ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಣತಂತ್ರಗಳನ್ನು ಹೆಣೆಯುವಿಕೆಗೆ ಚಾಲನೆ ದೊರಕಿದ್ದು, ಈಗಾಗಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ʼಅಹಿಂದʼ ಮಂತ್ರಕ್ಕೆ ಪ್ರತಿಯಾಗಿ ಬಿಜೆಪಿಯಿಂದ ʼಹಿಂದʼ ಮತಗಳಿಗೆ ಗಾಳ ಹಾಕಲಾಗುತ್ತಿದೆ ಎಂಬ ಸಂದೇಶ ಲಭಿಸುತ್ತಿದೆ.
ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ರ‍್ಯಾಲಿ ನಡೆಸಿರುವ ಬಿಜೆಪಿ, ಪ್ರಮುಖವಾಗಿ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದೆ. ಇದೇ ವೇಳೆ ಮೈಸೂರು ದಸರಾ ಮಹೋತ್ಸವದಲ್ಲೂ ಇದೇ ಸಂದೇಶವನ್ನು ನೀಡಲು ಮುಂದಾಗಿರುವುದು ಸ್ಪಷ್ಟವಾಗಿದೆ.
ರ‍್ಯಾಲಿಯಲ್ಲಿ ನಾಯಕರ ಸಂದೇಶ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಸಮುದಾಯದವರಿದ್ದಾರೆ. ಜಿಲ್ಲೆಯಲ್ಲಿ ಉತ್ಪಾದಿಸುವ ಅಪ್ಪಟ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದ್ದು, ಅಪ್ಪಟ ಜರಿಯನ್ನು ಬಳಸಿ ಪಲ್ಲವ್, ಬುಟ್ಟ ಮತ್ತು ಬಾರ್ಡ್‍ರ್ ಸೀರೆಗಳಿಗೆ ಹೆಚ್ಚಿನ ಅಂದ ಮತ್ತು ಮೆರಗನ್ನು ನೀಡುವ ಮಾದರಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕೈಮಗ್ಗ ನೇಯ್ಗೆಯಲ್ಲಿ ನಿಪುಣತೆ ಹೊಂದಿರುವ ನೇಕಾರರು ಈ ವೃತ್ತಿಯಲ್ಲಿ ತೊಡಗಿರುತ್ತಾರೆ. ದೇವಾಂಗ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಅತ್ಯಂತ ಹೆಚ್ಚು ಗಮನ ಕೇಂದ್ರೀಕರಿಸಿರುವ ವರ್ಗ. ಇದರ ಜತೆಗೆ ಪರಿಶಿಷ್ಟ ಜಾತಿ ಮತದಾರರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.
ದೊಡ್ಡಬಳ್ಳಾಪುರದ ರ‍್ಯಾಲಿಯ ಆರಂಭದಲ್ಲೆ ಪರಿಶಿಷ್ಟ ವರ್ಗಗಳ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರಿಗೆ ಭಾಷಣದ ಅವಕಾಶ ನೀಡಲಾಯಿತು. ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, ವಾಲ್ಮೀಕಿ ಸಮುದಾಯದ ಕಲ್ಯಾಣದ ಕುರಿತು ಮಾತನಾಡಿದರು.
