Site icon Vistara News

Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ

Signing of MoU between NSDC and VTU for future skill development programmes

ಬೆಂಗಳೂರು: ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನು ಉಂಟು ಮಾಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ -ಎನ್‌ಎಸ್‌ಡಿಸಿ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವು ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿವೆ. ಅತ್ಯಾಧುನಿಕ ಕೌಶಲ್ಯಗಳನ್ನು ಒದಗಿಸುವ ಮೂಲಕ ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಸಹಭಾಗಿತ್ವವು (Bengaluru News) ಹೊಂದಿದೆ.

21ನೇ ಶತಮಾನದ ಔದ್ಯೋಗಿಕ ಕ್ಷೇತ್ರದ ಬೇಡಿಕೆಗಳನ್ನು ಪೂರೈಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉನ್ನತ ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸಹಯೋಗವು ಮಹತ್ವದ ಹೆಜ್ಜೆಯಾಗಿದೆ. ಉದ್ಯಮಗಳ ಅಗತ್ಯತೆಗಳು ಮತ್ತು ತಾಂತ್ರಿಕ ಪ್ರಗತಿಗಳಿಗೆ ಅನುಗುಣವಾಗಿ ವಿವಿಧ ಶ್ರೇಣಿಯ ನವೀನ ಕಾರ್ಯಕ್ರಮಗಳನ್ನು ಯೋಜಿಸುವ ಮೂಲಕ ಎನ್‌ಎಸ್‌ಡಿಸಿ ಶ್ರೇಷ್ಠತೆಯ ಕೇಂದ್ರವಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ.

ಈ ಸಹಭಾಗಿತ್ವದ ಮೂಲಕ ವಿಟಿಯು ಜತೆಗೆ ಸಂಯೋಜಿತವಾಗಿರುವ 150ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸ್ಕಿಲ್ ಹಬ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಆಯ್ದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಓಇ) ಅನ್ನು ಸ್ಥಾಪಿಸಲಾಗುತ್ತದೆ. ಈ ಉಪಕ್ರಮಗಳ ಮೂಲಕ, ಸ್ಕಿಲ್ ಇಂಡಿಯಾ ಮಿಷನ್‌ನ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ಭವಿಷ್ಯಕ್ಕೆ ಬೇಕಾಗುವ ಕೌಶಲ್ಯಗಳನ್ನು ಕಲಿಸುವ ಕಾರ್ಯಕ್ರಮಗಳಿಗೆ ಪ್ರತಿ ಕಾಲೇಜಿನ 240 ವಿದ್ಯಾರ್ಥಿಗಳನ್ನು ದಾಖಲಿಸುವ ಉದ್ದೇಶ ಹೊಂದಲಾಗಿದೆ.

ಇದನ್ನೂ ಓದಿ: HD Kumaraswamy: ವೈಜಾಗ್ ಸ್ಟೀಲ್ಸ್ ಕಾರ್ಖಾನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ದೇಶದ ಯುವಕರು ಉದ್ಯಮದಲ್ಲಿರುವ ತಜ್ಞರಿಂದ ನೇರ ಮಾರ್ಗದರ್ಶನ ಮತ್ತು ತರಬೇತಿ ಪಡೆಯಲು ಇದು ಒಂದು ಸುವರ್ಣಾವಕಾಶವಾಗಿದೆ. ಎನ್‌ಎಸ್‌ಡಿಸಿ ಈ ಕೋರ್ಸ್‌ಗಳಿಗೆ ಬೇಕಾಗಿರುವ ಅಗತ್ಯ ನೆರವು ನೀಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಜತೆಗೆ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸುವುದರ ಕುರಿತು ನಿಗಾ ವಹಿಸುತ್ತದೆ.

ಈ ಕುರಿತು ಎನ್‌ಎಸ್‌ಡಿಸಿ ಇಂಟರ್‌ನ್ಯಾಷನಲ್‌ನ ಎನ್‌ಎಸ್‌ಡಿ ಕ್ಯಾಂಡ್ ಎಂಡಿ ಸಿಇಒ ವೇದ್ ಮಣಿ ತಿವಾರಿ ಮಾತನಾಡಿ, “ವಿಟಿಯು ಜತೆಗಿನ ಈ ಪಾಲುದಾರಿಕೆಯು ಭಾರತದ ಯುವಜನತೆಯನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ನಮ್ಮ ಮಿಷನ್‌ನ ಮಹತ್ವದ ಹೆಜ್ಜೆಯಾಗಿದೆ. ಶೈಕ್ಷಣಿಕ ಚೌಕಟ್ಟಿನಲ್ಲಿ ಸುಧಾರಿತ ಕೌಶಲ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಯುವ ಪ್ರತಿಭೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಸಾಧನೆ ಮಾಡಲು ಸಿದ್ಧರಾಗಿದ್ದಾರೆ ಎಂಬುದನ್ನು ಈ ಮೂಲಕ ಸಾಧ್ಯವಾಗಿಸುತ್ತೇವೆ” ಎಂದು ತಿಳಿಸಿದ್ದಾರೆ.

