Site icon Vistara News

Road Accident: ತಿರುವಣ್ಣಾಮಲೈನಲ್ಲಿ ಬಸ್‌- ಟಾಟಾ ಸುಮೋ ಡಿಕ್ಕಿ; 7 ಮಂದಿ ದುರ್ಮರಣ, 14 ಜನಕ್ಕೆ ಗಾಯ

Bus and Car Accident

ತಿರುವಣ್ಣಾಮಲೈ: ಸರ್ಕಾರಿ ಬಸ್ ಮತ್ತು ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.

ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನ ಎಂಟು ಜನರು ಟಾಟಾ ಸುಮೋದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಸರ್ಕಾರಿ ಬಸ್ ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿತ್ತು. ಕರುಮಂಕುಲಂ ಪ್ರದೇಶದಲ್ಲಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಇದರಿಂದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 14 ಮಂದಿಯನ್ನು ಪೊಲೀಸರು ರಕ್ಷಿಸಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ | Mangalore News: ಭೂಗತ ಪಾತಕಿ ರವಿ ಪೂಜಾರಿ ಸಹಚರನ ಸೆರೆ

ತಿರುವಣ್ಣಾಮಲೈ ಜಿಲ್ಲಾ ಪೊಲೀಸರು ಟಾಟಾ ಸುಮೋದಲ್ಲಿ ಬಂದ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಮೃತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ಭೂಗತ ಪಾತಕಿ ರವಿ ಪೂಜಾರಿ ಸಹಚರ ಸೆರೆ

Ravi Pujaris associate

ಉಳ್ಳಾಲ: ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಸಹಚರ, ಜಿಲ್ಲೆಯ ಹಲವು ಠಾಣೆಗಳಲ್ಲಿ ಬಂಧನ ವಾರಂಟ್ ಎದುರಿಸುತ್ತಿದ್ದ ನಟೋರಿಯಸ್ ಶಾರ್ಪ್ ಶೂಟರ್ ಕೇರಳದ ಮಂಜೇಶ್ವರ, ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ದಕ್ಷಿಣ ಉಪ ವಿಭಾಗ (Mangalore News) ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಬಂಧಿಸಿದೆ.

ನಟೋರಿಯಸ್ ಶಾರ್ಪ್ ಶೂಟರ್ ಹನೀಫ್ ಯಾನೆ ಅಲಿ ಮುನ್ನಾ ಭೂಗತ ಪಾತಕಿ ರವಿ ಪೂಜಾರಿಯ ಕೃತ್ಯಗಳಿಗೆ ಕರಾವಳಿಯ ಪ್ರತಿನಿಧಿಯಾಗಿದ್ದು, ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಬಂಧನ ವಾರಂಟ್ ಎದುರಿಸುತ್ತಿದ್ದ. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ, ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

2010 ಮತ್ತು 2013 ಕಾಸರಗೋಡು ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ, ಮಂಜೇಶ್ವರದಲ್ಲಿ ಕಳ್ಳತನ, ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿತ್ತು. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಸಿಲ್ಕ್ಸ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್‌ನಲ್ಲಿ ಈತ ನಡೆಸಿದ ಶೂಟೌಟ್ ಪ್ರಕರಣ ಜಿಲ್ಲೆಯಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ | Murder Attempt: ರೇವಣ್ಣ ಆಪ್ತನ ಕೊಲೆ ಯತ್ನ ಪ್ರಕರಣ; ಆರೋಪಿ ಇನ್ಸ್‌ಪೆಕ್ಟರ್‌ಗೆ ಅಂಡರ್ ವರ್ಲ್ಡ್ ಲಿಂಕ್?

ಕರ್ನಾಟಕದಲ್ಲಿ ರವಿ ಪೂಜಾರಿಯ ಅಂಡರ್ ವರ್ಲ್ಡ್ ಮಾಫಿಯಾವನ್ನು ಅಲಿ ಮುನ್ನಾ ಮತ್ತು ಮನೀಷ್ ಕಂಟ್ರೋಲ್ ಮಾಡುತ್ತಿದ್ದರು. ಕರಾವಳಿಯ ಭೂಗತ ವ್ಯವಹಾರವನ್ನು ಅಲಿ ಮುನ್ನಾನೇ ನಿರ್ವಹಿಸುತ್ತಿದ್ದ. ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೋಡಿಕೆರೆ ಮನೋಜ್ ಗ್ಯಾಂಗಿನಿಂದ ಬೆಂಗಳೂರಲ್ಲಿ ಮನೀಷ್ ಕೊಲೆಯಾಗಿತ್ತು. ಆಪ್ತ ಸಹಚರ ಮನೀಷ್ ಕೊಲೆಯಾದ ನಂತರ ಅಲಿ ಮುನ್ನ ಕಂಗಾಲಾಗಿ ಮುಂಬೈ, ಬೆಂಗಳೂರಲ್ಲೇ ತಲೆಮರೆಸಿ ಜೀವಿಸುತ್ತಿದ್ದ. ಈಗಲೂ ಹಫ್ತಾ ವಸೂಲಿಯಲ್ಲಿ ತೊಡಗಿಸಿಕೊಂಡಿದ್ದ ಅಲಿ ಮುನ್ನಾನನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಮತ್ತು ಕೊಣಾಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Exit mobile version