ನಂತರ ಬಿ.ಎಸ್. ಯಡಿಯೂರಪ್ಪ ಅವರು ವೇದಿಕೆಗೆ ಬಂದ ನಂತರ ದಲಿತ ಸಮುದಾಯದವರೇ ಆದ ಗೋವಿಂದ ಕಾರಜೋಳ ಅವರು ಭಾಷಣ ಮಾಡಿದರು. ಕೇಂದ್ರ ಸರ್ಕಾರದ ಸಂಪುಟದಲ್ಲಿ 63 ಸಚಿವರು ಎಸ್‌ಸಿಎಸ್‌ಟಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ನಮ್ಮ ಪಕ್ಷದಿಂದ ಎಸ್‌ಸಿ ಸಮುದಾಯಕ್ಕೆ ಸೇರಿದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ. ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಸ್ಪಂದಿಸುತ್ತದೆ ಎನ್ನಲು ಇದೇ ಸಾಕ್ಷಿ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನೇಕಾರರು ಹಾಗೂ ರೈತರು ನಮ್ಮ ಸರ್ಕಾರದ ಎರಡು ಕಣ್ಣುಗಳಿದ್ದಂತೆ. ಇದೇ ಕಾರಣಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನೇಕಾರರು ಹಾಗೂ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಕರೊನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿದ ಧನಸಹಾಯಕ್ಕೆ ಮತ್ತಷ್ಟು ಸೇರಿಸಿ ಪಾವತಿ ಮಾಡಿದ್ದೇವೆ ಎಂದರು.
ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಭಾಷಣದಲ್ಲೂ ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯಗಳಿಗೆ ತಮ್ಮ ಸರ್ಕಾರದ ಕೊಡುಗೆಗಳನ್ನು ಸ್ಮರಿಸುವುದನ್ನು ಮರೆಯಲಿಲ್ಲ. ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯಗಳಿಗೆ ಹಾಸ್ಟೆಲ್ ನಿರ್ಮಾಣದಲ್ಲಿ ಸರ್ಕಾರ ಮುಂದಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಎಸ್‌ಸಿಎಸ್‌ಟಿ ಸಮುದಾಯದ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ. ಮನೆಯ ನಿರ್ಮಾಣಕ್ಕೆ ಎರಡು ಲಕ್ಷ ರೂ. ಧನಸಹಾಯ ನೀಡುತ್ತಿದ್ದೇವೆ. ಈ ಸಮುದಾಯದ ಯುವಕರು ಉದ್ಯೋಗ ಆರಂಭಿಸಲು, ಐವತ್ತು ಸಾವಿರ ಜನರಿಗೆ ಸ್ವಯಂ ಉದ್ಯೋಗ ಧನಸಹಾಯ ಮಾಡಲಾಗಿದೆ ಎಂದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ನೇಕಾರರು, ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ಗೌರವ ನೀಡಿದೆ ಎಂದರು. ದೇಶದಲ್ಲಿ ಮೊತ್ತಮೊದಲ ಬಾರಿಗೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯಾಗಿ ಬಿಜೆಪಿ ಮಾಡಿತು. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿತು. ಕಾಂಗ್ರೆಸ್‌ಗೆ ಆದಿವಾಸಿಗಳ ಮೇಲೂ, ಮಹಿಳೆಯರ ಮೇಲೂ ಗೌರವವಿಲ್ಲ ಎಂಬುದು ರುಜುವಾತಾಗಿದೆ ಎಂದರು.
ಹಿಂದುಳಿದ ವರ್ಗದವರ ಸೇರ್ಪಡೆ
ವೇದಿಕೆ ಮೇಲಿಂದ ನಾಯಕರು ಭಾಷಣಗಳಲ್ಲಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಗಳ ಕುರಿತು ಮಾತನಾಡುತ್ತಿದ್ದರೆ ಇದೆಲ್ಲದಕ್ಕೆ ಕಲಶಪ್ರಾಯವೆಂಬಂತೆ ಇಬ್ಬರು ಬೇರೆ ಪಕ್ಷದ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ನೇಕಾರ ಸಮುದಾಯಕ್ಕೆ ಸೇರಿದ, ಕಾಂಗ್ರೆಸ್‌ನ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಹಿಂದುಳಿದ ವರ್ಗಕ್ಕೆ ಸೇರಿದ ಸ್ಥಳೀಯ ಜೆಡಿಎಸ್ ಮುಖಂಡ ಅನಿಲ್ ಕುಮಾರ್ ಅವರನ್ನೂ ಬರಮಾಡಿಕೊಳ್ಳಲಾಯಿತು. ವೇದಿಕೆ ಮೇಲೆ ಘೋಷಣೆ ಮಾಡುತ್ತಿದ್ದವರೂ, ಪ್ರಮುಖವಾಗಿ ಈ ಇಬ್ಬರು ನಾಯಕರು ಯಾವ ಸಮುದಾಯಗಳಿಗೆ ಸೇರಿದವರು ಎನ್ನುವುದನ್ನು ನೆರೆದ ಜನರಿಗೆ ನೆನಪಿಸಿದರು.
