Site icon Vistara News

Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

Assault Case In Hennuru police Limits

ಬೆಂಗಳೂರು: ನಡು ರಸ್ತೆಯಲ್ಲಿ ಯುವಕರಿಬ್ಬರು ಸೇರಿ ರಾಡ್‌ನಿಂದ ವ್ಯಕ್ತಿಗೆ ಮನಬಂದಂತೆ (Assault Case) ಥಳಿಸಿದ್ದರು. ಹಲ್ಲೆ ದೃಶ್ಯವೆಲ್ಲವೂ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದರ ಡ್ಯಾಶ್‌ ಬೋರ್ಡ್‌ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಳೆದ ಏ.2 ರಂದು ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇತ್ತ ವೈರಲ್‌ ಆಗಿರುವ ವಿಡಿಯೋ ಬಗ್ಗೆ ತಿಳಿಯಲು ಪೊಲೀಸರು ಫ್ಯಾಕ್ಟ್ ಚೆಕ್ ಮೊರೆ ಹೋಗಿದ್ದರು. ಸದ್ಯ ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು, ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸಿಬ್ಬಂದಿಯೇ ಸುಪಾರಿ ಕೊಟ್ಟು ಹೊಡೆಸಿರುವುದು ಗೊತ್ತಾಗಿದೆ.

ತನಿಖೆ ಕೈಗೊಂಡ ಹೆಣ್ಣೂರು ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಹಲ್ಲೆಗೊಳಗಾದ ಸುರೇಶ್ ಎಂಬಾತನಿಂದ ದೂರು ಪಡೆದು, ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಮಾಶಂಕರ್, ವಿನೀಶ್, ಅನೀಶ್, ಮುತ್ತು ಹಾಗೂ ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮಾ. 31ರಂದು ಹೊರಮಾವುನಿಂದ ಹೆಣ್ಣೂರಿಗೆ ತೆರಳುವ ಮಾರ್ಗದಲ್ಲಿ ಸುರೇಶ್‌ ಹೋಗುತ್ತಿದ್ದಾಗ, ಬಲವಾದ ಆಯುಧದಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಹಲ್ಲೆ ಮಾಡಿದ್ದ ದೃಶ್ಯವು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: Road Accident : ಹಿಟ್‌ ಆ್ಯಂಡ್ ರನ್‌ಗೆ ಯುವಕನ ತಲೆ ಪೀಸ್‌ ಪೀಸ್‌; ಗಾಡಿ ಸಮೇತ ಚಾಲಕ ಪರಾರಿ

ಸಿಬ್ಬಂದಿಯಿಂದಲೇ ಸುಪಾರಿ

ಪೊಲೀಸ್‌ ವಿಚಾರಣೆ ವೇಳೆ ಮೇಲಾಧಿಕಾರಿ ಆಗಿದ್ದ ಸುರೇಶ್‌ ತನ್ನ ಸಿಬ್ಬಂದಿಗೆ ಕೆಲಸದಲ್ಲಿ ಹೆಚ್ಚೆಚ್ಚು ಒತ್ತಡ ಕೊಟ್ಟಿದ್ದನಂತೆ. ಈ ಕಾರಣಕ್ಕೆ ಸಿಬ್ಬಂದಿಯಿಂದಲೇ ಸುರೇಶ್‌ ಹಲ್ಲೆಗೆ ಸುಪಾರಿ ಕೊಟ್ಟಿರುವುದು ತಿಳಿದು ಬಂದಿದೆ. ಬಂಧಿತರಾಗಿರುವ ಉಮಾಶಂಕರ್, ವಿನೀಶ್ ಹಾಗೂ ಹಲ್ಲೆಗೊಳಗಾದ ಸುರೇಶ್ ಹೆರಿಟೇಜ್ ಹಾಲು ಉತ್ಪನ್ನಗಳ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ತನಿಖೆ ವೇಳೆ ಸುರೇಶ್‌ ಹೆಚ್ಚು ಒತ್ತಡ ಹಾಕುತ್ತಿದ್ದ ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ಉಮಾಶಂಕರ್‌ ಹೇಳಿಕೆ ನೀಡಿದ್ದಾನೆ. ಸುರೇಶ್‌ಗೆ ಹಲ್ಲೆ ಮಾಡಿ, ಬುದ್ಧಿ ಕಲಿಯುವಂತೆ ಮಾಡಿ ಎಂದು ಹಣ ಕೊಟ್ಟು ಸುಪಾರಿ ನೀಡಿದ್ದನಂತೆ.

ಹಲ್ಲೆ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆ

ಕಳೆದ ಒಂದು ವರ್ಷದ ಹಿಂದಷ್ಟೇ ಆಡಿಟಿಂಗ್‌ ಕೆಲಸಕ್ಕೆ ಸೇರಿದ್ದ ಸುರೇಶ್‌, ಸಿಬ್ಬಂದಿಗೆಲ್ಲ ಆ ದಿನದ ಬ್ಯಾಲೆನ್ಸ್ ಅಂದೇ ಕ್ಲಿಯರ್ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದನಂತೆ. ಮಾತ್ರವಲ್ಲ ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದು, ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದ. ಇದು ಕೆಲಸ ಮಾಡುತ್ತಿದ್ದವರಿಗೆ ಒತ್ತಡ ತಂದಿತ್ತು. ಹೀಗಾಗಿ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ಉಮಾಶಂಕರ್‌ ಮಾಜಿ ಉದ್ಯೋಗಿ ಸಂಪರ್ಕ ಮಾಡಿದ್ದ.

ಈ ಹಿಂದೆ ಕೆಲಸಕ್ಕಿದ್ದ ವ್ಯಕ್ತಿಯ ಮುಖಾಂತರ ಸಂದೀಪ್ ಎಂಬಾತನ ಸಂಪರ್ಕ ಮಾಡಿದ್ದ. ಕೆಆರ್ ಪುರಂನ ಸಂದೀಪ್ ಹಾಗೂ ಆತನ ಗೆಳೆಯರಿಗೆ ಸುಪಾರಿ ಕೊಟ್ಟಿದ್ದ. ಅದರಂತೆ ರಸ್ತೆಯಲ್ಲಿ ಹೋಗುತ್ತಿದ್ದ ಸುರೇಶ್‌ ಮೇಲೆ ದಾಳಿ ಮಾಡಿದ ಸಂದೀಪ್‌ ಟೀಂ, ಸ್ಟೀಲ್‌ ರಾಡ್‌ನಿಂದ ಹೊಡೆದು ಪರಾರಿಯಾಗಿದ್ದರು. ಬಳಿಕ ಏನು ಗೊತ್ತಿಲ್ಲದಂತೆ ತಮ್ಮ ಪಾಡಿಗೆ ತಾವಿದ್ದರು. ಆದರೆ ವಿಡಿಯೋ ವೈರಲ್ ಬಳಿಕ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ. ಸದ್ಯ ಎಲ್ಲ ಆರೋಪಿಗಳನ್ನು ಬಂಧಿಸಿರಿವ ಹೆಣ್ಣೂರು ಪೊಲೀಸರಿಂದ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version