Site icon Vistara News

Atrocity Case :‌ ಭೂಕಬಳಿಕೆ, ಜಾತಿನಿಂದನೆ ಆರೋಪ; ಸಚಿವ ಡಿ. ಸುಧಾಕರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ

Minister D Sudhakar

ಬೆಂಗಳೂರು: ಯಲಹಂಕದಲ್ಲಿರುವ ಪರಿಶಿಷ್ಟ ಕುಟುಂಬದ ಜಮೀನನ್ನು ಕಬಳಿಸಿದ್ದಲ್ಲದೆ (Land Grab), ಅವರ ಮೇಲೆ ದೌರ್ಜನ್ಯ (Atrocity Case) ಎಸಗಿ ಜಾತಿ ನಿಂದನೆ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ (Minister D Sudhakar) ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ (Yalahanka Police station) ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್(Karnataka High Court) ಶುಕ್ರವಾರ ಮಧ್ಯಂತರ ತಡೆಯಾಜ್ಞೆ (Interim stay to FIR) ನೀಡಿದೆ.

ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸೆವನ್ ಹಿಲ್ಸ್ ಡೆವಲಪರ್ಸ್‌ ಅಂಡ್ ಟ್ರೇಡರ್ಸ್‌ನ ನಿರ್ದೇಶಕರೂ ಆಗಿರುವ ಸಚಿವ ಡಿ ಸುಧಾಕರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.

ಏನಿದು ಜಮೀನು ವಿವಾದ ಮತ್ತು ಅಟ್ರಾಸಿಟಿ ಕೇಸ್‌?

ಇದು ಯಲಹಂಕ ಗ್ರಾಮದ ಸರ್ವೆ ನಂ.108/1ರ ಜಮೀನಿಗೆ ಸಂಬಂಧಿಸಿದ ವಿವಾದ. ಸೆವೆನ್ ಹಿಲ್ಸ್ ಡೆವಲಪರ್ಸ್‌ ಅಂಡ್ ಟ್ರೇಡರ್ಸ್‌ನ ನಿರ್ದೇಶಕರೂ ಆಗಿರುವ ಸಚಿವ ಡಿ ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರು ತಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನುವುದು ಯಲಹಂಕ ನಿವಾಸಿ ಸುಬ್ಬಮ್ಮ ಅವರ ಆರೋಪ. ಈ ಸಂಬಂಧ ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣಾ ಹಂತದಲ್ಲಿದೆ.

ಕಳೆದ ಕೆಲವು ಸಮಯದಿಂದ ಈ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಇದರ ನಡುವೆ ಡಿ. ಸುಧಾಕರ್‌ ಮತ್ತು ತಂಡ 35-40 ಜನರು, ದೊಡ್ಡ ದೊಡ್ಡ ವಾಹನಗಳನ್ನು ತಂದು ಗೂಂಡಾಗಿರಿ ನಡೆಸಿದ್ದಾರೆ. ತಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ತಮ್ಮ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಮಗಳ ಮೇಲೆ ಹಲ್ಲೆ ನಡೆಸಿ, ಜಾತಿ ಉಲ್ಲೇಖಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸುಬ್ಬಮ್ಮ ಎಂಬುವರು ಸೆಪ್ಟಂಬರ್ 10ರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಪೊಲೀಸರು ಸೆಪ್ಟೆಂಬರ್‌ 12ರಂದು (ಮಂಗಳವಾರ) ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು. ಇದನ್ನು ಪ್ರಶ್ನಿಸಿ ಸುಧಾಕರ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ.

ರಾಜಕೀಯ ಆರೋಪಗಳೇನು? ಸಚಿವ ಡಿ. ಸುಧಾಕರ್‌ ಹೇಳುವುದೇನು?

ಈ ನಡುವೆ, ಈ ಪ್ರಕರಣ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌ ಸಚಿವ ಸುಧಾಕರ್‌ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದೆ. ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ. ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಇದು ರಾಜಕೀಯ ಪ್ರೇರಿತವಾದ ಸುಳ್ಳು ಆರೋಪ ಎಂದಿದ್ದಾರೆ. ನಾನು ಅಧಿಕಾರಿಗಳಿಂದ ಪಡೆದ ಮಾಹಿತಿ ಪ್ರಕಾರ, ಸಚಿವ ಸುಧಾಕರ್ ಅವರು ಜಾಗ ಖರೀದಿಸಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಆ ಜಾಗಕ್ಕೆ ಯಾರೋ ಬೇಲಿ ಹಾಕಿದ್ದಾರೆ. ಇದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಾಗಿದೆ. ಇದೊಂದು ಸುಳ್ಳು ಕೇಸು ಎಂದಿದ್ದಾರೆ.

ನಾನು ಯಾವುದೇ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿಲ್ಲ. ನನಗೆ ಎಲ್ಲ ಜಾತಿಗಳ ಬಗ್ಗೆ ಗೌರವವಿದೆ ಮತ್ತು ನಾನು ಯಾವುದೇ ತಪ್ಪು ಮಾಡಿಲ್ಲ. ಜಾಗ ತೆರವಿನ ವಿಚಾರದಲ್ಲಿ ತನಿಖೆ ನಡೆಯಲಿ ಎಂದು ಸಚಿವ ಡಿ. ಸುಧಾಕರ್‌ ಹೇಳಿದ್ದಾರೆ.

ಇದನ್ನೂ ಓದಿ : JDS Protest: ಸಚಿವ ಸಂಪುಟದಿಂದ ಡಿ.ಸುಧಾಕರ್ ವಜಾ ಮಾಡಿ; ಜೆಡಿಎಸ್ ಕಾರ್ಯಕರ್ತರ ಒತ್ತಾಯ

ಮಾಧ್ಯಮಗಳ ವಿರುದ್ಧ ತಡೆ ತಂದ ಡಿ. ಸುಧಾಕರ್‌

ಇದರ ನಡುವೆ, ಮಾಧ್ಯಮಗಳು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಈ ರೀತಿ ಮಾಡದಂತೆ ನಿರ್ಬಂಧಿಸಬೇಕು ಎಂದು ಕೋರಿ ಡಿ. ಸುಧಾಕರ್‌ ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದು, ಕೋರ್ಟ್‌ ಅವರ ವಾದವನ್ನು ಮನ್ನಿಸಿ ಪ್ರತಿಬಂಧಕಾಜ್ಞೆ ಹೊರಡಿಸಿದೆ.

Exit mobile version