ಬೆಂಗಳೂರು: ಬೆಂಗಳೂರು ನಗರ ಪೊಲೀಸರ ಮೇಲೆ ಗಂಭೀರ ಆರೋಪವೊಂದು (Assault Case) ಕೇಳಿ ಬಂದಿದೆ. ವ್ಯಕ್ತಿಯೊಬ್ಬನ ಸಾವಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಕಾರಣ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಮೇಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಜಮೀನು ವಿಚಾರವಾಗಿ ರಾಮಸ್ವಾಮಿ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದರು. ಈ ವೇಳೆ ಠಾಣೆಯಲ್ಲಿ ವಿಚಾರಣೆ ನೆಪದಲ್ಲಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರಂತೆ. ಪೊಲೀಸರ ಹೊಡೆತದಿಂದಲೇ ರಾಮಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ಮೃತಳ ಪತ್ನಿ ಮುನಿಯಮ್ಮ ಆರೋಪ ಮಾಡಿದ್ದಾರೆ. ಪತಿ ಮೇಲಿರುವ ಗಾಯಗಳೇ ಎಲ್ಲವನ್ನೂ ಹೇಳುತ್ತಿದೆ. ಇದೆಲ್ಲಾವನ್ನು ಕೋಣನಕುಂಟೆ ಪೊಲೀಸ್ ಇನ್‌ಸ್ಪೆಕ್ಟರ್ ಪಾಪಣ್ಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಮಸ್ವಾಮಿ ಪತ್ನಿ ಮುನಿಯಮ್ಮ ಒತ್ತಾಯಿಸಿದ್ದಾರೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ!
ಜಮೀನು ವಿವಾದ ಹಿನ್ನೆಲೆಯಲ್ಲಿ ಶಿವಕುಮಾರ್ ಎಂಬಾತ ರಾಮಸ್ವಾಮಿ ವಿರುದ್ಧ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಪೊಲೀಸರು ಜಮೀನಿನ ಬಳಿ ತೆರಳಿ ರಾಮಸ್ವಾಮಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಬಂಧನ ಮಾಡಲು ಹೋದಾಗ ರಾಮಸ್ವಾಮಿಯ ಪತ್ನಿ ಹಾಗು ಮಗಳು ಅಡ್ಡ ಬಂದಿದ್ದರು.
ಇದನ್ನೂ ಓದಿ:Road Accident : ಲಾರಿ ಡಿಕ್ಕಿ ಹೊಡೆದು ಬೈಕ್ ನಜ್ಜುಗುಜ್ಜು; ಸ್ಥಳದಲ್ಲೇ ಪ್ರಾಣಬಿಟ್ಟ ಸವಾರ, ಮತ್ತೋರ್ವ ಗಂಭೀರ
ಈ ವೇಳೆ ಮುನಿಯಮ್ಮಳನ್ನು ವಿವಸ್ತ್ರಗೊಳಿಸಿ ಹಲ್ಲೆಗೆ ಯತ್ನಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ರಾಮಸ್ವಾಮಿ ಹಾಗು ಆತನ ಮಗಳನ್ನು ಠಾಣೆಗೆ ಕರೆ ತಂದು ಬಡಿದಿದ್ದಾರೆ. ಕುಸಿದು ಬಿದ್ದವನನ್ನು ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರಂತೆ.
ನಂತರ ನ್ಯಾಯಾಲಯಕ್ಕೆ ಹೋಗುವ ಮುನ್ನ ಪೊಲೀಸರು ಹೊಡೆದರು ಎಂದು ಬಾಯ್ಬಿಟ್ಟರೆ ನಿನ್ನ ಹೆಂಡತಿ- ಮಕ್ಕಳನ್ನು ಶಾಶ್ವತವಾಗಿ ಜೈಲಿಗೆ ಹಾಕುವುದಾಗಿಯೂ ಬೆದರಿಸಿದ್ದಾರಂತೆ. ಆದರೆ ನ್ಯಾಯಾಧೀಶರ ಮುಂದೆ ನಿಲ್ಲಿಸಿದಾಗ ರಾಮಸ್ವಾಮಿ ಏಕಾಏಕಿ ಕುಸಿದು ಬಿದ್ದಿದ್ದ . ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನಿನ್ನೆ ಭಾನುವಾರ ಚಿಕಿತ್ಸೆ ಫಲಿಸದೇ ರಾಮಸ್ವಾಮಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇನ್ನು ಈ ಸಂಬಂಧ ಮುಖ್ಯಮಂತ್ರಿ ಹಾಗು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.
ಎಸಿಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭ
ಈ ಪ್ರಕರಣ ಸಂಬಂಧ ಜಯನಗರ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮಾಹಿತಿ ಕಲೆ ಹಾಕುವ ಕೆಲಸ ಮುಂದುವರೆದಿದೆ. ನಿಜಕ್ಕೂ ಪೊಲೀಸರ ಏಟಿನಲ್ಲಿ ರಾಮಸ್ವಾಮಿ ಮೃತಪಟ್ಟನಾ ಎಂಬುದು ತನಿಖೆಯಿಂದಷ್ಟೆ ತಿಳಿಯಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