ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿದ್ದ ಕಾರಣ ಅತಿ ವಿರಳ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ (Aplastic anemia) ನೀಡಲಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ. ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿಯ ಸಲಹೆಗಾರರಾದ ಡಾ ತನುಶ್ರೀ ಪಾಲ್ ಅವರ ವೈದ್ಯ ತಂಡ ಈ ಬಾಲಕನಿಗೆ ಸಮಯೋಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಾಲಕನ ಜೀವ ಉಳಿಸಲಾಗಿದೆ.
ಈ ಕುರಿತು ಮಾತನಾಡಿದ ಡಾ. ನೀತಿ ರೈಜಾದಾ, ಆಫ್ರೀಕಾ ಮೂಲದ 16 ವರ್ಷದ ಮೈಕೆಲ್ ಎಂಬಾತನಿಗೆ ಕಳೆದ ಎರಡು ತಿಂಗಳಿನಿಂದ ತೀವ್ರವಾದ ಜ್ವರ, ಆಯಾಸ, ದೌರ್ಬಲ್ಯಗಳಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗಲು ಪ್ರಾರಂಭಗೊಂಡಿತ್ತು. ಇದರಿಂದ ಭಯಭೀತಗೊಂಡ ಅವರ ಕುಟುಂಬ ಆಫ್ರಿಕಾದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ತೋರಿಸಿದರೂ, ಬಾಲಕನ ಆರೋಗ್ಯ ಸಮಸ್ಯೆ ಏನೆಂದು ತಿಳಿಯಲಿಲ್ಲ. ಹೀಗಾಗಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು.
ಬಾಲಕನ ಸಂಪೂರ್ಣ ತಪಾಸಣೆ ಬಳಿಕ, ಆ ಬಾಲಕನಿಗೆ ಅತಿ ವಿರಳ ಅಪ್ಲ್ಯಾಸ್ಟಿಕ್ ರಕ್ತ ಹೀನತೆ ಆಗಿರುವುದು ತಿಳಿದುಬಂತು. ಇದು ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಆ ಬಾಲಕ ರಕ್ತ ಹೀನತೆಗೆ ಒಳಗಾಗಿದ್ದ. ಹೀಗಾಗಿ ಆತನಿಗೆ ಹ್ಯಾಪ್ಲೋಡೆಂಟಿಕಲ್ ಸ್ಟೆಮ್ ಸೆಲ್ ಕಸಿ ಮಾಡುವ ಅವಶ್ಯಕತೆ ಅನಿವಾರ್ಯವಾಗಿತ್ತು. ಆದರೆ, ಬಾಲಕನ ರಕ್ತದ ಗುಂಪಿಗೆ ಹೊಂದುವಂತೆ ಸ್ಟೆಮ್‌ಸೆಲ್ ಸಿಗದೇ ಸಮಸ್ಯೆ ಎದುರಾಗಿತ್ತು.
ಈ ಮಧ್ಯೆ ಬಾಲಕನ ಹಿರಿಯ ಸಹೋದರಿಯೇ ತನ್ನ ತಮ್ಮನಿಗೆ ಹ್ಯಾಪ್ಲೊಂಡೆಂಟಿಕಲ್ ದಾನ ಮಾಡಲು ಮುಂದಾದರು. ಆದರೆ, ಬಾಲಕನಿಗೆ ಬಲಕಿವಿ ಸೋಂಕಿನಿಂದ ಸೋರುತ್ತಿದ್ದ ಕಾರಣ, ಮೊದಲು ಕಿವಿ ಶಸ್ತ್ರಚಿಕಿತ್ಸೆ ಮುಂದಾಗಬೇಕಾಯಿತು. ಬಾಲಕನ ಬಲ ಕಾರ್ಟಿಕಲ್ ಮಾಸ್ಟೊಡೆಕ್ಟಮಿ (ಕಿವಿ ಸುತ್ತ ಇರುವ ಸೋಂಕಿನ ಅಂಗಾಂಶ) ತೆಗೆದು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದಾದ ಬಳಿಕ ಬಾಲಕನಿಗೆ ಹ್ಯಾಪ್ಲೋಡೆಂಟಿಕಲ್ ಸ್ಟೆಮ್ ಸೆಲ್ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ಬಾಲಕ ಗುಣಮುಖರಾಗುತ್ತಿದ್ದಾನೆ ಎಂದು ವಿವರಿಸಿದರು.