Site icon Vistara News

Aero India 2023: ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Rajnath singh says Aero India 2023 will generate more employment to karnataka youth

#image_title

ಬೆಂಗಳೂರು: ಬೆಂಗಳೂರಿನಲ್ಲಿ ಏರೋ ಇಂಡಿಯಾ ಆಯೋಜನೆ ಆಗುತ್ತಿರುವುದು ಇಲ್ಲಿನ ಕೌಶಲ್ಯಯುತ ಯುವಕರಿಗೆ ಉದ್ಯೋಗ ಸೃಜನೆ ಮಾಡಲು ಪೂರಕವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ 2023ರ (Aero India 2023) ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಏರೋ ಇಂಡಿಯಾ ಆಯೋಜನೆಯು ರಕ್ಷಣಾ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ನೀಡುತ್ತದೆ. ಜತೆಗೆ ಪ್ರಧಾನ ಮಂತ್ರಿಯವರು ನೀಡಿದ ಆತ್ಮನಿರ್ಭರ ಭಾರತದ ಪ್ರದರ್ಶನವಾಗುತ್ತದೆ. ನಾವು ಈ ಬಾರಿ ಬಹುದೊಡ್ಡ ಕಾರ್ಯಕ್ರಮ ಮಾಡುವ ಯೋಚನೆಯಿತ್ತು. ಈ ವರ್ಷ 100 ದೇಶಗಳ 800 ಎಕ್ಸಿಬಿಟರ್ಸ್‌ಗಳೊಂದಿಗೆ ನಡೆಯುತ್ತಿದೆ. ಇದು ದೇಶದಲ್ಲಿ ಇಲ್ಲಿವರೆಗಿನ ಅತಿ ದೊಡ್ಡ ಕಾರ್ಯಕ್ರಮ.

ನಮ್ಮ ದೇಶದ ಬೆಳವಣಿಗೆಗೆ ಕೊಡುಗೆ ನೀಡುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿನ ಕೌಶಲ್ಯಯುತ ಮಾನವ ಸಂಪನ್ಮೂಲದ ಕಾರಣಕ್ಕೆ ಖಾಸಗಿ, ಸರ್ಕಾರಿ ಸಂಸ್ಥೆಗಳು ಇಲ್ಲಿ ನೆಲೆ ಕಂಡಿವೆ. ಇದೆಲ್ಲದರಿಂದಾಗಿ ಏರೋ ಸ್ಪೇಸ್‌ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು, ಭವಿಷ್ಯದಲ್ಲಿ ವಿಶ್ವದ ಏರೋ ಸ್ಪೇಸ್‌ ಕೇಂದ್ರವಾಗಲಿದೆ ಎಂಬ ನಿರೀಕ್ಷೆಯಿದೆ. ಇದರಲ್ಲಿ ಕರ್ನಾಟಕ ಪೆವಿಲಿಯನ್‌ ಸಹ ಇರಲಿದೆ. ಹೊರಗಿನಿಂದ ಆಗಮಿಸುವ ಹೂಡಿಕೆಯಲ್ಲಿ ಹೆಚ್ಚಿನ ಅಂಶ ಕರ್ನಾಟಕದಲ್ಲಿ ಆಗುವ ಸಾಧ್ಯತೆಯಿದೆ. ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಅತಿ ಹೆಚ್ಚು ಲಾಭ ಆಗುತ್ತದೆ ಎಂದರು.

ಇದನ್ನೂ ಓದಿ: Aero India 2023 : ಏರೋ ಇಂಡಿಯಾ ಶೋಗೆ ಪ್ರಧಾನಿ ಮೋದಿ ನಾಳೆ ಚಾಲನೆ, ಇಲ್ಲಿದೆ ವಿವರ

