ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಡಿ. ಲಕ್ಷ್ಮೀನಾರಾಯಣ ಹಾಗೂ ಜೆಡಿಎಸ್‌ನ ಅನಿಲ್ ಕುಮಾರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ನೇಕಾರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದೇ ಸಮುದಾಯಕ್ಕೆ ಸೇರಿದ ಲಕ್ಷ್ಮೀನಾರಾಯಣ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಂದೇಶ ನೀಡುವ ಪ್ರಯತ್ನ ನಡೆಯಿತು.
ಈ ವೇಳೆಯಲ್ಲಿ ವೇದಿಕೆಗೆ ಆಗಮಿಸಿದ ಲಕ್ಷ್ಮೀನಾರಾಯಣ ಅವರ ಕುತ್ತಿಗೆಗೆ ಬಿಜೆಪಿ ವಸ್ತ್ರ ತೊಡಿಸಿದ ಸಿಎಂ ಬೊಮ್ಮಾಯಿ, ಎರಡು ಗಂಟು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಅನಿಲ್ ಕುಮಾರ್ ಅವರನ್ನೂ ಸೇರ್ಪಡೆ ಮಾಡಿಕೊಳ್ಳಲಾಯಿತು.
ಸೇರ್ಪಡೆ ನಂತರ ಫೋಟೊ ತೆಗೆಸಿಕೊಳ್ಳುವ ಭರದಲ್ಲಿ ಎಲ್ಲರೂ, ವೇದಿಕೆಯಲ್ಲಿದ್ದ ಸ್ಮೃತಿ ಇರಾನಿ ಅವರನ್ನೇ ಹಿಂದಕ್ಕೆ ಸರಿಸಿದರು. ನಗುತ್ತಲೇ ಸುಮ್ಮನೆ ನಿಂತಿದ್ದ ಸ್ಮೃತಿ ಇರಾನಿ ಅವರನ್ನು ಹತ್ತಿರಕ್ಕೆ ಆಗಮಿಸುವಂತೆ, ಸ್ಮೃತಿ ಇರಾನಿ ಅವರ ನಂತರ ನಿಲ್ಲುವಂತೆ ಅನಿಲ್ ಕುಮಾರ್ ಅವರಿಗೆ ಸಿಎಂ ಬೊಮ್ಮಾಯಿ ತಿಳಿಸಿದರು. ಯಡಿಯೂರಪ್ಪ ಹತ್ತಿರಕ್ಕೆ ಸ್ಮೃತಿ ಇರಾನಿ ಆಗಮಿಸಲು ಪ್ರಯತ್ನಿಸಿದರಾದರೂ ಅನಿಲ್ ಕುಮಾರ್ ತಮಗೆ ಅರಿವಿಲ್ಲದಂತೆಯೇ ಸ್ಮೃತಿ ಇರಾನಿ ಅವರನ್ನು ಬದಿಗೆ ಸರಿಸಿದರು.
ಈ ಸಂದರ್ಭದಲ್ಲಿ ಸ್ಮೃತಿ ಇರಾನಿ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಎಲ್ಲರೂ ಮುಗಳ್ನಗುತ್ತ ಕಾರ್ಯಕ್ರಮವನ್ನು ಮುಂದುವರಿಸಿದರು. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕೆಲಕಾಲ ಸ್ಮೃತಿ ಇರಾನಿ ಹಿಂದಕ್ಕೆ ತಳ್ಳಲ್ಪಟ್ಟರು. !
ಇದನ್ನೂ ಓದಿ | BJP ಜನಸ್ಪಂದನ | ವಿಪಕ್ಷ ನಾಯಕರ ಮೇಲೆ CBI, IT, ED, ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಮುನ್ಸೂಚನೆ?