Site icon Vistara News

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

BBMP Scam

102 Crore Rupees Illegally Transferred To Fake Societies By BBMP Officials

ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣವು ಗಂಭೀರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮತ್ತೊಂದು ಬಹುಕೋಟಿ ಹಗರಣವು ಬಯಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP Scam) ಅಧಿಕಾರಿಗಳು ಸುಮಾರು 102 ಕೋಟಿ ರೂಪಾಯಿಯನ್ನು ನಕಲಿ ಸೊಸೈಟಿಗಳಿಗೆ (Fake Societies) ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 9 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು, ಬಿಬಿಎಂಪಿ ಅಧಿಕಾರಿಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂದರೆ, 2020-21ರಲ್ಲಿ ನಕಲಿ ಸೊಸೈಟಿಗಳಿಗೆ 102 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ವಿಧವೆಯರಿಗೆ ಮೀಸಲಾದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 102 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಹಗರಣದಲ್ಲಿ ಶಾಮೀಲಾದ ಅಧಿಕಾರಿಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವ ಬಿ. ನಾಗೇಂದ್ರ 20% ತಿಂದಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ 80% ತಿಂದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಕುರಿತು ಸದನದಲ್ಲೂ ಆಗ್ರಹಿಸುತ್ತೇವೆ. ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಉಚಿತಗಳ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ. ಹಾಲಿನ ಬೆಲೆ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರೆ ಹೆಚ್ಚು ಹಾಲು ನೀಡಿದ್ದೇವೆ ಎನ್ನುತ್ತಾರೆ. ಆದರೆ ಹೆಚ್ಚಾದ ಹಣವನ್ನು ರೈತರಿಗೆ ಕೊಡುವುದಿಲ್ಲ. ಬಡವರು ಕೂಲಿ ಮಾಡಿ ದುಡಿದು ಮದ್ಯ ಸೇವಿಸಲು ಹೋದರೆ ಅದಕ್ಕೂ ದರ ಏರಿಕೆ ಮಾಡಿದ್ದಾರೆ. ಶ್ರೀಮಂತರು ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Exit mobile version