ಪದವಿಗಳು ಹೆಚ್ಚಾಗುತ್ತಿರುವುದು ಹೆಚ್ಚುತ್ತಿರುವ ನಿರುದ್ಯೋಗದ ಗುರುತು ಆಗಬಾರದು. ಇದೇ ಮಣ್ಣಿನ ಮಹಾನ್‌ ಪುತ್ರ ಸರ್‌ ಎಂ. ವಿಶ್ವೇಶ್ವರಯ್ಯ ಹೇಳಿದಂತೆ, ಉತ್ತಮ ದೇಶ ನಿರ್ಮಾಣಕ್ಕೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಬೇಕು. ಇದರತ್ತ ಏರೋ ಇಂಡಿಯಾ ಪರಿಣಾಮಕಾರಿ ಆಗಲಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ದೇಶಗಳೊಂದಿಗೆ ನಮ್ಮ ಮನಸ್ಸು ಮತ್ತು ವಿಚಾರಗಳ ಸಂಬಂಧವೂ ಇದೆ. ಇದೇ ಕಾರಣಕ್ಕೆ ಏರೋ ಇಂಡಿಯಾ ಎಲ್ಲ ದಾಖಲೆಗಳನ್ನೂ ಮೀರಿ ಮುಂದುವರಿಯುತ್ತಿದೆ. ರಕ್ಷಣಾ ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಿದಷ್ಟೂ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲಿ ಸಂಶೋಧನೆ ನಡೆಸುವ ಅನೇಕ ತಂತ್ರಜ್ಞಾನಗಳು ಸಾಮಾನ್ಯ ಜಗತ್ತಿನಲ್ಲೂ ಉಪಯೋಗಕ್ಕೆ ಬರುತ್ತವೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವುದರ ಜತೆಗೆ ದೇಶದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಈ ಕಾರ್ಯಕ್ರಮ ಸಹಕಾರಿ ಎಂದರು.

ಹೊಸ ವಿಚಾರಗಳಿಗೆ ಆದ್ಯತೆ ನೀಡಿದ ಬಸವಣ್ಣ, ಬೆಂಗಳೂರು ಸ್ಥಾಪಿಸಿದ ಕೆಂಪೇಗೌಡರನ್ನು ಭಾಷಣದ ಆರಂಭದಲ್ಲಿ ರಾಜನಾಥ್‌ ಸಿಂಗ್‌ ಸ್ಮರಿಸಿದರು.

ವಿಂಗ್ಸ್‌ ಆಫ್‌ ಫ್ಯೂಚರ್‌
ಭಾರತದ ಪೆವಿಲಿಯನ್‌ನಲ್ಲಿ, ಭಾರತದ ಭಾವಿಷ್ಯದ ಸಾಮರ್ಥ್ಯವನ್ನು ತೋರಿಸಲಿದೆ. ಈಗಾಗಲೆ ಸ್ಥಾಪಿತವಾದ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶೀಸಲಿವೆ. ರಕ್ಷಣಾ ಸಚಿವರ ಕಾನ್‌ಕ್ಲೇವ್‌ ಒಂದು ಬಹುಮುಖ್ಯ ಕಾರ್ಯಕ್ರಮ. ನಮ್ಮ ಮಿತ್ರ ದೇಶಗಳೊಂದಿಗೆ ರಕ್ಷಣಾ ಸಹಕಾರಕ್ಕೆ ಪೂರಕವಾಗಲಿದೆ. ಇದರ ಜತೆಗೆ ಸಿಇಒ ರೌಂಡ್‌ ಟೇಬಲ್‌ ಸಹ ನಡೆಯಲಿದೆ, ಇದೂ ಬಹುಮುಖ್ಯ ಭಾಗ. ಸ್ಟಾರ್ಟಪ್‌ ಮಂಥನ್‌ ಕಾರ್ಯಕ್ರಮದಲ್ಲಿ, ಯುವ ಉದ್ಯಮಿಗಳಿಗೆ ಪೂರಕ ವೇದಿಕೆ ಲಭಿಸಲಿದೆ.

ಭಾರತದಲ್ಲೇ ವಿಮಾನ ಉತ್ಪಾದನೆ ಆಗಲಿದೆ
ಇದಕ್ಕೂ ಮೊದಲು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 14ನೇ ಬಾರಿ ಏರೋ ಇಂಡಿಯಾ ಆಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಧನ್ಯವಾದಗಳು.

