Site icon Vistara News

ಬೆಂಗಳೂರಿನಲ್ಲೇ ಆ್ಯಪಲ್ ಫೋನ್ ನಿರ್ಮಾಣ, 300 ಎಕರೆಯಲ್ಲಿ ಫಾಕ್ಸ್‌ಕಾನ್ ಘಟಕ, ಚೀನಾಗೆ ಹಿನ್ನಡೆ

Apple phone Manufacturing in Bengaluru, Foxconn plant in 300 acres, setback for China

ಬೆಂಗಳೂರು: ಚೀನಾ ಮತ್ತು ಅಮೆರಿಕ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್ (Apple) ಕಂಪನಿಯು ತನ್ನ ಉತ್ಪಾದನಾ ಚಟುವಟಿಕೆಗಳನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡುತ್ತಿದೆ. ಆ್ಯಪಲ್‌ ಫೋನ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಪಾಲುದಾರ ಕಂಪನಿಯಾಗಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್(Foxconn Technology Group), ಬೆಂಗಳೂರು (Bengaluru)ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ಆರಂಭಿಸಲಿದೆ. ಇದಕ್ಕಾಗಿ ಸುಮಾರು 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ತೈವಾನ್ ಮೂಲದ ಫಾಕ್ಸ್‌ಕಾನ್ ಟೆಕ್ನಾಲಜಿ ಕಂಪನಿಯು ತನ್ನ ಪ್ರಮುಖ ಘಟಕವಾದ ಹೊನ್ ಹೈ ಪ್ರೆಸಿಶನ್ ಇಂಡಸ್ಟ್ರಿ ಕಂಪನಿಗಾಗಿ ಹೆಸರುವಾಸಿಯಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ 300 ಎಕರೆ ಪ್ರದೇಶದಲ್ಲಿ ಐಫೋನ್ ಭಾಗಗಳನ್ನು ತಯಾರಿಸಲು ಉತ್ಪಾದನಾ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಉತ್ಪದನಾ ಘಟಕದಲ್ಲಿ ಕಾರ್ಖಾನೆಯು ಆ್ಯಪಲ್‌ನ ಹ್ಯಾಂಡ್‌ಸೆಟ್‌ಗಳನ್ನು ಅಸೆಂಬಲ್ ಮಾಡಲಾಗುತ್ತದೆ. ಜತೆಗೆ, ಫಾಕ್ಸ್‌ಕಾನ್ ತನ್ನ ಹೊಸ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಬಿಡಿ ಭಾಗಗಳನ್ನು ಇದೇ ಘಟಕದಲ್ಲಿ ಉತ್ಪಾದಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹೂಡಿಕೆಯು ಭಾರತದಲ್ಲಿ ಇಲ್ಲಿಯವರೆಗಿನ ಫಾಕ್ಸ್‌ಕಾನ್‌ನ ಅತಿದೊಡ್ಡ ಏಕೈಕ ಹೊಡಿಕೆಯಾಗಲಿದೆ. ಇದರೊಂದಿಗೆ, ಚೀನಾವು ಗ್ರಾಹಕ ಎಲೆಕ್ಟ್ರಾನಿಕ್ಸ್‌ನ ವಿಶ್ವದ ಅತಿದೊಡ್ಡ ಉತ್ಪಾದಕ ಎಂಬ ಸ್ಥಾನಮಾನವನ್ನು ಕಳೆದುಕೊಳ್ಳಬಹುದು.

ಆ್ಯಪಲ್ ಮತ್ತು ಇತರ ಅಮೆರಿಕ ಕಂಪನಿಗಳು ಭಾರತ ಮತ್ತು ವಿಯೆಟ್ನಾಂನಂಥ ಪರ್ಯಾಯ ಸ್ಥಳಗಳನ್ನು ತಮ್ಮ ಉತ್ಪಾದನಾ ಸ್ಥಳಗವಾಗಿ ಅನ್ವೇಷಿಸುತ್ತಿವೆ. ಇದು ಕೊರೋನಾ ಸಾಂಕ್ರಾಮಿಕ ಮತ್ತು ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಹೊಡೆತ ಬಿದ್ದಿದೆ. ಹಾಗಾಗಿ, ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ಒಟ್ಟು ವ್ಯವಸ್ಥೆಯ ಬಗ್ಗೆ ಮರುರೂಪಿಸುವ ಸಕಾಲ ಇದಾಗಿದೆ. ಹಾಗಾಗಿ, ಭಾರತವು ಈ ಕಂಪನಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಭಾರತದಲ್ಲಿ ಸುಮಾರು ಒಂದು ಲಕ್ಷ ಉದ್ಯೋಗ!

ಬೆಂಗಳೂರು ವಿಮಾನ ನಿಲ್ದಾಣ ಬಳಿ 300 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಘಟಕದಿಂದ ಭಾರತದಲ್ಲಿ ಫಾಕ್ಸ್‌ಕಾನ್ ಸುಮಾರು ಒಂದು ಲಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಚೀನಾದ ಝೆಂಗ್‌ಝೌನಲ್ಲಿರುವ ಕಂಪನಿಯ ವಿಸ್ತಾರವಾದ ಐಫೋನ್ ಅಸೆಂಬ್ಲಿ ಸಂಕೀರ್ಣವು ಈ ಸಮಯದಲ್ಲಿ ಸುಮಾರು 200,000 ಉದ್ಯೋಗಿಗಳನ್ನು ಹೊಂದಿದೆ. ಗರಿಷ್ಠ ಉತ್ಪಾದನೆಯ ಅವಧಿಯಲ್ಲಿ ಉದ್ಯೋಗಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕೋವಿಡ್-ಸಂಬಂಧಿತ ಅಡೆತಡೆಗಳಿಂದಾಗಿ ಝೆಂಗ್‌ಝೌ ಸ್ಥಾವರದಲ್ಲಿನ ಉತ್ಪಾದನೆಯು ವರ್ಷಾಂತ್ಯದ ರಜಾದಿನಗಳಿಗಿಂತ ಮುಂಚಿತವಾಗಿ ಸ್ಥಗಿತಗೊಂಡಿದೆ. ಇದರಿಂದ ಆ್ಯಪಲ್ ತನ್ನ ಚೀನಾ-ಅವಲಂಬಿತ ಪೂರೈಕೆ ಸರಪಳಿಯನ್ನು ಮರು-ಪರಿಶೀಲಿಸಲು ಉತ್ತೇಜಿಸಿತು. ಅದರ ಪರಿಣಾಮವಾಗಿ ಫಾಕ್ಸ್‌ಕಾನ್ ಈಗ ಭಾರತದತ್ತ ಮುಖ ಮಾಡಿದ್ದು, ಬೆಂಗಳೂರಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಲಿದೆ.

ರಾಜೀವ್ ಚಂದ್ರಶೇಖರ್ ಅವರಿಂದ ಸ್ವಾಗತ

ಕರ್ನಾಟಕದಲ್ಲಿ ಆ್ಯಪಲ್ ಮೊಬೈಲ್ ಉತ್ಪಾದನಾ ಘಟಕವು 300 ಎಕರೆಯಲ್ಲಿ ಆರಂಭವಾಗಲಿದೆ. ಇದು ಕರ್ನಾಟಕದ ಒಂದು ಟ್ರಿಲಿಯನ್ ಕನಸನ್ನ ನನಸುಮಾಡುವತ್ತ ಸಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಈ ಕಾರ್ಯ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿಗೆ ಧನ್ಯವಾದ. ಇದರಿಂದ ರಾಜ್ಯದಲ್ಲಿ ಹೂಡಿಕೆಯ ಜೊತೆಗೆ ಸ್ಥಳಿಯ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಹೇಳಿದ್ದಾರೆ.

ಇದನ್ನೂ ಓದಿ: Semiconductor : ವೇದಾಂತ-ಫಾಕ್ಸ್‌ಕಾನ್‌ನಿಂದ ದೇಶದ ಮೊಟ್ಟ ಮೊದಲ ಸೆಮಿಕಂಡಕ್ಟರ್‌ ಘಟಕ ಅಂತಿಮ, ಸ್ಥಳ ಎಲ್ಲಿ?

ಸಿಎಂ ಬಸವರಾಜ ಬೊಮ್ಮಾಯಿ ಹರ್ಷ

ರಾಜ್ಯದಲ್ಲೇ ಶೀಘ್ರವೇ ಆ್ಯಪಲ್‌ ಫೋನ್‌ಗಳು ನಿರ್ಮಾಣವಾಗಲಿವೆ. ಒಂದು ಲಕ್ಷ ಉದ್ಯೋಗ ಸೃಷ್ಟಿಯ ಜತೆಗೆ ಕರ್ನಾಟಕ ಅತಿ ದೊಡ್ಡ ಅವಕಾಶಗಳನ್ನು ಸೃಷ್ಟಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶಿತ್ವದಲ್ಲಿ, 2025ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆಗೆ ನಮ್ಮ ಪಾಲಿನ ಕೊಡುಗೆಯನ್ನು ನೀಡಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

Exit mobile version