Site icon Vistara News

Bengaluru Crime: ಕ್ರೈಂನಲ್ಲಿ ದಕ್ಷಿಣ ಭಾರತದಲ್ಲೇ ಬೆಂಗಳೂರು ನಂ.1; ಏನಿದು ಜಾಗತಿಕ ವರದಿ?

Bengaluru Crime

Bengaluru Is Number 1 Crime City In South India: Says Numbeo Report

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನನಿತ್ಯ ಬೆಳಕಿಗೆ ಬರುವ ಅಪರಾಧ ಪ್ರಕರಣಗಳು ಜನರನ್ನು ಆತಂಕಕ್ಕೀಡು ಮಾಡುತ್ತವೆ. ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು (Bengaluru Crime) ನಿತ್ಯ ಸುದ್ದಿಯಾಗುತ್ತಲೇ ಇರುತ್ತವೆ. ಇದರ ಬೆನ್ನಲ್ಲೇ, ದಕ್ಷಿಣ ಭಾರತದಲ್ಲಿಯೇ (South India) ಬೆಂಗಳೂರು ನಗರವು ನಂಬರ್‌ 1 ಕ್ರೈ ಸಿಟಿ ಎಂದು ನಂಬಿಯೋ (Numbeo) ಎಂಬ ಜಾಗತಿಕ ಸಂಸ್ಥೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಅಷ್ಟೇ ಅಲ್ಲ, ವಿಶ್ವದ 200 ನಗರಗಳಲ್ಲಿ ಬೆಂಗಳೂರು 102ನೇ ಸ್ಥಾನ ಪಡೆದುಕೊಂಡಿದೆ. ಇದರಿಂದಾಗಿ ಸಿಲಿಕಾನ್‌ ಸಿಟಿಗೆ ಮತ್ತೊಂದು ಕಳಂಕ ಅಂಟಿದಂತಾಗಿದೆ.

ಸರ್ಬಿಯಾ ಮೂಲದ ಆನ್‌ಲೈನ್‌ ಡೇಟಾ ಬೇಸ್‌ ಸಂಸ್ಥೆಯಾದ ನಂಬಿಯೊ ವರದಿಯು ಈಗ ಬೆಂಗಳೂರು ನಗರವನ್ನು ಮತ್ತಷ್ಟು ಆತಂಕ್ಕೆ ದೂಡಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಪರಾಧಗಳು ನಡೆಯುವ ಕುರಿತು ನಂಬಿಯೋ ವರದಿ ಬಿಡುಗಡೆ ಮಾಡಿದೆ. ವೆನಿಜುವೆಲಾದ ಕ್ಯಾರ್‌ಕಸ್‌ ನಗರವು ಅತಿ ಹೆಚ್ಚು ಅಪರಾಧ ಪ್ರಕರಣ ನಡೆಯುವ ನಗರವಾದರೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಬೆಂಗಳೂರು ನಗರವು ದಕ್ಷಿಣ ಭಾರತದಲ್ಲೇ ನಂಬರ್‌ 1 ನಗರ ಎನಿಸಿದೆ.

ಭಾರತದ ಯಾವ ನಗರಗಳಿಗೆ ಸ್ಥಾನ?

ಸುಮಾರು 200 ನಗರಗಳ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಿ ನಂಬಿಯೋ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ನಗರಗಳು ಕೂಡ ಸೇರಿಕೊಂಡಿವೆ. ದೆಹಲಿ 70ನೇ ಸ್ಥಾನ ಪಡೆದುಕೊಂಡರೆ, ನೊಯ್ಡಾ 87ನೇ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಗುರುಗ್ರಾಮ 95, ಬೆಂಗಳೂರು 102, ಇಂದೋರ್‌ 136, ಕೋಲ್ಕೊತಾ 159, ಮುಂಬೈ 169, ಹೈದರಾಬಾದ್‌ 174, ಚಂಡೀಗಢ 177 ಹಾಗೂ ಪುಣೆ 184 ಸ್ಥಾನ ಪಡೆದುಕೊಂಡಿವೆ.

ಹೆಚ್ಚಿದ ರೋಡ್‌ ರೇಜ್‌ ಪ್ರಕರಣಗಳು

ರಾಜಧಾನಿಯ ಬೀದಿಗಳಲ್ಲಿ ಬೆಚ್ಚಿ ಬೀಳಿಸುವಂಥ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚುತ್ತಿವೆ. ಒಂಟಿಯಾಗಿ ಅಥವಾ ರಾತ್ರಿ ಡ್ರೈವ್‌ ಮಾಡುವವರನ್ನು ಅಥವಾ ಕ್ಯಾಬ್‌ ಚಾಲಕರನ್ನು ಟಾರ್ಗೆಟ್‌ ಮಾಡಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ ಮಾಡುವುದು, ವಾಹನಕ್ಕೆ ಹಾನಿ ಮಾಡುವುದು ನಡೆಯುತ್ತಿದೆ. ಒಂದೇ ವಾರದಲ್ಲಿ ಮೂರನೇ ಅಂಥ ಪ್ರಕರಣ ವರದಿಯಾಗಿದೆ.

ಕ್ಯಾಬ್‌ ಅಡ್ಡಗಟ್ಟಿ ಅದರ ಚಾಲಕನಿಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ಥಳಿಸಿದ್ದಾರೆ. ಈ ಇಬ್ಬರೂ ʼಎಡಬದಿಗೆ ಹೋಗುತ್ತಿದ್ದಾಗ ಜಾಗ ಯಾಕೆ ಬಿಡಲಿಲ್ಲ, ನಿನಗ್ಯಾರು ಲೈಸೆನ್ಸ್‌ ಕೊಟ್ಟಿದ್ದುʼ ಎಂದು ತಗಾದೆ ತೆಗೆದು ಚಾಲಕನಿಗೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಂತಹ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಇದನ್ನೂ ಓದಿ: Money Guide: ಸೈಬರ್‌ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್‌ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ

Exit mobile version