ಏರೋ ಇಂಡಿಯಾವನ್ನು ಆಯೋಜಿಸುವ ಭಾರತದ ಸಾಮಮರ್ಥ್ಯವನ್ನು ಕೋವಿಡ್‌ ಪ್ರಶ್ನಿಸಿತು. ಪ್ಯಾರಿಸ್‌ ಏರ್‌ ಷೋ ರದ್ದಾಯಿತು. ಆದರೆ ಭಾರತದಲ್ಲಿ ನಡೆಯಿತು. ಏರೋ ಇಂಡಿಯಾ ಕಾರ್ಯಕ್ರಮವು ಅತ್ಯಂತ ದೊಡ್ಡದಾಗಿ ಆಯೋಜನೆ ಆಗುತ್ತಿದೆ. ಕಳೆದ್‌ ವರ್ಷ 23 ಸಾವಿರ ಚದರ ಮೀಟರ್‌ ವಿಸ್ತೀರ್ಣದಲ್ಲಿದ್ದ ಪ್ರದರ್ಶನ ವಿಸ್ತೀರ್ಣವು ಈ ಬಾರಿ 35 ಸಾವಿರ ಚದರ ಮೀಟರ್‌ ಆಗಿದೆ. ಹಾರಾಟ ಪ್ರದರ್ಶನ 67 ಇದೆ. 800 ಪ್ರದರ್ಶಕರು ಆಗಮಿಸುತ್ತಿದ್ದಾರೆ. ಕಳೆದ ಬಾರಿ 55 ದೇಶಗಳಿಂದ ಭಾಗಿಯಾಗಿದ್ದು, ಈ ಬಾರಿ 98 ದೇಶಗಳಿಂದ ಆಗಮಿಸಲಿದ್ದಾರೆ.

ವಾಯು ದಳವು ಯಾವ ಸಮಯಕ್ಕೆ ಆಗಮಿಸುತ್ತದೆ ಎನ್ನುವುದು ಯುದ್ಧದ ಫಲಿತಾಂಶವನ್ನು ನಿರ್ಧರಿಸುತ್ತದೆ. ವಾಯು ದಳವನ್ನು ಬಲಗೊಳಿಸುವುದು ನಿರಂತರ ಪ್ರಯತ್ನ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ರಕ್ಷಣಾ ಉತ್ಪಾದನೆ, ರಕ್ಷಣಾ ತಂತ್ರಜ್ಞಾನ ಉತ್ತೇಜನದಲ್ಲಿ ಅಗಾಧ ಬದಲಾವಣೆ ಆಗಿದೆ. ನಮ್ಮ ರಕ್ಷಣಾ ಅವಶ್ಯಕತೆಯ ಶೇ. 77 ಆಮದಾಗುತ್ತಿತ್ತು. ಈಗ ಶೇ. 67 ಉತ್ಪಾದನೆ ಮಾಡುವುದರೊಂದಿಗೆ ರಫ್ತನ್ನೂ ಮಾಡುತ್ತಿದ್ದೇವೆ.

ಏರೋ ಸ್ಪೇಸ್‌ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 1940ರ ಅವಧಿಯಿಂದಲೂ ಏರೋ ಸ್ಪೇಸ್‌ ಕ್ಷೇತ್ರಕ್ಕೆ ಉತ್ತೇಜನ ಲಭಿಸುತ್ತಿದೆ. ಎಚ್‌ಎಎಲ್‌ ನಂತರದಲ್ಲಿ ಎನ್‌ಎಎಲ್‌, ಬಿಎಚ್‌ಇಎಲ್‌, ಇಸ್ರೊ ಸೇರಿ ಅನೇಕ ಸಂಸ್ಥೆಗಳು ಆರಂಭವಾಗಿದ್ದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೂ ಉತ್ತೇಜನ ಸಿಕ್ಕಿತು. ಪ್ರತಿ ದಶಕದಲ್ಲೂ ಬೆಂಗಳೂರಿನಲ್ಲಿ ಒಂದಲ್ಲ ಒಂದು ಪ್ರಮುಖ ಬೆಳವಣಿಗೆ ನಡೆಯುತ್ತಿದೆ. ಒಂದು ಪೂರಾ ವಿಮಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಕನಸಾಗಿದ್ದು, ಆ ದಿನ ಅತ್ಯಂತ ದೂರದಲ್ಲಿಲ್ಲ ಎಂದರು.

ಏರೋ ಇಂಡಿಯಾ ವಿಶೇಷತೆಗಳು
ಫೆಬ್ರವರಿ 14ರಂದು ನಡೆಯಲಿರುವ ರಕ್ಷಣಾ ಸಚಿವರ ಕಾನ್‌ಕ್ಲೇವ್‌ನಲ್ಲಿ 32 ವಿದೇಶಗಳ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ. ಏರೋ ಇಂಡಿಯಾದಲ್ಲಿ 23 ದೇಶಗಳ ವಾಯು ದಳದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

Exit mobile version