೨೦೧9ರ ಲೋಕಸಭೆ ಚುನಾವಣೆ ಸಮಯದಿಂದಲೂ ಹಿಂದುಳಿದ ವರ್ಗಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹಿಂದುಳಿದ ವರ್ಗಗಳ ನಾಯಕರನ್ನು ಒಟ್ಟಾಗಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೂ ಆಗಿದೆ. ಇತ್ತೀಚೆಗೆ ತಾನೆ, ಇದೇ ಕಲಬುರಗಿ ಜಿಲ್ಲೆಯ ಕೋಲಿ ಸಮುದಾಯಕ್ಕೆ ಸೇರಿದ ಬಾಬುರಾವ್ ಚಿಂಚನಸೂರು ಅವರನ್ನು ವಿಧಾನ ಪರಿಷತ್‌ಗೆ ಬಿಜೆಪಿ ಆಯ್ಕೆ ಮಾಡಿದೆ.
ಟಾರ್ಗೆಟ್ ಸಿದ್ದರಾಮಯ್ಯ
ಬಿಜೆಪಿಗೆ ಮೊದಲ ಶತ್ರು ಸಿದ್ದರಾಮಯ್ಯ ಎನ್ನುವುದನ್ನು ದೊಡ್ಡಬಳ್ಳಾಪುರದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಭಾಷಣಗಳು ಸಾರಿ ಹೇಳಿದವು. ಪ್ರಾರಂಭದಲ್ಲಿ ಮಾತನಾಡಿದ ಡಾ. ಕೆ. ಸುಧಾಕರ್, ಇದು ವ್ಯಕ್ತಿಪೂಜೆಯಲ್ಲ ಎನ್ನುವ ಮೂಲಕ ಸಿದ್ದರಾಮೋತ್ಸವವನ್ನು ಟೀಕಿಸಿದರು. ನಂತರ ಮಾತನಾಡಿದ ಗೋವಿಂದ ಕಾರಜೋಳ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ನೇರವಾಗಿ ಸಿದ್ದರಾಮಯ್ಯ ಅವರ ಹೆಸರನ್ನೇ ಹೇಳಿ ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರಂತೂ, ದಮ್ ಇದ್ದರೆ ತಾಕತ್ ಇದ್ದರೆ ನಮ್ಮ ಈ ಓಟವನ್ನು ತಡೆಯಿರಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಸಿದ್ದರಾಮೋತ್ಸವದ ಮೂಲಕ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಅವರಿಂದ ಹಿಂದ ಮತಗಳನ್ನು ಪಡೆದುಕೊಳ್ಳುವ ಪ್ರಯತ್ನ ಎನ್ನುವ ಸಂದೇಶ ಸ್ಪಷ್ಟವಾಗಿತ್ತು.
ದಸರಾ ಉದ್ಘಾಟನೆಗೆ ಮುರ್ಮು
ದೊಡ್ಡಬಳ್ಳಾಪುರದ ರ‍್ಯಾಲಿಯಲ್ಲಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಪ್ರಬಲ ಸಂದೇಶ ನೀಡಿದ್ದ ಬಿಜೆಪಿ ಮತ್ತೆ ಸಂಜೆ ವೇಳೆಗೆ ಮೈಸೂರಿನ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ ಎಂದು ಘೋಷಿಸಿತು. ಮೈಸೂರು ದಸರಾ ಎನ್ನುವುದು ಮೈಸೂರಿನಲ್ಲಿ ನಡೆದರೂ ನಾಡಹಬ್ಬ ಎಂದೇ ಖ್ಯಾತಿ ಪಡೆದಿದೆ.
