ದೊಡ್ಡಬಳ್ಳಾಪುರ: ಬಿಜೆಪಿ ಅಸ್ತಿತ್ವವೇ ಇಲ್ಲ ಎನ್ನಲಾಗುವ ʼಡ್ರೈʼ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ಜನರನ್ನು ಸೇರಿಸಿದ ಮೂವರು ʼವಲಸಿಗʼ ಸಚಿವರಿಗೆ ಬಿಜೆಪಿ ನಾಯಕರು ಶಹಬ್ಬಾಸ್‌ಗಿರಿ ನೀಡಿದ್ದಾರೆ.
ʻನಾನು ಕರಾವಳಿ ಜಿಲ್ಲೆಯವನು. ನಮ್ಮಲ್ಲಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಬರುತ್ತವೆ. ಆದರೆ, ದೊಡ್ಡಬಳ್ಳಾಪುರದಲ್ಲಿ ಅದನ್ನೂ ಮೀರಿಸುವ ದೊಡ್ಡ ಅಲೆ ಇಲ್ಲಿ ಬಂದಿದೆ. ಇಲ್ಲಿ ಕೇಸರಿ ಅಲೆ ಎದ್ದಿದೆ. ಈ ಅಲೆಯಲ್ಲಿ ಕಾಂಗ್ರೆಸ್ ದಳಗಳು ಮುಳುಗಲಿವೆʼʼ ಎಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆದ ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಿದವರು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಯಾವ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂದು ಹೇಳಲಾಗುತ್ತಿತ್ತೋ ಅಂತಹ ನೆಲದಿಂದಲೇ ಬಿಜೆಪಿಯ ಈ ಬಾರಿಯ ದಿಗ್ವಿಜಯ ಯಾತ್ರೆ ಆರಂಭವಾಗಿರುವುದಕ್ಕೆ ಬಿಜೆಪಿ ನಾಯಕರಲ್ಲಿ ಹೊಸ ಉತ್ಸಾಹ ಮೂಡಿದೆ.
ಜುಲೈ 28ಕ್ಕೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮೂರು ಬಾರಿ ಮುಂದೂಡಿಕೆಯಾಗಿ, ಈ ನಡುವೆ ಅನೇಕ ವಿಘ್ನಗಳನ್ನು ಎದುರಿಸಿ ಕೊನೆಗೂ ನೆರವೇರಿದೆ. ಈ ಕಾರ್ಯಕ್ರಮ ನಡೆಯುತ್ತದೆಯೋ ಇಲ್ಲವೋ ಎನ್ನುವಂತಿದ್ದ ಪರಿಸ್ಥಿತಿಯಲ್ಲಿ ಬಯಲುಸೀಮೆಯಲ್ಲಿ ಯಶಸ್ವೀ ಸಮಾವೇಶ ನಡೆಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜತೆಗೆ ಮತ್ತಿಬ್ಬರು ಸಚಿವರಾದ ಎಂ.ಟಿ.ಬಿ. ನಾಗರಾಜ್ ಹಾಗೂ ಮುನಿರತ್ನ ಅವರನ್ನು ವೇದಿಕೆ ಮೇಲಿಂದಲೇ ಎಲ್ಲ ನಾಯಕರೂ ಹೊಗಳಿದರು.
