Site icon Vistara News

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

fire accident

ಆನೇಕಲ್: ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿ ಗ್ರಾಮದಲ್ಲಿರುವ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ (Fire Accident ) ಸಂಭವಿಸಿದೆ. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಟಾಟಾ ಕಂಪನಿಯ ಕೆಮಿಕಲ್‌ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಧಗಧಗನೇ ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು, ಮಿಷನರಿಗಳು ಬೆಂಕಿಗಾಹುತಿ ಆಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ.

ಅಗ್ನಿ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ರಾಯಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಒಂದು ಶಿಫ್ಟ್‌ನಲ್ಲಿ ನಾಲ್ಕೂವರೆ ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಂಪೆನಿಯಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನೆ ಮಾಡಲಾಗುತ್ತಿತ್ತು. ಮಿಕಲ್ ಘಟಕದಲ್ಲಿ ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಭಾರಿ ಪ್ರಮಾಣದಲ್ಲಿ ಹೊಗೆ ತುಂಬಿಕೊಂಡಿದೆ. ಐದಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸದ್ಯ ಮೂವರು ಕಾರ್ಮಿಕರು ಅಸ್ವಸ್ಥಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಸದ್ಯ ಎಲ್ಲರ ಆರೋಗ್ಯ ಚೇತರಿಕೆ ಕಂಡಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರಸ್ತೆಯಲ್ಲಿಯೇ ಕಾರು ನಿಲ್ಲಿಸಿ ಚಾಲಕ ಹೊರಬಂದಿದ್ದಾರೆ. ನೋಡನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣ, ಪುಟ್ಟ ಗಾಯವಾಗಿದೆ. ಹಾಸನ ತಾಲೂಕಿನ, ಹೆರಗು ಗ್ರಾಮದಲ್ಲಿ ಘಟನೆ ನಡೆದಿದೆ. ಆನಳ್ಳಿ ಗ್ರಾಮದ ಅಶೋಕ್ ಎಂಬುವವರಿಗೆ ಸೇರಿದ ಓಮ್ನಿ ಕಾರಿನಲ್ಲಿ ತಮ್ಮ ಇಟ್ಟಿಗೆ ಫ್ಯಾಕ್ಟರಿಗೆ ಹೋಗಿ ವಾಪಾಸ್ಸಾಗುತ್ತಿದ್ದರು.

ಹೆರಗು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಗಾಬರಿಗೊಂಡು ಕಾರು ನಿಲ್ಲಿಸಿ ಅಶೋಕ್ ಹಾಗೂ ಇಬ್ಬರು ಸ್ನೇಹಿತರು ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಬಾರಿ‌ ಅನಾಹುತ ತಪ್ಪಿದೆ. ಅಲ್ಲಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version