Site icon Vistara News

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌!

assault case

ಬೆಂಗಳೂರು: ಕರ್ನಾಟಕದ ಲಾರಿ ಡ್ರೈವರ್ ಮೇಲೆ ತಮಿಳುನಾಡು ಟ್ರಾಫಿಕ್ ಪೊಲೀಸ್ ಪೇದೆ ಮನಸೋ ಇಚ್ಛೆ ಹಲ್ಲೆ (Assault case) ಮಾಡಿದ್ದಾರೆ. ಕರ್ನಾಟಕ- ತಮಿಳುನಾಡಿನ ಹೊಸೂರು ಗಡಿಭಾಗದಲ್ಲಿ ಭಾನುವಾರ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ರ‍್ಯಾಶ್‌ ಡ್ರೈವಿಂಗ್‌ ಮಾಡುತ್ತಿದ್ದೀಯಾ ಎಂದು ಆರೋಪಿಸಿ ಲಾರಿ ಚಾಲಕನ ಅಡ್ಡಗಟ್ಟಿ ಕಪಾಳ, ಮುಖ ಅಂತ ನೋಡದೆ ಹಲ್ಲೆ ನಡೆಸಿದ್ದಾರೆ. ಬಿಟ್ಬಿಡಿ ಸರ್ ಎಂದು ಚಾಲಕ ಅಂಗಲಾಚಿದರೂ ಬಿಡದೆ ಟ್ರಾಫಿಕ್‌ ಪೊಲೀಸ್‌ ಪೇದೆ ಹಲ್ಲೆ ನಡೆಸಿದ್ದಾರೆ. ಹೊಸೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಾರು ಚಾಲಕನೊರ್ವ ಹಲ್ಲೆ ಮಾಡುತ್ತಿರುವ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಬಳಿಕ ಕಾರು ಚಾಲಕನಿಗೂ ಅವಾಜ್ ಹಾಕಿ ತಮಿಳುನಾಡು ಪೊಲೀಸ್ ವಿಡಿಯೊ ಡಿಲೀಟ್ ಮಾಡಿಸಿದ್ದಾರೆ.

ನಡು ರಸ್ತೆಯಲ್ಲಿ ಧಗ-ಧಗನೆ ಹೊತ್ತಿ ಉರಿದ ಕಾರು

ಚಲಿಸುತ್ತಿದ್ದ ಸ್ವಿಪ್ಟ್ ಡಿಸೈರ್ ಕಾರಿನ ಇಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಡು ರಸ್ತೆಯಲ್ಲಿ ಧಗ-ಧಗನೆ ಹೊತ್ತಿ ಉರಿದಿದೆ. ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ. ಕಾರು ಚಲಿಸುತ್ತಿದ್ದಾಗ ಬಾನೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಾನೆಟ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಪ್ರಯಾಣಿಕರು ಕಾರಿನಿಂದು ಇಳಿದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಸಮಯಪ್ರಜ್ಙೆಯಿಂದ ಕೂದಲೆಳೆ ಅಂತರದಲ್ಲಿ ಎಲ್ಲರೂ ಪಾರಾಗಿದ್ದಾರೆ.

ಕರೆಂಟ್‌ ಶಾಕ್‌ನಿಂದ ನಾಲ್ವರು ಕಾರ್ಮಿಕರಿಗೆ ಗಾಯ

ಶಾರ್ಟ್ ಸರ್ಕ್ಯುಟ್‌ನಿಂದಾಗಿ ಕರೆಂಟ್‌ ಶಾಕ್‌ ಹೊಡೆದು ನಾಲ್ವರು ಕಾರ್ಮಿಕರಿಗೆ ಗಾಯವಾಗಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರದಲ್ಲಿ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಬಳಿ ವಾಸ ಮಾಡಲು ಚಿಕ್ಕ ರೂಂ ನಿರ್ಮಿಸಿಕೊಂಡಿದ್ದರು. ರಾತ್ರಿ ರೂಂ ಗೆ ಪಡೆದಿದ್ದ ಕರೆಂಟ್‌ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಮಲಗಿದ್ದ ನಾಲ್ವರಿಗೆ ಗಾಯವಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ

ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಳಿಸಿ, ವ್ಯಕ್ತಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ ತುಂಗಾನಗರದಲ್ಲಿ ನಿನ್ನೆ ಭಾನುವಾರ ರಾತ್ರಿ ಘಟನೆ ನಡೆದಿದೆ. ಶಿವಗಂಗೇಗೌಡ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ನಿನ್ನೆ ರಾತ್ರಿ ಶಿವಗಂಗೆಗೌಡರ ಮನೆ ಸಮೀಪ ಗ್ಯಾಂಗ್‌ವೊಂದು ಮದ್ಯ ಸೇವಿಸುತ್ತಿತ್ತು. ಇದನ್ನು ಪ್ರಶ್ನೆ ಮಾಡಿ ಎದ್ದು ಹೋಗುವಂತೆ ಶಿವಗಂಗೆಗೌಡ ಗದರಿದ್ದರು. ಇದಕ್ಕೆ ಸಿಟ್ಟಾದ ಕಿಡಿಗೇಡಿಗಳು ಶಿವಗಂಗೆಗೌಡ ಅವರಿಗೆ ಸೇರಿದ ಇನ್ನೋವಾ ಕಾರು ಸಿಮೆಂಟ್ ಇಟ್ಟಿಗೆಯಿಂದ ಜಖಂಗೊಳಿಸಿದ್ದಾರೆ. ಕಿಡಿಗೇಡಿಗಳನ್ನು ಓಡಿಸಲು ಪ್ರಯತ್ನಿಸಿದಾಗ ಅಟ್ಯಾಕ್ ಮಾಡಿದ್ದಾರೆ. ಗಾಯಾಳು ಶಿವಗಂಗೆಗೌಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Exit mobile version