Site icon Vistara News

ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ

ಬೆಂಗಳೂರು: ಆಸ್ತಿ ನಿರ್ವಹಣೆ ಹಾಗೂ ಲೆಕ್ಕಪತ್ರ ವಿಚಾರದಲ್ಲಿ ಗಲಾಟೆ ತಾರಕಕ್ಕೇರಿ ಪುತ್ರನಿಗೆ ತಂದೆಯೇ ಬೆಂಕಿ ಹಚ್ಚಿದ್ದು, ಒಂದು ವಾರ ಆಸ್ಪತ್ರೆಯಲ್ಲಿ ನರಳಿದ ಪುತ್ರ ಗುರುವಾರ ಅಸುನೀಗಿದ್ದಾನೆ.

ಬೆಂಗಳೂರಿನ ಆಜಾದ್‌ ನಗರದಲ್ಲಿ ವಾಸಿಸುತ್ತಿದ್ದ ಸುರೇಂದ್ರ ಫ್ಯಾಬ್ರಿಕೇಷನ್‌ ಕೆಲಸ ಮಾಡುತ್ತಿದ್ದ. ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ, ಫ್ಯಾಬ್ರಿಕೇಷನ್‌ ಉದ್ಯಮದ ಅನೇಕ ವ್ಯವಹಾರಗಳನ್ನು ಪುತ್ರ ಅರ್ಪಿತ್‌ ನೋಡಿಕೊಳ್ಳುತ್ತಿದ್ದ. ಆದರೆ ವ್ಯವಹಾರದಲ್ಲಿ ಅರ್ಪಿತ್‌ ಏರುಪೇರು ಮಾಡಿದ್ದು, ಸುಮಾರು ಒಂದೂವರೆ ಕೋಟಿ ರೂ. ಲೆಕ್ಕ ನೀಡಿರಲಿಲ್ಲ ಎಂಬ ವಿಚಾರದಲ್ಲಿ ಅಪ್ಪ ಮಹನ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಕಳೆದ ವಾರ ಇಬ್ಬರ ನಡುವೆ ಗೋಡೌನ್‌ನಲ್ಲಿ ಕೆಲಸಗಾರರ ಎದುರೇ ಜಗಳ ತಾರಕಕ್ಕೇರಿತ್ತು. ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸಿಕೊಳ್ಳದ ಸುರೇಂದ್ರ, ಗೋಡೌನ್‌ನಲ್ಲಿದ್ದ ಸ್ಪಿರಿಟ್‌ ತೆಗೆದುಕೊಂಡು ಅರ್ಪಿತ್‌ ಮೇಲೆ ಎರಚಿದ್ದಾನೆ. ಬೆಂಕಿಯ ಅಪಾಯವನ್ನು ಗಮನಿಸಿದ ಅರ್ಪಿತ್‌ ಗೋಡೌನ್‌ನಿಂದ ನಡೆದು ರಸ್ತೆಗೆ ಬಂದಿದ್ದಾನೆ. ಆಗಲೂ ಬಿಡದ ಸುರೇಂದ್ರ, ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿದ್ದಾನೆ. ಬೆಂಕಿ ತಗಲುತ್ತಲೇ ಅರ್ಪಿತ್‌ ಅಲ್ಲಿಂದ ಓಡಿಹೋಗಿದ್ದಾನೆ. ಗೋಡೌನ್‌ನಿಂದ ಹೊರಬರುವ, ಬೆಂಕಿ ಹಚ್ಚುವ ಹಾಗೂ ಅರ್ಪಿತ್‌ ಓಡಿ ಹೋಗುವ ದೃಶ್ಯಾವಳಿಗಳು ಎದುರಿನ ಕಟ್ಟಡದ CCTV ಯಲ್ಲಿ ದಾಖಲಾಗಿದೆ.

ಮತ್ತೊಂದು ಕ್ರೈಂ ಸುದ್ದಿ: ಊಟಕ್ಕೆ ಹೋಗಿದ್ದ ಸ್ನೇಹಿತರ ಜೊತೆ ಹಂತಕರ ಕಿರಿಕ್‌: ಮಾರಕಾಸ್ತ್ರಗಳಿಂದ ಅಟ್ಯಾಕ್!

ನಂತರ ಸುಪ್ರೀತ್‌ ಪರಿಸ್ಥಿತಿಯನ್ನು ಕಂಡ ಪರಿಚಯಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ವಾರ ಚಿಕಿತ್ಸೆ ಪಡೆಯುತ್ತಲೇ ನೃಳಾಡುತ್ತಿದ್ದ ಅರ್ಪಿತ್‌ ಗುರುವಾರ ಕೊನೆಯುಸಿರೆಳೆದಿದ್ದಾನೆ. ಸಾವಿಗೀಡಾಗುವುದಕ್ಕೂ ಮುನ್ನ ಅರ್ಪಿತ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇದರ ಆಧಾರದಲ್ಲಿ ಚಾಮರಾಜಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸುರೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

https://vistaranews.com/wp-content/uploads/2022/04/c150edf8-5037-4a33-9580-a691b9929d86.mp4
Exit mobile version