ಬೆಂಗಳೂರು: ದೇಶದಲ್ಲಿ ಆನ್‌ಲೈನ್ ವಂಚನೆ, ಸೈಬರ್ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇರುತ್ತವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಕೊರಿಯರ್ ಸೇವೆಗಳಿಗೆ ಹೆಸರಾಗಿರುವ ಫೆಡ್‌ಎಕ್ಸ್ (FedEx) ಸಂಸ್ಥೆ ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಬೆಂಗಳೂರಿನಲ್ಲಿ (Bengaluru) ವಕೀಲೆಯೊಬ್ಬರು ಬರೋಬ್ಬರಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೌದು, ಏಪ್ರಿಲ್ 3ರಂದು ಬೆಂಗಳೂರಿನಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿರುವ ಮಹಿಳೆಗೆ ಅನಾಮಧೇಯ ನಂಬರ್‌ನಿಂದ ಕರೆ ಬಂದಿದೆ. ಕರೆ ಮಾಡಿದವನು, ತಾನು ಮುಂಬೈ ಪೊಲೀಸ್ ಇಲಾಖೆ ಅಧಿಕಾರಿ ಎಂದು, ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಫೆಡ್‌ಎಕ್ಸ್ ಮೂಲಕ 140 ಗ್ರಾಂ ಡ್ರಗ್ಸ್ (ಮಾದಕವಸ್ತು) ಕೊರಿಯರ್ ಮಾಡಲಾಗಿದೆ ಎಂದಿದ್ದಾನೆ. ಅಷ್ಟೇ ಅಲ್ಲ, ಕರೆ ಮಾಡಿದ ದುಷ್ಕರ್ಮಿಯು ಮತ್ತೊಬ್ಬನಿಗೆ ಮೊಬೈಲ್ ಕೊಟ್ಟಿದ್ದು, ಆತನು ಸಿಬಿಐ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದಾನೆ. ಅಷ್ಟೇ ಅಲ್ಲ, ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಹವಾಲಾ ದಂಧೆ ಹಾಗೂ ಡ್ರಗ್ಸ್ ದಂಧೆಯ ಪ್ರಕರಣಗಳು ದಾಖಲಾಗಿವೆ ಎಂಬುದಾಗಿ ಹೆದರಿಸಿದ್ದಾನೆ.
ಸಿಬಿಐ ಅಧಿಕಾರಿಗಳು, ಡ್ರಗ್ಸ್ ದಂಧೆ, ಹಲವು ಕೇಸ್‌ಗಳಿಂದ ಹೆದರಿದ ಮಹಿಳೆಯು ದುಷ್ಕರ್ಮಿಗಳು ಹೇಳಿದ ಹಾಗೆ ಕೇಳಿದ್ದಾರೆ. ನಿಮ್ಮನ್ನು ಈ ಕೇಸ್‌ನಿಂದ ಪಾರುಮಾಡುತ್ತೇವೆ ಎಂಬುದಾಗಿಯೂ ದುಷ್ಕರ್ಮಿಗಳು ಭರವಸೆ ನೀಡಿದ್ದು, ಇದನ್ನು ಮಹಿಳೆ ನಂಬಿದ್ದಾರೆ. ಸುಮಾರು 36 ಗಂಟೆಗಳ ಕಾಲ ಮೊಬೈಲ್ ಕರೆಯಲ್ಲಿಯೇ ಕಾಲ ಕಳೆದ ಮಹಿಳೆಯು, ದುಷ್ಕರ್ಮಿಗಳ ಮಾತು ನಂಬಿ ಲ್ಯಾಪ್‌ಟಾಪ್‌ನ ವೆಬ್‌ಕ್ಯಾಮ್ ಮೂಲಕ ವಿಡಿಯೊ ಕಾಲ್ ಮಾಡಿದ್ದಾರೆ. ಡ್ರಗ್ಸ್ ಟೆಸ್ಟ್ ಎಂದು ನಂಬಿಸಿದ ದುರುಳರು, ಮಹಿಳೆಯು ಬೆತ್ತಲೆಯಾಗಿ ವೆಬ್ ಕ್ಯಾಮ್ ಎದುರು ನಿಲ್ಲುವಂತೆ ಮಾಡಿದ್ದಾರೆ. ಮಹಿಳೆಯ ಬೆತ್ತಲೆ ವಿಡಿಯೊವನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಬ್ಲ್ಯಾಕ್‌ಮೇಲ್ ಮೂಲಕ 15 ಲಕ್ಷ ರೂ. ವಂಚನೆ
ಮಹಿಳೆಯ ಬೆತ್ತಲೆ ವಿಡಿಯೊಗಳನ್ನು ಅವರ ಮೊಬೈಲ್‌ಗೆ ಕಳುಹಿಸಿದ ಆನ್‌ಲೈನ್ ವಂಚಕರು, ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಈ ವಿಡಿಯೊಗಳನ್ನು ಡಾರ್ಕ್‌ವೆಬ್‌ಗೆ ಕಳುಹಿಸುತ್ತೇವೆ ಎಂಬುದಾಗಿ ಹೆದರಿಸಿದ್ದಾರೆ. ಮರ್ಯಾದೆಗೆ ಅಂಜಿದ ಮಹಿಳೆಯು ಮೊದಲಿಗೆ 10.7 ಲಕ್ಷ ರೂಪಾಯಿಯನ್ನು ಟ್ರಾನ್ಸ್‌ಫರ್ ಮಾಡಿದ್ದಾರೆ. ಅದಾದ ನಂತರವೂ ಕ್ರೆಡಿಟ್ ಕಾರ್ಡ್ ಮೂಲಕ ಮತ್ತೆ 4 ಲಕ್ಷ ರೂ. ಕಳುಹಿಸಿದ್ದಾರೆ. ಇದಾದ ನಂತರ ಮತ್ತೆ ಕರೆ ಮಾಡಿದ ದುಷ್ಕರ್ಮಿಗಳು, ಇನ್ನೂ 10 ಲಕ್ಷ ರೂ. ಬೇಕು ಎಂದಿದ್ದಾರೆ. ಆಗ ಮಹಿಳೆಯು ಕರೆ ಮೊಟಕುಗೊಳಿಸಿ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇಂತಹ ವಂಚನೆಗಳು ಆಗಾಗ ನಡೆಯುವುದರಿಂದ, “ಫೆಡ್‌ಎಕ್ಸ್ ಸಂಸ್ಥೆಯು ಯಾವ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನೂ ಕೇಳುವುದಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Cyber Crime: ಆನ್‌ಲೈನ್ ವಂಚನೆಗೆ ಇನ್ನೊಂದು ಬಲಿ; ಮೆಸೇಜ್ ಕ್ಲಿಕ್ ಮಾಡಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