Site icon Vistara News

Assault Case: ಪಾರ್ಕಿಂಗ್‌ ವಿಚಾರಕ್ಕೆ ಡಿಶುಂ ಡಿಶುಂ; ಮಹಿಳೆಗೆ ಕಪಾಳಮೋಕ್ಷ!

ಬೆಂಗಳೂರು: ಬೆಂಗಳೂರಿನಲ್ಲಿ ಸಣ್ಣ-ಪುಟ್ಟ ವಿಚಾರಕ್ಕೂ ಜನರು ಕಿರಿಕ್‌ ಮಾಡಿಕೊಳ್ಳುತ್ತಿರುವ ಘಟನೆಗಳು (Assault Case) ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರಿನ ಬಂಡೆಪಾಳ್ಯದ ಅಪಾರ್ಟ್ಮೆಂಟ್ ಒಂದರ ಮುಂಭಾಗ ನಿನ್ನೆ ಸೋಮವಾರ ರಾತ್ರಿ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿದೆ.

ಗಲಾಟೆ ಮಾಡಿಕೊಂಡು ಕಿತ್ತಾಡಿಕೊಂಡಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿರಿಕ್ ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕಕ್ಕೆ ತಲುಪಿತ್ತು. ಈ ವೇಳೆ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಆರೋಪವು ಕೇಳಿ ಬಂದಿದೆ. ಗಲಾಟೆಯ ವಿಡಿಯೋ ಎಕ್ಸ್‌ನಲ್ಲಿ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಸದ್ಯ ಗಲಾಟೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಇಬ್ಬರು‌ ವ್ಯಕ್ತಿಗಳಿಂದ ಹಲ್ಲೆ

ವಿಶೇಷ ಚೇತನ ವ್ಯಕ್ತಿಗೆ ಇಬ್ಬರು ವ್ಯಕ್ತಿಗಳಿಂದ ಹಲ್ಲೆ ನಡೆಸಲಾಗಿದೆ. ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೃತ್ಯಕ್ಕೆ ಪೊಲೀಸರಿಂದ ಎನ್ ಸಿ ಆರ್ ದಾಖಲಾಗಿದೆ. ಆದರೆ ಎಫ್ ಐ ಅರ್ ಯಾಕಿಲ್ಲ ಎಂದು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಹುಸೇನ್ ಎಂಬ ಖಾತೆಯಿಂದ‌ ವಿಡಿಯೋ ಪೋಸ್ಟ್ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: Borewell water : ಬೋರ್‌ವೆಲ್ ನೀರು ಕುಡಿದು 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ

ನೀರು ಕೊಡಿ ಎಂದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗ್ರಾಪಂ ಸದಸ್ಯ

ಚಿಕ್ಕೋಡಿ: ಮೂಲಭೂತ ಸೌಕರ್ಯ ಕೇಳಿದ್ದಕ್ಕೆ ಗ್ರಾಮ‌ ಪಂಚಾಯಿತಿ ಸದಸ್ಯ ಗೂಂಡಾ ವರ್ತನೆ ತೋರಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಹಿಡಕಲ್‌ ಗ್ರಾಮದ ಸೂರಣ್ಣವರ ತೋಟದ ವಾರ್ಡ್ ನಂ 5ರ ಸದಸ್ಯ ಯಲ್ಲಪ್ಪ ಸಣ್ಣಕ್ಕಿನವರ‌ ಎಂಬಾತ ಗೂಂಡಾ ವರ್ತನೆ ತೋರಿದವನು.

ಜನರು ಕುಡಿಯೋದಕ್ಕೆ ನೀರು ಬರುತ್ತಿಲ್ಲ, ನೀರು ಕೊಡಿ ಎಂದಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಗ್ರಾಮಸ್ಥರು ಕುಡಿಯುವ ನೀರು ಸೇರಿ ಇತರೆ ಸೌಲಭ್ಯ ಕೇಳಲು ಗ್ರಾಮ ಪಂಚಾಯಿತಿಗೆ ತೆರಳಿದ್ದರು. ಈ ವೇಳೆ ಸಮಸ್ಯೆಗೆ ಸ್ಪಂದಿಸದೇ ಯಲ್ಲಪ್ಪ ಸಣ್ಣಕ್ಕಿನವರ ಗ್ರಾಮಸ್ಥರ ಮೇಲೆ ಗೂಂಡಾವರ್ತನೆ ತೋರಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದೆ.

ಪ್ರತಿ ಸೌಲಭ್ಯವನ್ನು ತನ್ನ ಮನೆಗೆ ಬಳಸಿಕೊಳ್ಳುತ್ತಿದ್ದು ಸಾರ್ವಜನಿಕರಿಗೆ ಸೌಲಭ್ಯ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಲ್ಲಪ್ಪನ ಸದಸ್ಯತ್ವ ರದ್ದು ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version