ಬಿ.ಎಸ್. ಯಡಿಯೂರಪ್ಪ ಅವರು ಭಾಷಣದಲ್ಲಿ ಸುಧಾಕರ್ ಅವರ ಹೆಸರನ್ನು ಅನೇಕ ಬಾರಿ ಉಲ್ಲೇಖಿಸಿ ಶಹಬ್ಬಾಸ್‌ಗಿರಿ ನೀಡಿದರೆ, ಅಷ್ಟೂ ಬಾರಿ ನೆರೆದಿದ್ದ ಜನರು ಚಪ್ಪಾಳೆ, ಶಿಳ್ಳೆ ಮೂಲಕ ಸಹಮತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸುಧಾಕರ್ ಜತೆಗೆ ಎಂ.ಟಿ.ಬಿ. ನಾಗರಾಜ್ ಹಾಗೂ ಮುನಿರತ್ನ ಅವರಿಗೂ ಶ್ರೇಯವನ್ನು ನೀಡಿದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಸುಧಾಕರ್ ಅವರನ್ನು ʼಯುವ ನೇತಾರʼ ಎಂದದಷ್ಟೇ ಅಲ್ಲದೆ ಉತ್ತಮ ರ‍್ಯಾಲಿ ಆಯೋಜನೆಗೆ ಅಭಿನಂದಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಮೂವರಿಗೂ ವಿಶೇಷ ಕ್ರೆಡಿಟ್ ನೀಡಿದರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆದ ನಂತರದಲ್ಲಿ ಬಿಜೆಪಿ ಪ್ರಸಿದ್ಧಿ ಕುಸಿಯುತ್ತಿದೆ ಎಂದು ತಿಳಿದಿದ್ದ ಬಿಜೆಪಿ ನಾಯಕರು, ಒಂದು ಉತ್ತಮ ರ‍್ಯಾಲಿ ಮೂಲಕ ಪಕ್ಷದಲ್ಲಿ ಹೊಸ ಚೈತನ್ಯವನ್ನು ಕಂಡುಕೊಳ್ಳಲು ಬಯಸಿದ್ದರು. ದೊಡ್ಡಬಳ್ಳಾಪುರದಲ್ಲಿ ರ‍್ಯಾಲಿ ಆಯೋಜನೆಯಾದ್ಧರಿಂದ, ಬಿಜೆಪಿ ನಾಯಕರಲ್ಲಿ ಆತಂಕ ಇತ್ತು. ಪಕ್ಷ ದುರ್ಬಲವಾಗಿರುವ ಸ್ಥಳದಿಂದ ರ‍್ಯಾಲಿ ಆರಂಭಿಸಿದರೆ ಉತ್ಸಾಹ ಸಿಗುವುದೇ ಎಂಬ ಅನುಮಾನ ಇತ್ತು.
ಮೂವರು ಸಚಿವರ ಸಾರಥ್ಯ
ದೊಡ್ಡಬಳ್ಳಾಪುರದ ರ‍್ಯಾಲಿಯ ಸಾರಥ್ಯವನ್ನು ಸುಧಾಕರ್, ಎಂ.ಟಿ.ಬಿ. ನಾಗರಾಜ್ ಹಾಗೂ ಮುನಿರತ್ನ ಅವರಿಗೆ ಸಿಎಂ ಬೊಮ್ಮಾಯಿ ವಹಿಸಿದ್ದರು. ಬೆಂಗಳೂರು ಬಿಜೆಪಿ ಶಾಸಕರು ಮತ್ತು ಸಚಿವರ ನಿರುತ್ಸಾಹದ ನಡುವೆಯೂ ಮೂವರೂ ಸವಾಲಾಗಿ ಸ್ವೀಕರಿಸಿದ್ದಾರೆ. ಧೀರಜ್ ಮುನಿರಾಜು ಸೇರಿ ಸ್ಥಳೀಯರ ಬೆಂಬಲದೊಂದಿಗೆ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
ಸುಮಾರು 80 ಸಾವಿರ ಜನರಿಗೆ ಕುರ್ಚಿಗಳನ್ನು ಹಾಕಿಸಲಾಗಿತ್ತು. ಕಾರ್ಯಕ್ರಮದಲ್ಲಿ 1.5 ಲಕ್ಷಕ್ಕೂ ಅಧಿಕ ಜನ ಸೇರಿದ ಮಾಹಿತಿಯಿದ್ದು, ಆಗಮಿಸಿದ್ದ ನಾಯಕರು ಖುಷಿಯಾಗಿದ್ದಾರೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹೊರತುಪಡಿಸಿದರೆ ಮೂಲ ಬಿಜೆಪಿಯ ನಾಯಕರು ಕಾರ್ಯಕ್ರಮದ ಕಡೆಗೆ ಗಮನ ನೀಡಲಿಲ್ಲ.
ಕಾರ್ಯಕ್ರಮಕ್ಕೆ ಆಗಮಿಸಿದವರೂ ಅತಿಥಿಗಳಂತೆ ಇದ್ದರು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರನ್ನು ಕರೆತರಲಾಗಿತ್ತು. ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಅತ್ಯಗತ್ಯವಾಘಿ ಬೇಕಾದ ಉತ್ಸಾಹವನ್ನು ನೀಡುವುದರಲ್ಲಿ ರ‍್ಯಾಲಿ ಯಶಸ್ವಿಯಾಯಿತು ಎಂಭ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದ್ದು, ಇದಕ್ಕೆ ಮೂವರು ʼವಲಸಿಗʼ ಸಚಿವರಿಗೆ ಕ್ರೆಡಿಟ್ ಲಭಿಸುತ್ತಿದೆ.
ಇದನ್ನೂ ಓದಿ | BJP ಜನಸ್ಪಂದನ | ಸಿದ್ದರಾಮಯ್ಯ ಅವರದ್ದು 100% ಸರ್ಕಾರ: ಸಿಎಂ ಬೊಮ್ಮಾಯಿ ʼದಮ್ʼದಾರ್ ಭಾಷಣ