Site icon Vistara News

ಬಿಬಿಎಂಪಿ ಚುನಾವಣೆ | ಒಂದೇ ದಿನ ಮೂರೂ ಪಕ್ಷಗಳ ರಣಕಹಳೆ: ಚುನಾವಣಾ ಕಣ ಸಿದ್ಧತೆ ಆರಂಭ

BJP nalin kumar kateel

ಬೆಂಗಳೂರು: ಸರಿಸುಮಾರು ಎರಡು ವರ್ಷದಿಂದ ಸದಸ್ಯರಿಲ್ಲದೆ ಬಣಗುಡುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ನಡೆಯುವುದು ಖಚಿತ ಎನ್ನುವ ಮಾಹಿತಿ ಲಭಿಸುತ್ತಿದ್ದಂತೆಯೇ ಮೂರೂ ಪ್ರಮುಖ ಪಕ್ಷಗಳು ಒಂದೇ ದಿನದಲ್ಲಿ ಕಾರ್ಯಾರಂಭ ಮಾಡಿವೆ.

ಎಲ್ಲ ಪಕ್ಷಗಳ ಶಾಸಕರೂ ಸೇರಿ ಬಿಬಿಎಂಪಿ ಚುನಾವಣೆ ಮುಂದೂಡಲು ವಿವಿಧ ಪ್ರಯತ್ನ ನಡೆಸಿದರೂ ನ್ಯಾಯಾಲಯದ ಸೂಚನೆ ಮೇರೆಗೆ ವಾರ್ಡ್‌ ಮರುವಿಂಗಡಣೆ ನಡೆದಿದೆ. ಮೀಸಲಾತಿ ಕರಡು ಪಟ್ಟಿ ಪ್ರಕಟಣೆಯೂ ಆಗಿದೆ. ಇನ್ನು ಕೆಲವೇ ದಿನದಲ್ಲಿ ಮೀಸಲಾತಿ ಅಂತಿಮ ಅಧಿಸೂಚನೆಯೂ ಹೊರಬೀಳಲಿದ್ದು, ಈ ಪ್ರಕ್ರಿಯೆ ಮುಗಿದ ಕೂಡಲೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡುತ್ತದೆ.

ಈಗಾಗಲೆ ಪ್ರಕಟವಾಗಿರುವ ವಾರ್ಡ್‌ ಮರುವಿಂಗಡಣೆ ವಿರುದ್ಧವೂ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಆಗಿದೆ. ಮೀಸಲಾತಿ ಕರಡು ಪಟ್ಟಿಗೆ ಈಗಾಗಲೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಕದ ತಟ್ಟುವುದಾಗಿ ಬಹಿರಂಗವಾಗಿಯೇ ಹೇಳಿದೆ. ನ್ಯಾಯಾಲಯದ ಬಾಗಿಲಲ್ಲಿ ತೆರಳಿದ ನಂತರವೂ ಚುನಾವಣೆ ಮುಂದೂಡಲು ನ್ಯಾಯಾಲಯ ಒಪ್ಪದಿದ್ದರೆ ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಸಿದ್ಧತೆಗೆ ಚಾಲನೆ ನೀಡಿವೆ.

ಜೆಡಿಎಸ್‌ ಎರಡು ಸಮಿತಿ ರಚನೆ

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿರುವುದು ಜೆಡಿಎಸ್‌ ಪಕ್ಷ. ಆದರೆ ಬಿಬಿಎಂಪಿ ಚುನಾವಣೆಯನ್ನು ಜೆಡಿಎಸ್‌ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ನೇರವಾಗಿ ಬಿಬಿಎಂಪಿ ಚುನಾವಣೆ ಸಭೆ ಎಂದು ಹೇಳಿಲ್ಲವಾದರೂ ಜನತಾ ಜಲಧಾರೆ ಸೇರಿ ವಿವಿಧ ಹೆಸರುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುಂಚೆಯೇ ಜೆಡಿಎಸ್‌ ಚುನಾವಣಾ ಪ್ರಣಾಳಿಕೆ ಸಮಿತಿ ಹಾಗೂ ಉಸ್ತುವಾರಿ ಸಮಿತಿ ರಚನೆ ಮಾಡಿದೆ.

