ರಮೇಶ ದೊಡ್ಡಪುರ, ಬೆಂಗಳೂರು
ಅನೇಕ ತಿಂಗಳುಗಳ ನನೆಗುದಿಗೆ, ನ್ಯಾಯಾಲಯದ ಚಾಟಿ ನಂತರ ರೂಪಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಡ್ ಮೀಸಲಾತಿಯನ್ನು, ಚುನಾವಣೆಯನ್ನು ಮುಂದೂಡುವ ಸಲುವಾಗಿಯೇ ರೂಪಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎಸ್‌ಸಿಎಸ್‌ಟಿ ಮೀಸಲಾತಿ, ಮಹಿಳಾ ಮೀಸಲಾತಿ ನಿಗದಿಯಲ್ಲಿ ಯದ್ವಾತದ್ವ ದಂಡ ಚಲಾಯಿಸಲಾಗಿದೆ. ಒಂದಿಡೀ ವಿಧಾನಸಭಾ ಕ್ಷೇತ್ರವನ್ನೇ ಮಹಿಳಾ ಮೀಸಲು ಮಾಡಿದ ಉದಾಹರಣೆಯೂ ಇದೆ.
ಎಂಟು ವಾರದೊಳಗೆ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸುವಂತೆ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ತಿಳಿಸಿತ್ತು. ಅದರಂತೆ ಮರುವಿಂಗಡಣೆ ಮಾಡಿದ್ದ ಸರ್ಕಾರ ಬುಧವಾರವಷ್ಟೆ ಮೀಸಲು ನಿಗದಿಪಡಿಸಿ ಕರಡು ಪ್ರಕಟಿಸಿದೆ.
2021ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದಾಗಿರುತ್ತದೆ. ಬೆಂಗಳೂರಿನ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿರುವ 436ನೇ ಕೊಠಡಿಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ಆಕ್ಷೇಪಣೆಯನ್ನು ಏಳು ದಿನಗಳ ಒಳಗೆ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಂಪೂರ್ಣ ವಾರ್ಡ್ ಮಹಿಳಾ ಮೀಸಲು
ಮಹಿಳಾ ಮೀಸಲಾತಿಯನ್ನು ಶೇ.50 ನಿಗದಿಪಡಿಸಬೇಕು. ಅದರಂತೆ, ಒಟ್ಟು 243 ವಾರ್ಡ್‌ಗಳಲ್ಲಿ 130ನ್ನು ಮಹಿಳಾ ಮೀಸಲಾತಿ ಮಾಡಲಾಗಿದೆ. ಆದರೆ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ಏಳೂ ವಾರ್ಡ್‌ಗಳನ್ನೂ ಮಹಿಳಾ ಮೀಸಲು ನಿಗದಿ ಮಾಡಲಾಗಿದೆ. ದತ್ತಾತ್ರೇಯ ದೇವಸ್ಥಾನ ವಾರ್ಡ್-ಸಾಮಾನ್ಯ ಮಹಿಳೆ, ಗಾಂಧಿನಗರ ವಾರ್ಡ್- ಹಿಂದುಳಿದ ವರ್ಗ್-1 ಮಹಿಳೆ, ಸುಭಾಷ್ ನಗರ ವಾರ್ಡ್- ಎಸ್‌ಸಿ ಮಹಿಳೆ, ಓಕಳಿಪುರ ವಾರ್ಡ್- ಎಸ್‌ಸಿ ಮಹಿಳೆ, ಬಿನ್ನಿಪೇಟೆ ವಾರ್ಡ್- ಸಾಮಾನ್ಯ ಮಹಿಳೆ, ಕಾಟನ್‌ಪೇಟೆ ವಾರ್ಡ್- ಸಾಮಾನ್ಯ ಮಹಿಳೆ, ಚಿಕ್ಕಪೇಟೆ ವಾರ್ಡ್- ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿ ಮಾಡಲಾಗಿದೆ.
ನಂತರದಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿರುವ ಒಂಭತ್ತು ವಾರ್ಡ್‌ಗಳ ಪೈಕಿ ಸುದ್ದಗುಂಟೆ ಪಾಳ್ಯ ವಾರ್ಡ್(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿದೆ. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಪ್ರತಿನಿಧಿಸುವ ಜಯನಗರ ವಿಧಾನಸಭಾ ಕ್ಷೇತ್ರದ ಆರು ವಾರ್ಡ್‌ಗಳ ಪೈಕಿ ಜೆ.ಪಿ. ನಗರ(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿದೆ. ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ಸಗಾಯಪುರಂ ವಾರ್ಡ್(ಸಾಮಾನ್ಯ) ಹೊರತುಪಡಿಸಿ ಉಳಿದ ಆರನ್ನು ಮಹಿಳಾ ಮೀಸಲು ಮಾಡಲಾಗಿದೆ. ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿ ನಗರ ಕ್ಷೇತ್ರದಲ್ಲಿ ಅಲಸೂರು ವಾರ್ಡ್(ಎಸ್‌ಸಿ) ಹೊರತುಪಡಿಸಿ ಉಳಿದ ಐದು ವಾರ್ಡ್‌ಗಳನ್ನು ಮಹಿಳಾ ಮೀಸಲು ಮಾಡಲಾಗಿದೆ. ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ಕ್ಷೇತ್ರದ ದೊಮ್ಮಲೂರು ವಾರ್ಡ್(ಎಸ್‌ಸಿ) ಹೊರತುಪಡಿಸಿ ಉಳಿದ ಆರೂ ವಾರ್ಡ್‌ಗಳು ಮಹಿಳಾ ಮೀಸಲಾಗಿವೆ.
ಕಾಂಗ್ರೆಸ್‌ನ ಬಿ.ಜಡ್ ಜಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದ ಆರು ವಾರ್ಡ್‌ಗಳಲ್ಲಿ ಆಜಾದ್ ನಗರ(ಎಸ್‌ಸಿ) ಹೊರತುಪಡಿಸಿ ಉಳಿದೆಲ್ಲ ಮಹಿಳಾ ಮೀಸಲಾತಿ ನಿಗದಿಯಾಗಿದೆ. ಜೆಡಿಎಸ್‌ನ ಆರ್. ಮಂಜುನಾಥ್ ಪ್ರತಿನಿಧಿಸುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹನ್ನೆರಡು ವಾರ್ಡ್‌ಗಳಲ್ಲಿ ಹೆಗ್ಗನಹಳ್ಳಿ(ಸಾಮಾನ್ಯ) ಹಾಗೂ ಕಮ್ಮಗೊಂಡನಹಳ್ಳಿ(ಎಸ್‌ಸಿ) ಹೊರತುಪಡಿಸಿ ಎಲ್ಲ ಹತ್ತು ವಾರ್ಡ್‌ಗಳನ್ನೂ ಮಹಿಳಾ ಮೀಸಲು ಮಾಡಲಾಗಿದೆ.
ಕೆಲವೇ ಮಹಿಳಾ ಮೀಸಲು
ಒಂದೆಡೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಹಾಗೂ ಬಹಳಷ್ಟು ವಾರ್ಡ್‌ಗಳನ್ನು ಮಹಿಳಾ ಮೀಸಲು ಮಾಡಿದ್ದರೆ ಮತ್ತೊಂದೆಡೆ ಮಹಿಳಾ ಮೀಸಲಾತಿಯೇ ಇಲ್ಲದ ವಿಧಾನಸಭಾ ಕ್ಷೇತ್ರವೂ ಇದೆ. ಬಿಜೆಪಿಯ ಉದಯ್ ಬಿ ಗರುಡಾಚಾರ್ ಪ್ರತಿನಿಧಿಸುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಒಂದೂ ಮಹಿಳಾ ಮೀಸಲಾತಿ ನಿಗದಿ ಮಾಡಿಲ್ಲ.
ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ರಾಜಮಹಲ್ ಗುಟ್ಟಹಳ್ಳಿಗೆ ಮಾತ್ರ ಮಹಿಳಾ ಮೀಸಲಾತಿ ನೀಡಲಾಗಿದೆ. ಬಿಜೆಪಿಯ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಹಗದೂರು ಮತ್ತು ಮಾರತ್ತಹಳ್ಳಿ ಮಾತ್ರ ಮಹಿಳಾ ಮೀಸಲಾತಿ ನಿಗದಿಪಡಿಸಲಾಗಿದೆ.
