ಆನೇಕಲ್: ಕಾಡಾನೆ ದಾಳಿಗೆ (Elephant Attack) ಫಾರೆಸ್ಟ್ ವಾಚರ್ (forest Watcher) ಒಬ್ಬರು ಬಲಿಯಾದ ದುರ್ಘಟನೆ ಬನ್ನೇರುಘಟ್ಟ (Bannerghatta) ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಚಿಕ್ಕಮಾದಯ್ಯ (46) ಸಾವನ್ನಪ್ಪಿದ ಫಾರೆಸ್ಟ್ ವಾಚರ್. ಇದರಿಂದ ರೊಚ್ಚಿಗೆದ್ದ ಕುಟುಂಬಿಕರು ಹಾಗೂ ಗ್ರಾಮಸ್ಥರು ಪರಿಹಾರ ದೊರೆಯದೆ ಹೆಣ ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು.
ಹಕ್ಕಿಪಿಕ್ಕಿ ಕಾಲೋನಿಯ ದೊಡ್ಡಬಂಡೆ ಬಳಿ ಘಟನೆ ನಡೆದಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕಮಾದಯ್ಯ ಅವರ ಮೇಲೆ ರಾತ್ರಿ 12.30ರ ಸುಮಾರಿಗೆ ಕಾಡಾನೆ ದಾಳಿ ಮಾಡಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳನ್ನು ನಿತ್ಯ ಕಾಡಿಗೆ ಬಿಡಲಾಗುತ್ತದೆ. ನಿನ್ನೆ ಸಂಜೆ ಸಾಕಾನೆಗಳನ್ನು ಕಾಡಿಗೆ ಬೀಡಲಾಗಿತ್ತು. ಸಾಕಾನೆಗಳ ಗುಂಪಿನ ಜೊತೆಗೆ ಕಾಡಾನೆ ಸೇರಿಕೊಂಡಿತ್ತು. ನೈಟ್ ಬೀಟ್ ರೌಂಡ್ಸ್ ಮಾಡುತ್ತಿದ್ದ ಚಿಕ್ಕ ಮಾದಯ್ಯ ಮತ್ತು ಇನ್ನೊಬ್ಬ ಸಿಬ್ಬಂದಿ ಮೇಲೆ ಕಾಡಾನೆ ಏಕಾಏಕಿ ಅಟ್ಯಾಕ್ ಮಾಡಿದೆ. ಚಿಕ್ಕಮಾದಯ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಪಾರಾಗಿದ್ದಾರೆ.
ಚಿಕ್ಕ ಮಾದಯ್ಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪದೇ ಪದೆ ಕಾಡಾನೆ ಹಾವಳಿಗೆ ಬೆಳೆಹಾನಿ ಜೊತೆಗೆ ಪ್ರಾಣಹಾನಿಯಾಗುತ್ತಿದೆ. ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ಮುಂದಾಗಿಲ್ಲ. ಫಾರೆಸ್ಟ್ ಸಿಬ್ಬಂದಿ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಪರಿಹಾರ ಕೊಡುವವರೆಗೆ ಮೃತದೇಹ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟಿಸಿದರು.
ಘಟನಾ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಡಿಸಿಎಫ್ ಪ್ರಭಾಕರ್ ಪ್ರಿಯದರ್ಶಿ ಭೇಟಿ ನೀಡಿ, ಮೃತನ ಸಂಬಂಧಿಕರ ಮನವೊಲಿಸಲು ಯತ್ನಿಸಿದರು. ಆದರೆ ಕುಟುಂಬಸ್ಥರು ಮೃತನ ಕುಟುಂಬಕ್ಕೆ ಸ್ಥಳದಲ್ಲಿಯೇ 30 ಲಕ್ಷ ಪರಿಹಾರ ನೀಡಬೇಕು, ಹಕ್ಕಿಪಿಕ್ಕಿ ಕಾಲೋನಿ ವಾಸಿಗಳಿಗೆ ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ನಿಲ್ಲಬೇಕು ಎಂದು ಒತ್ತಾಯಿಸಿದರು.
ನಂತರ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹೇಳಿಕೆ ನೀಡಿ, ಶೀಘ್ರದಲ್ಲೆ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ʼಗ್ರಾಮಸ್ಥರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡಿಲ್ಲ.
ಗ್ರಾಮಸ್ಥರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಕೊಡಲು ಸಚಿವರ ಜೊತೆ ಮಾತಾಡುತ್ತೇವೆ. ಚಿಕ್ಕ ಮಾದಯ್ಯ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗೂ ಮೃತನ ಹೆಂಡತಿಗೆ ಸೂಕ್ತವಾದ ಕೆಲಸ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ತಿಳಿಸಿದರು.
ಇದನ್ನೂ ಓದಿ: Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