ವಿಧಾನ ಪರಿಷತ್‌ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಸದಸ್ಯರಾಗಿ ಕೆ.ವಿ. ನಾರಾಯಣಸ್ವಾಮಿ, ಸಿ.ರಾಜಣ್ಣ, ಎಸ್‌.ರಮೇಶ್‌, ಎಚ್‌.ಎಸ್‌. ದೇವರಾಜು, ಸುಮಿತ್ರಾ ಹಾಗೂ ಶೈಲಾ ಅವರನ್ನು ನೇಮಿಸಲಾಗಿದೆ.

ಚುನಾವಣಾ ಉಸ್ತುವಾರಿಗಾಗಿ ರಚಿಸಿರುವ ಸಮಿತಿಯ ಅಧ್ಯಕ್ಷರಾಗಿ ದಾಸರಹಳ್ಳಿ ಶಾಸಕ ಆರ್‌. ಮಂಜುನಾಥ್‌ ನೇಮಕವಾಗಿದ್ದಾರೆ. ಸಂಚಾಲಕರಾಗಿ ಬೆಂಗಳೂರು ಜೆಡಿಎಸ್‌ ಅಧ್ಯಕ್ಷ ಆರ್‌. ಪ್ರಕಾಶ್‌, ಸದಸ್ಯರಾಗಿ ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಟಿ.ಎ. ಶರವಣ, ಮಾಜಿ ಶಾಸಕ ಎಚ್‌.ಎಂ. ರಮೇಶ್‌ ಗೌಡ, ಸೈಯದ್‌ ಮೊಹಿದ್‌ ಅಲ್ತಾಫ್‌, ರೂತ್‌ ಮನೋರಮಾ, ವಿ. ನಾರಾಯಣಸ್ವಾಮಿ, ಇಮ್ರಾನ್‌ ಪಾಷಾ, ಶಂಶುಲ್‌ಹಕ್‌ ಖಾನ್‌ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

ಕಾಂಗ್ರೆಸ್‌ ಸಮಾವೇಶ

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಮೀಸಲಾತಿ ಪಟ್ಟಿ ಪ್ರಕರಣ ಸಂಬಂಧ ನ್ಯಾಯಾಲಯ ಕದ ತಟ್ಟುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್‌, ಇನ್ನೊಂದೆಡೆ ಚುನಾವಣೆ ತಯಾರಿಗೂ ಚಾಲನೆ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಬಿಎಂಪಿ ಚುನಾವಣೆ ಪೂರ್ವಸಿದ್ಧತೆ ಸಭೆ ಆಯೋಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್‌, ಬೆಂಗಳೂರಿನಲ್ಲಿ ನಾವು ಸಮೀಕ್ಷೆ ಮಾಡಿದ್ದು ಜನ ದೊಡ್ಡ ಬದಲಾವಣೆಯನ್ನು ಬಯಸಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಅವರು ಇಚ್ಛಿಸಿದ್ದಾರೆ. ಒಂದು ಕಾಲದಲ್ಲಿ ಬಸವನಗುಡಿ, ರಾಜಾಜಿನಗರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಎಸ್.ಎಂ. ಕೃಷ್ಣ ಅವರ ಸರ್ಕಾರದ ನಂತರ ನಮ್ಮ ಪಕ್ಷದವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಂತರ ಶಾಸಕರಾದ ಇತಿಹಾಸ ಇದೆ.

