ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಕ್ಷೇತ್ರಗಳಲ್ಲಿ ಎರಡು ಮಿಸಲು ಕ್ಷೇತ್ರವಾಗಿದ್ದರೆ, ಉಳಿದೆರಡು ಸಾಮಾನ್ಯ ಕ್ಷೇತ್ರಗಳು. ಕಳೆದ ಎರಡು ಚುನಾವಣೆಗಳಿಂದ ಈ ನಾಲ್ಕು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಲೇ ಬಂದಿದೆ. ಈ ಬಾರಿ (Karnataka Election 2023) ಕೂಡ ಇದೇ ಪರಿಸ್ಥಿತಿ ಇದೆ.
ಈ ನಾಲ್ಕು ಕ್ಷೇತ್ರಗಳಲ್ಲಿ ಒಕ್ಕಲಿಗ, ಎಸ್‌ಸಿ, ಎಸ್‌ಟಿ ಮತಗಳು ನಿರ್ಣಾಯಕವಾಗಿವೆ. ಕಳೆದ ಎರಡು ಚುನಾವಣೆಗಳಲ್ಲಿ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವ ಸಾಧಿಸಿದ್ದರೆ ನೆಲಮಂಗಲ ಮತ್ತು ದೇವನಹಳ್ಳಿಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿತ್ತು. 2008 ರಲ್ಲಿ ಬಿಜೆಪಿಯು ಮೂರು ಕ್ಷೇತ್ರದಲ್ಲಿ ಗೆದ್ದು ದಾಖಲೆ ಬರೆದಿತ್ತು. ನಂತರ ಈ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಎಲ್ಲ ಪಕ್ಷಗಳಲ್ಲಿಯೂ ಹೆಚ್ಚು ಶ್ರಮ ಪಡುತ್ತಿದೆ.
ನೆಲಮಂಗಲ : ಕಾಂಗ್ರೆಸ್
ಜೆಡಿಎಸ್ ನಡುವೆ ನೇರ ಸ್ಪರ್ಧೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರುವ ನೆಲಮಂಗಲ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಒಕ್ಕಲಿಗರ ಮತಗಳು ನಿರ್ಣಯಕವಾಗಿವೆ. ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ವೈದ್ಯ ಡಾ.ಕೆ ಶ್ರೀನಿವಾಸಮೂರ್ತಿ ಶಾಸಕರಾಗಿದ್ದು, ಹಲವು ಅಭಿವೃದ್ಧಿ ಕೆಲಸಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಬಾರಿ ಇವರ ಗೆಲುವಿಗೆ ಶ್ರಮಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಈ ಬಾರಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಡಾ.ಕೆ ಶ್ರೀನಿವಾಸಮೂರ್ತಿಯೊಬ್ಬರೇ ಚುನಾವಣೆಯನ್ನು ಎದುರಿಸಬೇಕಾಗಿ ಬಂದಿದೆ.
ಇನ್ನು ಕಳೆದ ಚುನಾವಣೆಯಲ್ಲಿ ಬಾರಿ ಅಂತರದಿಂದ ಸೋಲನ್ನು ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿದ್ದು, ಎನ್ ಶ್ರೀನಿವಾಸ್ ಗೆ ಮಣೆಹಾಕಿದೆ. ಚುನಾವಣೆಗೂ ಮೊದಲೇ ಕುಕ್ಕರ್ ಹಂಚುವ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು ಸದ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿಯು ಕಳೆದ ಎರಡು ಬಾರಿ ಈ ಕ್ಷೇತ್ರದಿಂದ ನಿಂತು ಸೋತಿರುವ ಎಂ ವಿ ನಾಗರಾಜು ಅವರಿಗೆ ಟಿಕೆಟ್ ನೀಡಿದೆ, ಹೊಸ ಮುಖ ಸಪ್ತಗಿರಿ ಶಂಕರ್ ನಾಯಕ್ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಬಿಜೆಪಿಯಲ್ಲಿ ಬಿನ್ನಮತ ಶೂರುವಾಗಿದೆ. ಕೆಲ ಮುಖಂಡರು ಬಿಜೆಪಿ ತೊರೆದು ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಾ.ಕೆ ಶ್ರೀನಿವಾಸಮೂರ್ತಿ (ಜೆಡಿಎಸ್): 69, 277- ನಾರಾಯಣಸ್ವಾಮಿ (ಕಾಂಗ್ರೆಸ್):44,956 ಎಂ. ವಿ. ನಾಗರಾಜು (ಬಿಜೆಪಿ): 42,689- ಗೆಲುವಿನ ಅಂತರ : 24,321