ಸಾಂಸ್ಕೃತಿಕ ರಾಜಧಾನಿಯಲ್ಲಿ ಕಳೆದ ಎರಡು ವರ್ಷ ಕೊರೊನಾ ಕಾರಣಕ್ಕೆ ಅದ್ಧೂರಿ ದಸರಾ ನಡೆದಿಲ್ಲ. ಈ ವರ್ಷ ಕೊರೊನಾ ಆರ್ಭಟ ಇಲ್ಲ ಎನ್ನುವುದರ ಜತೆಗೆ ಚುನಾವಣೆ ವರ್ಷ ಎನ್ನುವುದೂ ಸೇರಿಕೊಂಡಿದ್ದು, ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ದ್ರೌಪದಿ ಮುರ್ಮು ಅವರನ್ನು ತಮ್ಮ ಪಕ್ಷ ಆಯ್ಕೆ ಮಾಡಿತ್ತು ಎಂದು ದೊಡ್ಡಬಳ್ಳಾಪುರ ರ‍್ಯಾಲಿಯಲ್ಲಿ ಗೋವಿಂದ ಕಾರಜೋಳ, ಸ್ಮೃತಿ ಇರಾನಿ ಸ್ಮರಿಸಿದ್ದರು. ಇದರ ಬೆನ್ನಲ್ಲೇ ಅವರೇ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸುತ್ತಾರೆ ಎಂದು ಘೋಷಿಸಲಾಗಿದೆ.
ಒಟ್ಟಾರೆ ಹಳೆ ಮೈಸೂರು ಭಾಗದಲ್ಲಿ ವಾಲ್ಮೀಕಿ, ಕುರುಬ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳ ಮತದಾರರು ಭಾರೀ ಸಂಖ್ಯೆಯಲ್ಲಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ನಂತರ ಅಹಿಂದ ಮತಗಳು ಮತ್ತಷ್ಟು ಪ್ರಮಾಣದಲ್ಲಿ ಕಾಂಗ್ರೆಸ್‌ನತ್ತ, ವಿಶೇಷವಾಗಿ ಸಿದ್ದರಾಮಯ್ಯ ಕಡೆಗೆ ತಿರುಗಿದೆ ಎನ್ನಲಾಗಿದೆ. 2008ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಜತೆಗಿದ್ದ ಹಿಂದ ಮತದಾರರು 2013ರಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದರು. ಇದರಿಂದ 2023ರ ಚುನಾವಣೆಯಲ್ಲಿ ಪಕ್ಷಕ್ಕೆ ಆಗುವ ಅಪಾಯವನ್ನು ತಪ್ಪಿಸಲು ಬಿಜೆಪಿ ನಾಯಕರು ಕಾರ್ಯಪ್ರವೃತ್ತವಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಬಿಜೆಪಿ ಮುಂದಾಗುವುದಿಲ್ಲ ಎನ್ನುವುದು ಐತಿಹಾಸಿಕ ಸತ್ಯ. ಹಾಗಾಗಿ ಅಹಿಂದದಲ್ಲಿ ʼಹಿಂದʼ ಸಮುದಾಯವನ್ನು ಓಲೈಸಿಕೊಳ್ಳಲು ಎಲ್ಲ ಕಸರತ್ತುಗಳನ್ನೂ ಬಿಜೆಪಿ ಮಾಡುತ್ತಿದೆ ಎಂಬ ಸಂದೇಶವನ್ನು ಶನಿವಾರ ನೀಡಿದೆ.
ಇದನ್ನೂ ಓದಿ | BJP ಜನಸ್ಪಂದನ | ʼವಲಸಿಗʼ ಸಚಿವರ ʼಆತ್ಮನಿರ್ಭರʼ ರ‍್ಯಾಲಿಗೆ ಬಿಜೆಪಿ ನಾಯಕರು ಫುಲ್ ಖುಷ್ !