Site icon Vistara News

Pawan Kalyan: ವಿಧಾನಸೌಧದಲ್ಲಿ ಪವನ್‌ ಕಲ್ಯಾಣ್‌ ನೋಡಲು ಮುಗಿಬಿದ್ದ ಜನ, ಭದ್ರತಾ ಲೋಪ; ಆಂಧ್ರ ಡಿಸಿಎಂನಿಂದ ಸಿಎಂ, ಖಂಡ್ರೆ ಭೇಟಿ

pawan kalyan

ಬೆಂಗಳೂರು: ರಾಜ್ಯ ರಾಜಧಾನಿಗೆ ಇಂದು ಆಂಧ್ರಪ್ರದೇಶ (Andhra Pradesh) ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಂದು ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಸಿದ್ದರಾಮಯ್ಯ ಅವರನ್ನು ಪವನ್‌ ಕಲ್ಯಾಣ್‌ ಭೇಟಿಯಾದರು. ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಿದ ಪವನ್ ಕಲ್ಯಾಣ್ ಅವರನ್ನು ನೋಡಲು ವಿಧಾನಸೌಧದ ಸಿಬ್ಬಂದಿ ಹಾಗೂ ಸಾರ್ವಜನಿಕರು ಮುಗಿಬಿದ್ದರು. ಮೂರನೇ ಮಹಡಿಯ ಕಾರಿಡಾರ್‌ನಲ್ಲಿ ಉದ್ದಕ್ಕೂ ನಿಂತು ಪವನ್ ಕಲ್ಯಾಣರನ್ನು ನೋಡಿದರು. ಕಾರಿಡಾರ್ ಬದಿ ನಿಂತು ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದುಕೊಂಡರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಪವನ್ ಕಲ್ಯಾಣ್ ಮೀಟಿಂಗ್‌ ನಡೆಸಿದರು. ಈ ವೇಳೆ ಪವನ್ ಕಲ್ಯಾಣ್ ಅವರನ್ನು ಈಶ್ವರ್ ಖಂಡ್ರೆ ಶಾಲು ಹೊದಿಸಿ, ಗಣಪತಿ ಮೂರ್ತಿ ನೀಡಿ ಗೌರವಿಸಿದರು. ಈಶ್ವರ್ ಖಂಡ್ರೆಗೆ ಪವನ ಕಲ್ಯಾಣ್‌ ಶಾಲು ಹಾಕಿ ತಿರುಪತಿ ಮೂರ್ತಿ ನೀಡಿ ಗೌರವಿಸಿದರು. ಕರ್ನಾಟಕ ಹಾಗೂ ಆಂದ್ರ ಪ್ರದೇಶದ ಸಮಾನ ಆಸಕ್ತಿಯ ಹಲವು ವಿಚಾರಗಳ ಬಗ್ಗೆ ಉಭಯರು ಚರ್ಚೆ ನಡೆಸಿದ್ದಾರೆ.

ಭದ್ರತಾ ಲೋಪ

ಸಭೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಗೌರವಿಸುವ ವೇಳೆ ಪ್ರೋಟೋಕಾಲ್‌ ಉಲ್ಲಂಘನೆ ಹಾಗೂ ಭದ್ರತಾ ಲೋಪ ಕಂಡುಬಂತು. ವಿಧಾನಸೌಧದ ಸಿಬ್ಬಂದಿಗಳು, ಅಭಿಮಾನಿಗಳು ಪವನ್‌ ಜೊತೆಗೆ ಫೋಟೋ ವಿಡಿಯೋ ತೆಗೆಸಿಕೊಳ್ಳಲು ನೂಕುನುಗ್ಗಲು ನಡೆಸಿದರು. ಸಭೆ ವೇಳೆಯೂ ನೂಕುನುಗ್ಗಲು ನಡೆಸಿ ಗೊಂದಲ ಸೃಷ್ಟಿಸಿದರು. ಸಭೆಯನ್ನು ಸರಿಯಾಗಿ ಆಯೋಜನೆ ಮಾಡದ ರಾಜ್ಯ ಸರ್ಕಾರ ಸ್ಟೇಟ್ ಪ್ರೋಟೋಕಾಲ್ ಮರೆತರೆ, ವಿಧಾನಸಭೆಯ ಸಚಿವಾಲಯದ ಸಿಬ್ಬಂದಿಗಳೇ ನೂಕುನುಗ್ಗಲು ಸೃಷ್ಟಿಸಿ ಸಭೆಯನ್ನು ಅವ್ಯವಸ್ಥೆಯ ಆಗರವಾಗಿಸಿದರು

ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

ಪೀಠಾಪುರ್: ಆಂಧ್ರಪ್ರದೇಶ(Andra Pradesh) ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭೂತಪೂರ್ವ ಗೆಲುವಿನ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಪವನ್‌ ಕಲ್ಯಾಣ್‌(Pawan Kalyan) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ವೇತನ ಪಡೆಯಲು ನಿರಾಕರಿಸಿದ್ದಾರೆ.

ನಿನ್ನೆ ಕಾಕಿನಾಡ ಜಿಲ್ಲೆಯ ಗೋಲಾಪೊರ್ಲು ಗ್ರಾಮಕ್ಕೆ ಪವನ್ ಕಲ್ಯಾಣ್ ಭೇಟಿ ನೀಡಿ ಎನ್ ಟಿಆರ್ ಭರೋಸಾ ಪಿಂಚಣಿ ಪತ್ರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವೇತನ ಪಡೆಯುವುದಿಲ್ಲ ಎಂದರು. ಇದೇ ವೇಳೆ ಅವರು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಗನ್‌ ಅನಗತ್ಯವಾಗಿ ಅರಮನೆ ಕಟ್ಟಿಸಿಕೊಂಡು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಲಾಖೆಗಳಲ್ಲಿ ಹಣದ ಕೊರತೆ ಇದ್ದರೂ ಬಂಗಲೆ ಕಟ್ಟಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಇಲಾಖೆಯಲ್ಲಿ ಹಣವಿಲ್ಲ,. ಇದಕ್ಕಾಗಿಯೇ ಕಳೆದ ತಿಂಗಳ ವೇತನಕ್ಕೆ ಸಂಬಂಧಿಸಿದ ಕಡತಕ್ಕೆ ಕೆಲ ದಿನ ಸಹಿ ಹಾಕುವುದನ್ನು ತಡೆದರು. ಸಂಬಳದ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಹಿಂದಿನ ಸರ್ಕಾರ ಪಂಚಾಯಿತಿ ಹಣ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಟೀಕಿಸಿದರು. ಇಲಾಖೆಯ ಹಣದ ಕೊರತೆಯ ನಡುವೆಯೂ ಅಂದಿನ ಮುಖ್ಯಮಂತ್ರಿ ರುಷಿಕೊಂಡನಲ್ಲಿ ಅರಮನೆ ನಿರ್ಮಿಸಿದ್ದರು ಎಂದು ಆರೋಪಿಸಿದರು. ಪಂಚಾಯತ್ ರಾಜ್ ಇಲಾಖೆಯಲ್ಲಿ ತಮ್ಮ ಕಡೆಯಿಂದ ಯಾವುದೇ ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ಪವನ್ ಕಲ್ಯಾಣ್ ಸಾರ್ವಜನಿಕರಿಗೆ ಭರವಸೆ ನೀಡಿದರು.

ಇದನ್ನೂ ಓದಿ: Pawan Kalyan: ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮೂರನೇ ಪತ್ನಿ ಪಡೆದ ಪದವಿ ಯಾವುದು?

Exit mobile version