ಎಸ್‌ಸಿಎಸ್‌ಟಿ ಮೀಸಲಾತಿ ಕಡಿತ
ಸದ್ಯ ನಿಗದಿಪಡಿಸಿರುವ ಮೀಸಲಾತಿ ಪಟ್ಟಿಯಲ್ಲಿ 28(ಶೇ.೧೧) ವಾರ್ಡ್‌ಗಳನ್ನು ಎಸ್‌ಸಿ, 4 (ಶೇ.೧.೬೪) ವಾರ್ಡ್‌ಗಳನ್ನು ಎಸ್‌ಟಿ, ಸಾಮಾನ್ಯ ವರ್ಗಕ್ಕೆ 130 (ಶೇ.53.5), ಹಿಂದುಳಿದ ವರ್ಗ-1ಕ್ಕೆ 65(ಶೇ. 26) ಹಾಗೂ ಹಿಂದುಳಿದ ವರ್ಗ-2ಕ್ಕೆ 16(ಶೇ.6.5) ವಾರ್ಡ್ ಮೀಸಲು ಮಾಡಲಾಗಿದೆ.
ಒಟ್ಟಾರೆಯಾಗಿ ಎಸ್‌ಸಿಎಸ್‌ಟಿ ಸಮುದಾಯಕ್ಕೆ ಅಂದಾಜು ಶೇ.13 ಹಾಗೂ ಒಬಿಸಿ ಸಮುದಾಯಕ್ಕೆ ಒಟ್ಟಾರೆಯಾಗಿ ಶೇ.33 ಮೀಸಲಾತಿ ನೀಡಲಾಗಿದೆ. ಎಸ್‌ಸಿಎಸ್‌ಟಿ ಹಾಗೂ ಒಬಿಸಿ ಸೇರಿ ಶೇ.50ರವರೆಗೆ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಲ್ಲಿ ಮೂರನೇ ಒಂದು ಭಾಗ ಅಂದರೆ ಶೇ.33ರವರೆಗೆ ಒಬಿಸಿ ಸಮುದಾಯಕ್ಕೆ ಮೀಸಲು ನೀಡಬೇಕು ಎಂದು ತಿಳಿಸಲಾಗಿದೆ. ಅದರಂತೆ ಇದೀಗ ಬಿಬಿಎಂಪಿ ವಾರ್ಡ್‌ಗಳಲ್ಲಿ ಹಿಂದುಳಿದ ವರ್ಗ -೧ ಹಾಗೂ ಹಿಂದುಳಿದ ವರ್ಗ-2ಕ್ಕೆ ಕ್ರಮವಾಗಿ ಶೇ.26 ಹಾಗೂ ಶೇ. 6.5 ಸೇರಿ ಒಟ್ಟು ಶೇ.32.5 ಮೀಸಲಾತಿ ನೀಡಲಾಗಿದೆ. ಆದರೆ ಎಸ್‌ಸಿಎಸ್‌ಟಿ ಸಮುದಾಯಕ್ಕೆ ಒಟ್ಟು ಶೇ.13 ಮೀಸಲಾತಿ ನೀಡಲಾಗಿದೆ. ಅಂದರೆ ಒಟ್ಟು ಮೀಸಲಾತಿ ಶೇ. 50 ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದಕ್ಕಿಂತ ಇನ್ನೂ ಸುಮಾರು ಶೇ. 6 ಕಡಿಮೆ ಮೀಸಲಾತಿಯನ್ನು ಎಸ್‌ಸಿಎಸ್‌ಟಿ ಸಮುದಾಯಕ್ಕೆ ನಿಗದಿಮಾಡಲಾಗಿದೆ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ತಿಳಿಸಿದ್ದಾರೆ.
ಸರ್ಕಾರಕ್ಕೆ ಚುನಾವಣೆ ನಡೆಸುವ ಮನಸ್ಸಿಲ್ಲ. ಹೀಗೆ ಮೀಸಲಾತಿ ಪ್ರಕಟಿಸಿದರೆ ಸಹಜವಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಹೀಗೆ ಒಂದೆರಡು ತಿಂಗಳು ಕಳೆದರೂ ಅಷ್ಟರ ವೇಳೆಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಅಧಿಕಾರಿಗಳು ಅತ್ತ ಗಮನಹರಿಸಬೇಕು ಎಂಬ ನೆಪವನ್ನು ನ್ಯಾಯಾಲಯದಲ್ಲಿ ಮುಂದಿಟ್ಟು ಚುನಾವಣೆ ಮುಂದೂಡುವ ಯೋಚನೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BBMP Election | ವಾರ್ಡ್‌ವಾರು ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