ ಸಂಗೀತ ಹಾಗೂ ಕಾಂಗ್ರೆಸ್ ಅಳವಡಿಸಿಕೊಂಡಿರುವ ವಿಡಿಯೋವನ್ನು ಒಂದರ ಪಕ್ಕ ಒಂದರಂತೆ ಪ್ರದರ್ಶನ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಹಕ್ಕು ಸ್ವಾಮ್ಯದ ಉಲ್ಲಂಘನೆ ಎಂದು ಕಾಣುತ್ತಿದೆ. ಈ ಕುರಿತು ಸ್ಥಳೀಯ ಕಮಿಷನರ್ ಅವರನ್ನು ನೇಮಕ ಮಾಡಿದ ನ್ಯಾಯಾಲಯ, ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿ ನ್ಯಾಯಾಲಯ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲು ಸೂಚಿಸಿತು.
ಮುಂದಿನ 24 ಗಂಟೆಯಲ್ಲಿ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿ ನ.21ರವರೆಗೆ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ | Bharat jodo | ಕೆಜಿಎಫ್-2 ಸುಲ್ತಾನ ಹಾಡಿನ ಸಂಗೀತ ಬಳಕೆ; ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಎಫ್‌ಐಆರ್