ಬೆಂಗಳೂರು: ಒಂದು ಸಣ್ಣ ಸಿಟ್ಟು ಏನೆಲ್ಲ ಅವಾಂತರವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೋಲ್ವೊ ಬಸ್‌ನ ಕಂಡಕ್ಟರ್ ಪ್ರಯಾಣಿಕನಿಗೆ ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಪ್ರಯಾಣಿಕ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ಏಕಾಏಕಿ ಕಂಡಕ್ಟರ್‌ಗೆ (Assault Case) ಚುಚ್ಚಿದ್ದಾನೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್‌ನಲ್ಲಿ ಘಟನೆ ನಿನ್ನೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ವೈಟ್ ಫೀಲ್ಡ್ ಬಳಿ ಬಸ್ ಕಂಡಕ್ಟರ್‌ಗೆ ಪ್ರಯಾಣಿಕನಿಂದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್ ಮೂಲದ ಹರ್ಷ್ ಸಿನ್ಹಾ ಚಾಕು ಇರಿದಿರುವ ಆರೋಪಿ ಆಗಿದ್ದಾನೆ. ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಚಾಕು ಇರಿತಕ್ಕೆ ಒಳಗಾದವರು. ಎರಡ್ಮೂರು ಬಾರಿ ಚಾಕು ಇರಿದು, ನಂತರ ಬಸ್‌ನಲ್ಲಿದ್ದ ಸುತ್ತಿಗೆಯಿಂದ ಬಸ್ ಗಾಜುಗಳನ್ನು ಪುಡಿ ಮಾಡಿದ್ದಾನೆ. ಬಸ್ ಡೋರ್ ಅನ್ನು ಕಾಲಿನಿಂದ ಗುದ್ದಿ ಹುಚ್ಚನಂತೆ ವರ್ತಿಸಿದ್ದಾನೆ.
ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಬಾಗಿಲ ಬಳಿ ನಿಲ್ಲಬೇಡ ಒಳಗೆ ಹೋಗು ಎಂದಿದ್ದಕ್ಕೆ ಕೋಪಗೊಂಡಿದ್ದ ಹರ್ಷ್ ಸಿನ್ಹಾ, ಏಕಾಏಕಿ ತನ್ನ ಬಳಿ ಇದ್ದ ಚಾಕುವಿನಿಂದ ಇರಿದಿದ್ದಾನೆ. ಹರ್ಷ್ ಸಿನ್ಹಾ ಟೆಲಿಫರ್ಫಾಮೆನ್ಸ್ ಎಂಬ ಖಾಸಗಿ ಕೆಲಸ ಮಾಡುತ್ತಿದ್ದ. ಕಳೆದ ಹತ್ತು ದಿನಗಳ ಹಿಂದೆ ಹರ್ಷ್ ಸಿನ್ಹಾನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ.
ಇನ್ನು ಘಟನೆ ಕುರಿತು ಬಿಎಂಟಿಸಿ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಐಟಿಪಿಎಲ್ ಬಸ್ ನಿಲ್ದಾಣದ ಬಳಿ ಐ ಟಿ ಪಿ ಎಲ್ ಮತ್ತು ಬನಶಂಕರಿ ಮಾರ್ಗದಲ್ಲಿ ಅಹಿತಕರ ಘಟನೆ ಒಂದು ಸಂಭವಿಸಿದೆ. ಕಂಡಕ್ಟರ್ ಯೋಗೇಶ್ ಕರ್ತವ್ಯದಲ್ಲಿದ್ದಾಗ, ಸುರಕ್ಷತೆಯ ಕಾರಣಗಳಿಗಾಗಿ ಬಸ್ಸಿನ ಮಧ್ಯದ ಬಾಗಿಲಿನಿಂದ ದೂರ ನಿಲ್ಲುವಂತೆ ಪ್ರಯಾಣಿಕ ಹರ್ಷ ಸಿನ್ಹಾ ಅವರಿಗೆ ಸೂಚಿಸಿದ್ದಾರೆ. ಆದರೆ ಯೋಗೇಶ್ ಮೇಲೆ ದಾಳಿ ಮಾಡಿ, ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ದಾಳಿಯ ನಂತರ, ಹರ್ಷ ಸಿನ್ಹಾ ಇತರ ಪ್ರಯಾಣಿಕರಿಗೆ ಬೆದರಿಕೆ ಹಾಕಿ, ಅವರು ತಕ್ಷಣ ಬಸ್ ಅನ್ನು ಇಳಿಯುವಂತೆ ಹೇಳಿದ್ದಾನೆ. ಅಲ್ಲದೆ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿಕೋರನು ಸುತ್ತಿಗೆಯನ್ನು ಬಳಸಿ ಬಸ್ಸಿನ ಕಿಟಕಿಗಳನ್ನು ಹಾನಿಗೊಳಿಸಿದ್ದಾನೆ.
ದಾಳಿ ಕೋರ ಪ್ರಯಾಣಿಕನನ್ನು ಬಸ್ಸಿನೊಳಗೆ ಬಂಧಿಸಿ, ಎಲ್ಲಾ ಪ್ರಯಾಣಿಕರ ಸುರಕ್ಷತೆಯನ್ನು ಚಾಲಕ ಸಿದ್ದಲಿಂಗಸ್ವಾಮಿ ಖಾತ್ರಿಪಡಿಸಿದ್ದಾರೆ. ಪ್ರಯಾಣಿಕರ ನೆರವಿನೊಂದಿಗೆ ಚಾಲಕ ಸಿದ್ದಲಿಂಗಸ್ವಾಮಿ, ಪೊಲೀಸರಿಗೆ ಕರೆ ಮಾಡಿ ಕಂಡಕ್ಟರ್ ಯೋಗೇಶ್ ಅವರನ್ನು ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯೋಗೇಶ್ ಅಪಾಯದಿಂದ ಪಾರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ಪಡೆದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಾರಥಿ ಸ್ಕ್ವಾಡ್ ತಕ್ಷಣ ಆಸ್ಪತ್ರೆಗೆ ಮತ್ತು ಘಟನಾ ಸ್ಥಳಕ್ಕೆ ಆಗಮಿಸಿದ್ದು, ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಆರೋಪಿ ಹರ್ಷ ಸಿನ್ಹಾನನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಕಂಡೆಕ್ಟರ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಬಿಎಂಟಿಸಿ ಎಂಡಿಗೆ ಗಾಯಾಳುವಿಗೆ ಹಣಕಾಸಿನ ನೆರವು ವಿಚಾರವಾಗಿ ಸೂಚನೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