ಬೆಂಗಳೂರು: ಮನೆಗಳ್ಳತನ ಮಾಡಿ ಚಿನ್ನದೊಂದಿಗೆ ಪರಾರಿಯಾಗಿದ್ದ ವ್ಯಕ್ತಿ, ಗಿರವಿ ಅಂಗಡಿಯಲ್ಲಿ ಬಂಗಾರ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ (Gold theft) ನಡೆದಿದೆ.
ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣದ ಪೈಲಿ, ಗಡಿಬಿಡಿಯಲ್ಲಿ ಈತ 70 ಗ್ರಾಂ ಅನ್ನು ಕದ್ದಿದ್ದ. ಕಬೋರ್ಡ್ ಗೆ ಕೈ ಹಾಕಿದ ಬಳಿಕ, ಮೊದಲಿಗೆ ಸಿಕ್ಕ 70 ಗ್ರಾಂ ಚಿನ್ನಾಭರಣ ಸಮೇತ ಪರಾರಿಯಾಗಿದ್ದ. ಅಲ್ಲೆ ಪಕ್ಕದ ಬ್ಯಾಗ್ ನಲ್ಲಿ 150 ಗ್ರಾಂ ಚಿನ್ನ ಮತ್ತು 1 ಲಕ್ಷ ಹಣ ಇತ್ತೆಂಬುದು ಆತನಿಗೆ ಗಮನಕ್ಕೆ ಬಂದಿರಲಿಲ್ಲ. ಆರೋಪಿ ಪ್ರಶಾಂತ್ ಪಚ್ಚಿಯನ್ನು ಶೇಷಾದ್ರಿ ಪುರಂ ಪೊಲೀಸರು ಬಂಧಿಸಿದ್ದಾರೆ.
ಮನೆಕಳ್ಳತನ ಮಾಡಿದ ಪ್ರಶಾಂತ್, ಸದಾಶಿವನಗರದವರೆಗೂ ನಡೆದುಕೊಂಡು ಹೋಗಿದ್ದ. ಕೊನೆಗೆ ಆಟೋದಲ್ಲಿ ಹೋಗಿ ಮತ್ತಿಕೆರೆ ಸಮೀಪದ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಅಡವಿಟ್ಟಿದ್ದ ಆರೋಪಿಗಾಗಿ ಪೊಲೀಸರು 150 ಸಿಸಿಟಿವಿಗಳಲ್ಲಿ ಹುಡುಕಾಟ ನಡೆಸಿದ್ದರು.
ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಅಡವಿಟ್ಟಾಗ ಕೊಟ್ಟ ಆಧಾರ್ ಕಾರ್ಡ್ ಮೂಲಕ ಆರೋಪಿಯ ಸುಳಿವು ಲಭಿಸಿದೆ. ಪ್ರಶಾಂತ್ ಈ ಹಿಂದೆ ಯಶವಂತಪುರ ಸೇರಿ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 70 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ.