ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ (Sowmya Reddy) ಅವರು ಸೋಮವಾರ (ಏಪ್ರಿಲ್ 1) ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಹಾಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರನ್ನು ಸೋಲಿಸುವ ಗುರಿಯೊಂದಿಗೆ ಅಬ್ಬರದಲ್ಲಿಯೇ ಕಣದಲ್ಲಿರುವ ಸೌಮ್ಯಾ ರೆಡ್ಡಿ ಅವರು ಆಸ್ತಿಯ ವಿವರವನ್ನೂ ಘೋಷಣೆ ಮಾಡಿದ್ದಾರೆ. ಇವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು 2.13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ (Affidavit) ಉಲ್ಲೇಖಿಸಿದ್ದಾರೆ.
ಜಯನಗರದ ಮಾಜಿ ಶಾಸಕಿಯೂ ಆಗಿರುವ ಸೌಮ್ಯಾ ರೆಡ್ಡಿ ಅವರು 89.27 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು 1.24 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಬಳಿ 44,135 ರೂ. ನಗದು ಇದೆ. ಬ್ಯಾಂಕ್ ಖಾತೆಯಲ್ಲಿ 40,96,252 ರೂ. ಇದೆ. 19,85,358 ರೂಪಾಯಿ ಬೆಲೆ ಬಾಳುವ ಒಂದು ಇನೋವಾ ಕಾರು ಕೂಡ ಇದೆ. 950 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಸೇರಿ ಒಟ್ಟು 28 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಬೇಗೂರು ಬಳಿ 1.24 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಇದೆ ಎಂಬುದಾಗಿ ಅವರು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
ತಂದೆಯ ಬಳಿಯೇ ಸಾಲ ಮಾಡಿರುವ ಸೌಮ್ಯಾ
ಸೌಮ್ಯಾ ರೆಡ್ಡಿ ಅವರು ಒಟ್ಟು 1.5 ಕೋಟಿ ರೂ. ಸಾಲ ಮಾಡಿದ್ದಾರೆ. ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 79 ಲಕ್ಷ ರೂ. ಸಾಲ ಮಾಡಿದ್ದಾರೆ. ಅಷ್ಟೇ ಅಲ್ಲ, ತಂದೆ ರಾಮಲಿಂಗಾ ರೆಡ್ಡಿ ಅವರ ಬಳಿಯೇ ಸೌಮ್ಯಾ ರೆಡ್ಡಿ ಅವರು 56 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ. ಸಹೋದರ ಶ್ರೀರಾಜ್ ಕುಮಾರ್ ಆರ್. ರೆಡ್ಡಿ ಬಳಿಯೂ ಸೌಮ್ಯಾ ರೆಡ್ಡಿ ಅವರು 9.75 ಲಕ್ಷ ರೂ. ಸಾಲ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮೊದಲು ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಆಟೋದಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಸೌಮ್ಯಾ ರೆಡ್ಡಿ ಅವರಿಗೆ ನಿರ್ಮಾಪಕ ಉಮಾಪತಿ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, “ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ತೆರಳಿ ಪ್ರಚಾರ ಕೈಗೊಳ್ಳುತ್ತೇನೆ” ಎಂದು ತಿಳಿಸಿದರು. ರಾಮಲಿಂಗಾರೆಡ್ಡಿ ಅವರು ಕೂಡ ಪುತ್ರಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೌಮ್ಯಾ ರೆಡ್ಡಿ ಅಫಿಡವಿಟ್
ಇದನ್ನೂ ಓದಿ: Congress Nominations: ಸೌಮ್ಯಾ ರೆಡ್ಡಿ ಸೇರಿ ಕೈ ಅಭ್ಯರ್ಥಿಗಳಿಂದ ನಾಮಪತ್ರ; ಶಕ್ತಿ ಪ್ರದರ್ಶನ
ಯದುವೀರ್ ಆಸ್ತಿ 4.99 ಕೋಟಿ ರೂ.
ಯದುವೀರ್ ಅವರು ಆಸ್ತಿಯ ಕುರಿತ ಅಫಿಡವಿಟ್‌ಅನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ. ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಯದುವೀರ್ ಅವರು 4,99,59,303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಯದುವೀರ್ ಅವರ ಪತ್ನಿ 1,04,25,000 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇವರ ಪುತ್ರನ (Dependent) ಹೆಸರಿನಲ್ಲಿ 3.63 ಕೋಟಿ ರೂ. ಆಸ್ತಿ ಇದೆ. ಯದುವೀರ್ ಅವರ ಕುಟುಂಬದಲ್ಲಿ (ಪತ್ನಿ ಹಾಗೂ ಪುತ್ರ) ಯಾರೂ ಸಾಲ ಹೊಂದಿಲ್ಲ ಎಂಬುದಾಗಿ ಯದುವೀರ್ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