ಬೆಂಗಳೂರು: ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರಿನ ಸಂಚಾರ ದಟ್ಟಣೆಯನ್ನು (Traffic Problem) ಕಡಿಮೆ ಮಾಡಲು ತಂತ್ರಜ್ಞಾನ ದೈತ್ಯ ಗೂಗಲ್ ಮೊರೆ ಹೋಗಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಇದೀಗ ಗೂಗಲ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಒಟ್ಟಾರೆ ಸಮಯದಲ್ಲಿ ಶೇ.20ಕ್ಕಿಂತಲೂ ಕಡಿಮೆಯಾಗುವ ಭರವಸೆಯಿದೆ. ಈಗಾಗಲೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ರವಿಕಾಂತೇಗೌಡ, ಒಂದೂವರೆ ಕೋಟಿಯಷ್ಟು ಜನಸಂಖ್ಯೆಯನ್ನು ಬೆಂಗಳೂರು ಹೊಂದಿದೆ. ಪೊಲೀಸರು ಬೆಂಗಳೂರಿನ 1,400 ಕಿ.ಮೀ. ಮುಖ್ಯರಸ್ತೆ, 44,000 ಜಂಕ್ಷನ್‌ಗಳನ್ನು ಪೊಲೀಸರು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಮುಖ 1,000 ಜಂಕ್ಷನ್‌ಗಳಲ್ಲಿ 398 ಸಿಗ್ನಲ್ ದೀಪ ಅಳವಡಿಸಲಾಗಿದೆ, ಉಳಿದ 600ಕ್ಕೂ ಹೆಚ್ಚು ಜಂಕ್ಷನ್‌ಗಳನ್ನು ಪೊಲೀಸ್ ಸಿಬ್ಬಂದಿ ನಿರ್ವಹಣೆ ಮಾಡುತ್ತಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಕಷ್ಟಕರ ಕೆಲಸ. ಇದಕ್ಕಾಗಿ ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಹಿಂದಿನಿಂದಲೂ ತಂತ್ರಜ್ಷಾನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ, ಟ್ರಾಫಿಕ್ ಚಲನ್ ಬಳಕೆಯನ್ನು ಮೊದಲಿಗೆ ಬಳಕೆಗೆ ತಂದಿದ್ದು ನಾವೆ.
ಇದನ್ನೂ ಓದಿ | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಧಾನಿ ಸೂಚನೆ; ಹಿರಿಯ ಅಧಿಕಾರಿಗಳ ಸಭೆ ಕರೆದ ಡಿಜಿ-ಐಜಿಪಿ ಪ್ರವೀಣ್ ಸೂದ್
ಮುಂದಿನ ಹೆಜ್ಜೆಯಾಗಿ, ಸಂಚಾರ ದಟ್ಟಣೆ ತಗ್ಗಿಸಲು, ಜನರಲ್ಲಿ ಪೊಲೀಸರ ಕುರಿತು ನಂಬಿಕೆ ಹೆಚ್ಚಿಸಲು ಗೂಗಲ್ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಗೂಗಲ್ ಮ್ಯಾಪ್‌ನೊಂದಿಗೆ ಸಮನ್ವಯದಲ್ಲಿ ಬೆಂಗಳೂರು ಟ್ರಾಫಿಕ್ ದೀಪಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಸಂಚಾರ ದಟ್ಟಣೆಗೆ ಅನುಗುಣವಾಗಿ, ವಾಹನ ಸವಾರರು ಸಿಗ್ನಲ್‌ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲಾಗುತ್ತದೆ. ಇತ್ತೀಚೆಗೆ ಗೂಗಲ್ ಜತೆಗೆ ಪೈಲಟ್ ಯೋಜನೆಯೊಂದನ್ನು ಜಾರಿ ಮಾಡಲಾಗಿದೆ. ಒಟ್ಟಾರೆಯಾಗಿ, ಸಿಗ್ನಲ್‌ಗಳಲ್ಲಿ ಕಾಯುವ ಸಮಯದಲ್ಲಿ ೨೦% ಕಡಿಮೆ ಆಗಿದೆ. ಒಂದು ಜಂಕ್ಷನ್‌ನಲ್ಲಿ ದಿನಕ್ಕೆ 400 ಗಂಟೆ(ಎಲ್ಲ ವಾಹನ ಸವಾರರ ಕಾಯುವ ಸಮಯವನ್ನೂ ಸೇರಿಸಿ), ವರ್ಷಕ್ಕೆ ಸುಮಾರು 73,000 ಗಂಟೆ ಉಳಿತಾಯವಾಗಿದೆ. ಬೆಂಗಳೂರಿನ ಎಲ್ಲ ಜಂಕ್ಷನ್‌ಗಳನ್ನೂ ಲೆಕ್ಕ ಮಾಡಿದರೆ ಇದರಿಂದ ಅಗಾಧ ಬದಲಾವಣೆ ಆಗುತ್ತದೆ. ಕಾಯುವ ಸಮಯ ಕಡಿಮೆ ಆಗುವುದರ ಜತೆಗೆ ಇಂಧನ ಬಳಕೆಯೂ ಕಡಿಮೆಯಾಗುತ್ತದೆ. ಪರಿಸರಕ್ಕೂ ಇದು ಅನುಕೂಲವಾಗುತ್ತದೆ ಎಂದಿದ್ದಾರೆ.
ಗೂಗಲ್ ಜತೆಗೆ ಮಾಹಿತಿ ಹಂಚಿಕೆ
ಇದಕ್ಕಾಗಿ ನಮ್ಮ ದತ್ತಾಂಶವನ್ನು ಗೂಗಲ್ ಜತೆ ಹಂಚಿಕೊಳ್ಳುತ್ತೇವೆ. ಯಾವುದೇ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಯಾವುದೇ ಕಾರಣಕ್ಕೆ ರಸ್ತೆಯನ್ನು ಬಂದ್ ಮಾಡಿದ್ದರೆ ಅದರ ಮಾಹಿತಿಯನ್ನು ಗೂಗಲ್‌ಗೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಗೂಗಲ್ ಬಳಸಿಕೊಂಡು, ವಾಹನ ಸವಾರರಿಗೆ ಬದಲಿ ರಸ್ತೆಗಳನ್ನು ಸೂಚಿಸುತ್ತದೆ. ಈಗಾಗಲೆ ನೂರಾರು ಅಂತಹ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ ಎಂದು ರವಿಕಾಂತೇಗೌಡ ಹೇಳಿದ್ದಾರೆ.
ಸ್ಪೀಡ್ ಲಿಮಿಟ್ ಯೋಜನೆ
ಸಂಚಾರ ದಟ್ಟಣೆ ನಿಯಂತ್ರಣವಷ್ಟೆ ಅಲ್ಲದೆ, ವಾಹನಗಳ ವೇಗದ ಮಿತಿಯನ್ನೂ ಗೂಗಲ್ ಸಹಯೋಗದಲ್ಲಿ ನಿಯಂತ್ರಣ ಮಾಡಲಾಗುತ್ತದೆ. ಈ ಕುರಿತೂ ಗೂಗಲ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್