ಬೆಂಗಳೂರು: ಮಲ್ಲೇಶ್ವರದಲ್ಲಿ ವೃದ್ಧೆಯೊಬ್ಬರ ಮನೆಯಲ್ಲಿರುವ ಮರದಿಂದ ತೆಂಗಿನಕಾಯಿ ಕೀಳಲು ಆಗಮಿಸಿದ್ದ ಆಸಾಮಿ, ಮಾಲೀಕರ ಕುತ್ತಿಗೆಯಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಲ್ಲೇಶ್ವರದಲ್ಲಿ ಮನೆಯಿರುವ ವೃದ್ಧೆಯು ತೆಂಗಿನಕಾಯಿ ಕೀಳಿಸಲು ಸಭಾಪತಿ(45) ಎಂಬ ವ್ಯಕ್ತಿಯನ್ನು ಕರೆಸಿದ್ದರು. ಈ ಹಿಂದೆಯೂ ಕಾಯಿ ಕೀಳಲು ಆಗಮಿಸಿದ್ದ ವ್ಯಕ್ತಿಯನ್ನು ಮನೆಯವರು ನಂಬಿದ್ದರು. ಆದರೆ ಈ ವೇಳೆ ಆಗಮಿಸಿದ ಆರೋಪಿ, ವೃದ್ಧೆ ಒಬ್ಬರೇ ಇರುವುದನ್ನು ಗಮನಿಸಿದ್ದಾನೆ. ತೆಂಗಿನಕಾಯಿ ಕೀಳಲು ತಂದಿದ್ದ ಮಚ್ಚು ತೋರಿಸಿ ವೃದ್ಧೆಯನ್ನು ಬೆದರಿಸಿದ್ದಾನೆ. ಕುತ್ತಿಗೆಯಲ್ಲಿದ್ದ 50 ಗ್ರಾಂ ಸರವನ್ನು ಕಸಿದು, ಮಚ್ಚಿನಿಂದ ಹಲ್ಲೆಯನ್ನೂ ನಡೆಸಿ ಪರಾರಿಯಾಗಿದ್ದಾನೆ.
ಸರವನ್ನು ಕಸಿದವನೇ ತಮಿಳುನಾಡಿನ ಕೃಷ್ಣಗಿರಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣದ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ಮನೆಯ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೃಷ್ಣಗಿರಿಗೇ ತೆರಳಿ ಆರೋಪಿಯನ್ನು ಬಂಧಿಸಿ, ಸರವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.