ಬೆಂಗಳೂರು ಗ್ರಾಮಾಂತರ: ಕರ್ನಾಟಕ- ತಮಿಳುನಾಡು ಗಡಿಯಲ್ಲಿ ನಡೆದ ಅಪಾಯಕಾರಿ ಜಲ್ಲಿಕಟ್ಟು ಆಚರಣೆಯೊಂದರ ವೇಳೆ ಹೋರಿ ತಿವಿದು ಒಬ್ಬ ಸಾವಿಗೀಡಾಗಿ, ಆರು ಮಂದಿ ಗಾಯಗೊಂಡಿದ್ದಾರೆ.
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ವೇಳೆ ಆಗಾಗ ಆಗುತ್ತಿರುವ ಅವಘಡ ಪರಂಪರೆ ಮುಂದುವರಿದಿದೆ. ತಮಿಳುನಾಡಿನ ಕೆಲವರಪಲ್ಲಿ ಸಮೀಪ ಸಪ್ಲಮ್ಮ ದೇವಿ ಜಾತ್ರೆ ಅಂಗವಾಗಿ ಆಯೋಜಿಸಿದ ಜಲ್ಲಿಕಟ್ಟಿನ ವೇಳೆ ಈ ದುರ್ಘಟನೆ ನಡೆದಿದೆ.
ಹೊಸೂರು, ಡೆಂಕಣಿಕೋಟೆ, ಥಳಿ, ಬಾಗಲೂರು ಸೇರಿದಂತೆ ಹಲವು ಕಡೆಗಳಿಂದ ಇದಕ್ಕೆ ಸುಮಾರು 500ಕ್ಕೂ ಹೆಚ್ಚು ಹೋರಿಗಳನ್ನು ಆಚರಣೆಗೆ ಕರೆತರಲಾಗಿತ್ತು. ಹತ್ತಾರು ಊರುಗಳಿಂದ ಬಂದ ಸಾವಿರಾರು ಜನರು ಭಾಗಿಯಾಗಿದ್ದರು. ಈ ವೇಳೆ ಗೂಳಿ ದಾಳಿಗೆ ಓರ್ವ ಬಲಿಯಾಗಿ, ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಸೂಳಗಿರಿ ಸಮೀಪದ ಆರೋಪಲ್ಲಿ ಗ್ರಾಮದ ಮಂಜು (25) ಮೃತ ಯುವಕ.
ಪೊಂಗಲ್ ಹಬ್ಬದ ಬಳಿಕ ತಮಿಳುನಾಡಿನಲ್ಲಿ ಅಲ್ಲಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಚರಣೆ ನಡೆಯುತ್ತಿದ್ದು, ಈ ಅಪಾಯಕಾರಿ ಸ್ಪರ್ಧೆಗೆ ಎಲ್ಲಿಲ್ಲದ ಕ್ರೇಜ್ ಇದ್ದು, ಸಾವಿರಾರು ಜನ ಆಗಮಿಸುತ್ತಾರೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜಲ್ಲಿಕಟ್ಟು ವೀಕ್ಷಣೆಗೆ ಆಗಮಿಸುತ್ತಾರೆ. ಕರ್ನಾಟಕ, ಆಂಧ್ರ, ತೆಲಂಗಾಣದಿಂದಲೂ ರಾಸುಗಳು ಆಗಮಿಸುತ್ತವೆ. ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಗೆಜ್ಜೆ ಸರ, ಕೊಂಬಿಗೆ ಬಣ್ಣ ಬಣ್ಣದ ತಡಿಕೆಯಿಂದ ರಾಸುಗಳ ಸಿಂಗಾರ ಮಾಡಿ ಬಿಡಲಾಗುತ್ತದೆ. ರಾಸುಗಳ ಮುಡಿಗೆ ಕಟ್ಟಿದ ಬಹುಮಾನವನ್ನು ಪಡೆಯಲು ಅವುಗಳನ್ನು ಹಿಡಿಯಲು ಯುವಕರು ಹೋರಾಟ ನಡೆಸುತ್ತಾರೆ. ಈ ವೇಳೆ ರಾಸುಗಳ ದಾಳಿಯಿಂದ ಸಾವು ನೋವು ಸಂಭವಿಸುವುದು ಸಾಮಾನ್ಯವಾಗಿದೆ.
ಅಪಾಯಕಾರಿ ಜಲ್ಲಿಕಟ್ಟು ಕ್ರೀಡೆಯನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಲಾಗಿದ್ದು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಾಹಸ ಕ್ರೀಡೆಯಾಗಿ ನೆರವೇರುತ್ತಿದೆ.
ಇದನ್ನೂ ಓದಿ: ಜಲ್ಲಿಕಟ್ಟು ನೋಡಲು ಹೋಗಿದ್ದ 14 ವರ್ಷದ ಬಾಲಕನಿಗೆ ತಿವಿದ ಹೋರಿ; ದಾರುಣವಾಗಿ ಮೃತಪಟ್ಟ ಹುಡುಗ