ಆನೇಕಲ್: ಮೊಸರು ತರಲು ಅಂಗಡಿಗೆ ಹೋಗಿದ್ದ ಮಗುವಿನ ಅಪಹರಣಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಗು ಸುರಕ್ಷಿತವಾಗಿ ಮನೆ ಸೇರಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಬಳಿ ನಡೆದಿದೆ.
ಮಗುವನ್ನು ಕಿಡ್ನಾಪ್ ಮಾಡಿ ಕ್ಷಣಾರ್ಧದಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಉದ್ಯಮಿ ಮಂಜುನಾಥ್ ರೆಡ್ಡಿ ಎಂಬುವವರ ಮಗುವನ್ನು ಮನೆಯ ಮುಂಭಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಅಪಹರಿಸುವ ಯತ್ನ ನಡೆಸಿದ್ದಾರೆ. ಆದರೆ ಸ್ಥಳೀಯರಿಂದಾಗಿ ಅವರ ಯತ್ನವನ್ನು ವಿಫಲಗೊಳಿಸಿದ್ದಾರೆ.
ಮೊಸರು ತೆಗೆದುಕೊಂಡು ಬಾ ಎಂದು ಮಗುವನ್ನು ಅಂಗಡಿಗೆ ಕಳುಹಿಸಿದ ತಾಯಿ ಮನೆಯ ಬಾಗಿಲಲ್ಲಿಯೇ ನಿಂತಿದ್ದರೂ ಈ ದುಷ್ಕರ್ಮಿಗಳು ಅಪಹರಣ ನಡೆಸಿದ್ದರು. ಮಗುವನ್ನು ಎತ್ತಿಕೊಂಡು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಮಗುವಿನ ಕಿರುಚಾಟದ ಕೂಗು ಕೇಳಿ ಸ್ಥಳೀಯರು ಸ್ಕೂಟರ್ ಅನ್ನು ಹಿಂಬಾಲಿಸಿದ್ದಾರೆ. ಮಗುವನ್ನು ಕಾಡಿನೊಳಗೆ ಹೊತ್ತೊಯ್ದ ದುಷ್ಕರ್ಮಿಗಳು, ಜನರು ಹಿಂಬಾಲಿಸುತ್ತಿದ್ದನ್ನು ನೋಡಿ ಗಾಬರಿಗೊಂಡು ಮಗುವನ್ನು ಕಾಡಿನೊಳಗೆ ಬಿಟ್ಟು ಪರಾರಿಯಾಗಿದ್ದಾರೆ.
ಹಣದ ವಿಚಾರಕ್ಕೆ ಉದ್ಯಮಿಯಾಗಿ ಹೆಸರು ಮಾಡಿರುವ ಮಂಜುನಾಥ ರೆಡ್ಡಿ ಅವರ ಮಗಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ಮಂಜುನಾಥ್ ರೆಡ್ಡಿ, ನಾನು ಹೊರಗಡೆ ಹೋಗಿದ್ದಾಗ ಮನೆ ಬಳಿ ಮಗು ಅಪಹರಣವಾಗಿದೆ ಎಂದು ಬಾಮೈದ ಫೋನ್ ಮಾಡಿದ್ದ, ಇದರಿಂದ ನಾನು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದೆ. ಮಗುವನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿಕೊಂಡು ಹೋದಾಗ ಸ್ಥಳೀಯರು ಎರಡು ಕಿ.ಮೀ. ದೂರದವರೆಗೆ ಹಿಂಬಾಲಿಸಿದ್ದಾರೆ. ಇದರಿಂದ ಕಿಡಿಗೇಡಿಗಳು ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ಆ ವೇಳೆಗೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣ್, ಬನ್ನೇರುಘಟ್ಟ ಇನ್ಸ್‌ಪೆಕ್ಟರ್ ಉಮಾಮಹೇಶ್ ನೇತೃತ್ವದ ಪೋಲೀಸರ ತಂಡ ಭೇಟಿ ನೀಡಿದ್ದು, ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದ ದ್ವಿಚಕ್ರ ವಾಹನ ಹಾಗೂ ಚಾಕುವನ್ನ ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ | Blackmail Case | ಬೆಂಗಳೂರಲ್ಲಿ ಹಗಲಲ್ಲೇ ಮಾರಕಾಸ್ತ್ರ ಹಿಡಿದು ಸುಲಿಗೆಗಿಳಿದ ದುಷ್ಕರ್ಮಿ; ಆರೋಪಿ ಅರೆಸ್ಟ್!