ದೊಡ್ಡಬಳ್ಳಾಪುರ: ಈ ಬಾರಿ
ತ್ರಿಕೋನ ಸ್ಪರ್ಧೆ
ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್ ಕಳೆದ ಎರಡು ಚುನಾವಣೆಯಲ್ಲಿ ಸತತವಾಗಿ ಗೆದ್ದು, ಈ ಕ್ಷೇತ್ರವನ್ನು ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿದೆ. ಈ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವ ಟಿ. ವೆಂಕಟರಮಣಯ್ಯ ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್ ನಾಯಕರಾಗಿದ್ದ ಆರ್ ಎಲ್ ಜಾಲಪ್ಪ ಅವರ ಮಗ ಜೆ. ನರಸಿಂಹಸ್ವಾಮಿ ʻಆಪರೇಷನ್ ಕಮಲʼ ಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರಿಂದ ಒಮ್ಮೆ ಮಾತ್ರ ಬಿಜೆಪಿ ಇಲ್ಲಿ ಅಧಿಕಾರ ಹಿಡಿದಿದೆ. ಈ ಬಾರಿ ಪಕ್ಷದ ಅಭ್ಯರ್ಥಿಯನ್ನು ಬದಲಾಯಿಸಲಾಗಿದ್ದು, ಪಕ್ಷದ ಯುವ ನಾಯಕ ಧೀರಜ್ ಮುನಿರಾಜು ಕಣಕ್ಕಿಳಿದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿರುವ ಸಾಮಾಜಿಕ ಸೇವೆ ಅವರ ಕೈ ಹಿಡಿಯಲಿದೆಯೇ ಎಂದು ನೋಡಬೇಕಾಗಿದೆ.
ಕಳೆದ ಎರಡು ಚುನಾವಣೆಯಲ್ಲಿಯೂ ತೀವ್ರ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿದ್ದ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. ಮೋದಲೇ ಇವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಸಾಕಷ್ಟು ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ. ಸತತ ಸೋಲಿನ ಅನುಕಂಪ ಕೂಡ ಇವರ ಮೇಲಿದೆ. ಹೀಗಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುತ್ತಿದ್ದು, ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ಟಿ.ವೆಂಕಟರಮಣಯ್ಯ (ಕಾಂಗ್ರೆಸ್) : 73,225- ಬಿ.ಮುನೇಗೌಡ (ಜೆಡಿಎಸ್): 63, 280- ಜೆ.ನರಸಿಂಹಸ್ವಾಮಿ (ಬಿಜೆಪಿ) : 27,612- ಗೆಲುವಿನ ಅಂತರ: 9,945
ದೇವನಹಳ್ಳಿ : ಕಾಂಗ್ರೆಸ್‌ಗೆ
ಭಿನ್ನರ ಬಿಸಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಪ್ರಸಿದ್ಧಿ ಪಡೆದಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದೆ. ಈ ಬಾರಿ ಮಾಜಿ ಸಂಸದ, ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರ ಸ್ಪರ್ಧೆಯಿಂದ ಗಮನ ಸೆಳೆದಿದೆ. ಪಕ್ಷದ ಸ್ಥಳೀಯ ನಾಯಕರ ಎಚ್ಚರಿಕೆಗಳನ್ನೂ ತಳ್ಳಿಹಾಕಿ ಪಕ್ಷದ ಹೈಕಮಾಂಡ್ ಕೋಲಾರದ ಮುನಿಯಪ್ಪ ಅವರನ್ನು ಇಲ್ಲಿ ಕಣಕ್ಕಿಳಿಸಿದ್ದು, ಅವರು ಪಕ್ಷದ ನಾಯಕರ ವಿಶ್ವಾಸಗಳಿಸಲೇ ಹೆಣಗಾಡುತ್ತಿದ್ದಾರೆ. ಅನೇಕ ನಾಯಕರು ಅಸಮಾಧಾನಗೊಂಡು ಪ್ರಚಾರದಿಂದ ದೂರ ಉಳಿದಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ನಿಸರ್ಗ ನಾರಾಯಣಸ್ವಾಮಿ ಅವರಿಗೇ ಜೆಡಿಎಸ್ ಮತ್ತೆ ಟಿಕೆಟ್ ನೀಡಿದ್ದು, ಅವರು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಮೇಲಿರುವ ಆರೋಪಗಳಿಗೆಲ್ಲಾ ತಣ್ಣಗೆ ಉತ್ತರ ನೀಡುತ್ತಾ ಗ್ರಾಮಾಂತರ ಭಾಗದಲ್ಲಿ ಸದ್ದಿಲ್ಲದೇ ಪ್ರಚಾರ ನಡೆಸುತ್ತಿದ್ದಾರೆ. 