“ಈ ಸಹಯೋಗವು ಭಾರತದ ಯುವಕರ ಉದ್ಯೋಗ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜತೆಗೆ ನಾವೀನ್ಯತೆ ಮತ್ತು ಶ್ರೇಷ್ಠತೆಯ ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ತಂತ್ರಜ್ಞಾನ ಮತ್ತು ಉದ್ಯಮದ ಭವಿಷ್ಯವನ್ನು ನಿರ್ಧಾರ ಮಾಡುತ್ತಿರುವ ಎಐ, ಯಂತ್ರ ಕಲಿಕೆ ಮತ್ತು ರೊಬೊಟಿಕ್ಸ್‌ ನಂತಹ ಕ್ಷೇತ್ರಗಳಲ್ಲಿ ಮುಂದುವರಿಯಲು ಈ ಕಾರ್ಯಕ್ರಮ ಅವರಿಗೆ ಅನುವು ಮಾಡಿ ಕೊಡುತ್ತದೆ. ಒಟ್ಟಾಗಿ, ನಾವು ಸನ್ನದ್ಧರಾದ ಕಾರ್ಯಪಡೆಯನ್ನು ಸೃಷ್ಟಿಸಲಿದ್ದೇವೆ ಮತ್ತು ನಾವೀನ್ಯತೆಯ ಹೊಸ ಯುಗಕ್ಕೆ ವೇದಿಕೆಯನ್ನು ಸಿದ್ಧಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಪಿಎಂಕೆವಿವೈ ಫ್ಯೂಚರ್ ಸ್ಕಿಲ್ಸ್ ಪ್ರೋಗ್ರಾಮ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮೆಂಟರ್ ಶಿಪ್ (ಮಾರ್ಗದರ್ಶನ) ಪ್ರಯೋಜನ ಪಡೆಯುತ್ತಾರೆ. ತರಬೇತಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಎಸ್‌ಎಸ್‌ಸಿ) ನಾಸ್ಕಾಮ್ (NASSCOM) ನಿಂದ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ ಮತ್ತು ಉದ್ಯಮದ ತಜ್ಞರಿಗೆ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸುತ್ತಾರೆ. ಅಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ವಿಟಿಯುನಿಂದ ಗುರುತಿಸಲ್ಪಟ್ಟಿರುವ ನಾಸ್ಕಾಮ್ (NASSCOM) ನಿಂದ ಇಂಟರ್ನ್‌ಶಿಪ್ ಸರ್ಟಿಫಿಕೇಟ್ ಅನ್ನು ಪಡೆಯುತ್ತಾರೆ. ಈ ಮೂಲಕ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಇಂಟರ್ನ್‌ಶಿಪ್ ಅಥವಾ ಪ್ರಾಜೆಕ್ಟ್‌ಗಳನ್ನು ಪೂರೈಸುವ ಅವಕಾಶ ಒದಗಿಬರುತ್ತದೆ.

ಈ ಕುರಿತು ವಿಟಿಯು ಬೆಳಗಾವಿಯ ಉಪಕುಲಪತಿ ಡಾ. ವಿದ್ಯಾ ಶಂಕರ್ ಎಸ್. ಮಾತನಾಡಿ, “ಎನ್‌ಎಸ್‌ಡಿಸಿ ಜತೆಗಿನ ಈ ಪಾಲುದಾರಿಕೆಯು ನಮ್ಮ ವಿದ್ಯಾರ್ಥಿಗಳಿಗೆ ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಒದಗಿಸಿ ಸಶಕ್ತಗೊಳಿಸುತ್ತದೆ. ಆ ಮೂಲಕ ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಾಗುವಂತೆ ನೋಡಿಕೊಳ್ಳಲಾಗುತ್ತದೆ. ಒಟ್ಟಾಗಿ, ನಾವು ನಮ್ಮ ವಿದ್ಯಾರ್ಥಿಗಳು ಎಐ, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮಾರ್ಗಗಳನ್ನು ಹಾಕಿಕೊಡುತ್ತಿದ್ದೇವೆ. ಆ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.

ಈ ಸಹಯೋಗದ ಭಾಗವಾಗಿ ವಿಟಿಯು ವಿದ್ಯಾರ್ಥಿಗಳು ‘ಹ್ಯಾಕ್ ಟು ಹೈರ್’ ಹ್ಯಾಕಥಾನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. ಆ ಹ್ಯಾಕಥಾನ್‌ನಲ್ಲಿ ಅವರು ಎಐ ಆಧಾರಿತ ಸಮಸ್ಯೆಗಳನ್ನು ನಿಭಾಯಿಸಬಹುದಾಗಿದೆ ಮತ್ತು ಭಾರತದ ಕೆಲವು ನವೀನ ಸ್ಟಾರ್ಟ್‌ಅಪ್‌ಗಳ ಜತೆಗೆ ಉದ್ಯೋಗಾವಕಾಶ ಪಡೆಯಲು ಯತ್ನಿಸಬಹುದಾಗಿದೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12 ರಿಂದ 3 ದಿನ “ಯುವ ಸಂಭ್ರಮ”

ಎನ್‌ಎಸ್‌ಡಿಸಿ ಮತ್ತು ವಿಟಿಯು ಮಧ್ಯದ ಈ ಪಾಲುದಾರಿಕೆಯು ಹೆಚ್ಚು ಸಂಯೋಜಿತ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಕಡೆಗೆ ಪರಿವರ್ತಕ ಹೆಜ್ಜೆಯಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಿಗಳ ಸನ್ನದ್ಧತೆಯ ವಿಚಾರದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ.

Exit mobile version