ನಾವು ಮಹಿಳೆಯರಿಗೆ ಮೀಸಲಾತಿ ವಿರೋಧಿಸುವುದಿಲ್ಲ. ಅವರಿಗೆ ರಾಜಕೀಯ ಶಕ್ತಿ ನೀಡಬೇಕೆಂಬುದು ನಮ್ಮ ಉದ್ದೇಶ. ಆದರೆ ಅವಕಾಶವನ್ನು ಸಮಾನವಾಗಿ ಹಂಚಬೇಕು. ಆದರೆ ಮೀಸಲಾತಿಯನ್ನು ಒಂದು ಕಡೆಗೆ ಕೇಂದ್ರೀಕರಿಸಿರುವುದು ಬಹಳ ಅನ್ಯಾಯ. ಈ ಬಗ್ಗೆ ಹೋರಾಟ ಮುಂದುವರಿಸಿ, ಅಕ್ಷೇಪ ಸಲ್ಲಿಸಿ ಎಂದು ನಾವು ತಿಳಿಸಿದ್ದೇವೆ. ಮತದಾರರ ಪಟ್ಟಿಯಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಮತದಾರರನ್ನು ತೆಗೆದುಹಾಕಲಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಪಟ್ಟಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಪ್ರತ್ಯೇಕ ಸಭೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಪಾಲಿಕೆ ಚುನಾವಣೆಗೆ ಸಿದ್ಧವಾಗಿದ್ದು, ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿದ್ದೇವೆ ಎಂದಿದ್ದಾರೆ. ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ , ಮುಖಂಡರಾದ ಆರ್.ಕೆ. ರಮೇಶ್, ಸುಷ್ಮಾ ರಾಜಗೋಪಾಲ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಬಿಬಿಎಂಪಿ ಸಿದ್ಧತೆ ಕಾರ್ಯಕ್ರಮಗಳನ್ನು ಡಿ.ಕೆ. ಶಿವಕುಮಾರ್‌ ಸೋಮವಾರವೂ ಮುಂದುವರಿಸಿದ್ದು, ರಾಜಾಜಿನಗರ, ಮಹಾಲಕ್ಷ್ಮೀಲೇಔಟ್‌, ದಾಸರಹಳ್ಳಿ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಅಮೃತ ಮಹೋತ್ಸವದ ಮೂಲಕ ಚಾಲನೆ

ಬಿಬಿಎಂಪಿ ಚುನಾವಣೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ, ಪ್ರತಿ ಮನೆಗೆ ಧ್ವಜ ಕಾರ್ಯಕ್ರಮದ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಕಣಕ್ಕಿಳಿದಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ಪೌರ ಕಾರ್ಮಿಕರ ಏಳಿಗೆಗಾಗಿ ಜೀವನವನ್ನೇ ಮುಡಿಪಿಟ್ಟ ಮಾಜಿ ಶಾಸಕ ದಿವಂಗತ ಐಪಿಡಿ ಸಾಲಪ್ಪ ಅವರ ಮನೆಗೆ ಕಟೀಲ್‌ ಭೇಟಿ ನೀಡಿದರು. ಸಾಲಪ್ಪ ಪುತ್ರ ಅಶೋಕ್ ಸಾಲಪ್ಪ ಅವರಿಗೆ ರಾಷ್ಟ್ರ ಧ್ವಜವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಜಗ್ಗೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಭಾಗ ಸಂಘಟನಾ ಕಾರ್ಯದರ್ಶಿ ದಶರಥ್, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್. ರಮೇಶ್, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಮಂಜುನಾಥ್ ಸೇರಿ ಅನೇಕರು ಸಾಥ್‌ ನೀಡಿದರು. ಸಾಲಪ್ಪ ಅವರ ಮನೆಯ ನಂತರ, ಚಲನಚಿತ್ರ ನಟ ಕಿಚ್ಚ ಸುದೀಪ್‌ ಅವರ ಮನೆಗೆ ತೆರಳಿದ ತಂಡ, ಅವರಿಗೂ ರಾಷ್ಟ್ರಧ್ವಜ ನೀಡಿತು.

ಮನೆಮನೆಗೆ ಧ್ವಜ ಹಂಚುವ ಮೂಲಕ ಬೆಂಗಳೂರಿನ ಮನೆಗಳನ್ನು ಸಂಪರ್ಕಿಸಿ ಈ ಮೂಲಕವೇ ಪಕ್ಷದ ಪ್ರಚಾರವನ್ನು ನಡೆಸುವ ತಂತ್ರವನ್ನು ಬಿಜೆಪಿ ಹೆಣೆದಿದೆ. ತೀವ್ರ ಮಳೆಯಿಂದ ಬಡಾವಣೆಗಳಲ್ಲಿ ಹಾನಿ, ರಸ್ತೆ ಗುಂಡಿಗಳು ಸೇರಿ ಅನೇಕ ಸಮಸ್ಯೆಗಳಿಂದ ಸಾರ್ವಜನಿಕರ ವಿರೋಧವನ್ನು ಕಡಿಮೆ ಮಾಡಲು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಮಾರ್ಗ ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆರ್ಡರ್‌

Exit mobile version