2013 ರಿಂದಲೂ ಈ ಕ್ಷೇತ್ರದಲ್ಲಿ ಜೆಡಿಎಸ್ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಈ ಬಾರಿಯೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಇತ್ತ ಬಿಜೆಪಿಯು 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಪಿಳ್ಳ ಮುನಿಶಾಮಪ್ಪ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ರಾಷ್ಟ್ರೀಯ ನಾಯಕ ಅಮಿತ್ ಶಾ ಇಲ್ಲಿಗೆ ಬಂದು ಪ್ರಚಾರ ನಡೆಸಿದ್ದಾರೆ. ಆದರೆ ಬಿಜೆಪಿ ಪರವಾದ ಬಲವಾದ ಅಲೆ ಇನ್ನೂ ಎದ್ದಿಲ್ಲ. ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್) : 86,966- ವೆಂಕಟಸ್ವಾಮಿ (ಕಾಂಗ್ರೆಸ್): 69,956- ಕೆ.ನಾಗೇಶ್ (ಬಿಜೆಪಿ): 9,820 – ಗೆಲುವಿನ ಅಂತರ: 17,010
ಹೊಸಕೋಟೆ: ಕಾಂಗ್ರೆಸ್,
ಬಿಜೆಪಿ ನಡುವೆ ಪೈಪೋಟಿ
ರಾಜ್ಯ ರಾಜಕಾರಣದಲ್ಲಿ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ನಡೆಯುತ್ತಿದೆ. ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ಮತ್ತು ಬಿಜೆಪಿಯ ಎಂಟಿಬಿ ನಾಗರಾಜ್ ನಡುವೆ ಇದು ಮೂರನೇ ಬಾರಿಗೆ ಪೈಪೋಟಿ ನಡೆಯುತ್ತಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಹೊಸಕೋಟೆಯಲ್ಲಿ 2004 ರಿಂದಲೂ ಈ ಎರಡೂ ಕುಟಂಬಗಳ ನಡುವೆಯೇ ಸ್ಪರ್ಧೆ ನಡೆಯುತ್ತಿದೆ. 2018 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಎಂಟಿಬಿ ನಾಗರಾಜ್ ನಂತರ ʻಆಪರೇಷನ್ ಕಮಲʼ ಕ್ಕೆ ಒಳಗಾಗಿ ಬಿಜೆಪಿ ಸೇರಿದ ನಂತರ ಬಿಜೆಪಿ ಸಂಸದ ಬಿ. ಎನ್. ಬಚ್ಚೇಗೌಡ ಕುಟುಂಬ ಅವರಿಗೆ ಸವಾಲೊಡ್ಡಿತ್ತು. ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದರು. ನಂತರ ಕಾಂಗ್ರೆಸ್ ಸೇರಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪದ್ಮಾವತಿ ಭೈರತಿ ಸುರೇಶ್ ಕಣದಲ್ಲಿದ್ದುದ್ದರಿಂದ ಪಕ್ಷೇತರರಾಗಿ ಗೆಲ್ಲುವುದು ಶರತ್ ಬಚ್ಚೇಗೌಡರಿಗೆ ಸುಲಭವಾಗಿತ್ತು. ಈ ಬಾರಿ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಕೂಡ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಶರತ್ ಬಚ್ಚೇಗೌಡ (ಪಕ್ಷೇತರ): 81,671 -ಎಂಟಿಬಿ ನಾಗರಾಜ್ (ಬಿಜೆಪಿ): 70,185 – ಪದ್ಮಾವತಿ ಭೈರತಿ ಸುರೇಶ್ (ಕಾಂಗ್ರೆಸ್) : 41,443- ಗೆಲುವಿನ ಅಂತರ : 11,486
ಇದನ್ನೂ ಓದಿ : ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮತ್ತೊಮ್ಮೆ ಮೇಲುಗೈ ಸಾಧಿಸಲು ಕಾಂಗ್ರೆಸ್ ಕಠಿಣ ಪರಿಶ್ರಮ