ಬೆಂಗಳೂರು: ಅಂದು ಸ್ವಲ್ಪ ಯಾಮಾರಿದರೂ ಆರ್‌ಟಿಐ ಕಾರ್ಯಕರ್ತನ ಭೀಕರ ಹತ್ಯೆ (Attempt To Murder ) ನಡೆಯುತ್ತಿತ್ತು. ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಬಂದಿದ್ದ ಸುಪಾರಿ ಕಿಲ್ಲರ್ಸ್‌ರನ್ನು ಪೊಲೀಸರು ಬಂಧಿಸಿದ್ದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಂಬಳಗೋಡು ಪಂಚಾಯ್ತಿ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ನಾಗರಾಜ್ ಎಂಬುವವರು ಅರ್ಜಿಯನ್ನು ಹಾಕಿದ್ದರು. ಈ ವಿಚಾರ ತಿಳಿದು ಬಿಜೆಪಿ ಮುಖಂಡ ಗೋವಿಂದರಾಜು ಹಾಗೂ ಲೆಕ್ಕಿಗ ಸತೀಶ್ ಎಂಬಾತ ನಾಗರಾಜ್ ಬಳಿ ಬಂದು ಮಾತನಾಡಿದ್ದರು. ಆದರೆ ಅವರಿಬ್ಬರ ಮಾತುಕತೆ ಫಲಪ್ರದವಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ನಾಗರಾಜ್ ಮೇಲೆ ಗೋವಿಂದರಾಜು ದ್ವೇಷವಿಟ್ಟುಕೊಂಡಿದ್ದ.
ಹತ್ಯೆ ನಡೆಸುವ ಮೊದಲು ಗೋವಿಂದರಾಜು ಹಾಗು ನಾಗರಾಜ್ ನಡುವೆ ಸಂಧಾನ ಪ್ರಕ್ರಿಯೆ ನಡೆದಿತ್ತು. ಆದರೆ ನಾಗರಾಜ್ ಯಾರ ಮಾತಿಗೂ ಜಗ್ಗದೆ ಅವರ ಮಾತಿಗೆ ಒಪ್ಪಲಿಲ್ಲ. ಆರ್‌ಟಿಐನಲ್ಲಿ ಮಾಹಿತಿ ತಿಳಿದರೆ ತಮ್ಮ ಬಂಡವಾಳ ಹೊರ ಬರುತ್ತದೆ ಎಂದು ಗೋವಿಂದರಾಜು ನಾಗರಾಜನನ್ನು ಮುಗಿಸುವ ಪ್ಲಾನ್ ಮಾಡಿದ್ದ. ಈ ಕೃತ್ಯಕ್ಕೆ ಚಂದ್ರಾಲೇಔಟ್ ರೌಡಿಶೀಟರ್ ಕೃಷ್ಣ ಸಾಥ್ ನೀಡಿದ್ದ.
ಕೃಷ್ಣನನ್ನು ಭೇಟಿ ಮಾಡಿದ ಗೋವಿಂದರಾಜು ಐದು ಲಕ್ಷ ರೂ. ಸುಪಾರಿ ನೀಡಿ ನಾಗರಾಜ್‌ನನ್ನು ಮುಗಿಸಲು ಹೇಳಿದ್ದ. ಆಫರ್ ಒಪ್ಪಿಕೊಂಡ ಕೃಷ್ಣ ತನ್ನ ರೌಡಿ ಪಟಾಲಂನ ಜತೆ ಸೇರಿ ನಾಗರಾಜನನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ನಾಲೈದು ದಿನ ನಾಗರಾಜ್ ಓಡಾಡುವ ಜಾಗ, ಯಾವ ಸಮಯಕ್ಕೆ ಎಲ್ಲೆಲ್ಲಿ ಇರುತ್ತಾರೆ ಎಂಬ ಮಾಹಿತಿ ಕಲೆ ಹಾಕಿದ್ದ.
ಇದನ್ನೂ ಓದಿ: Water Crisis : ಬೆಂಗಳೂರಿಗರೇ ಗಮನಿಸಿ.. ಬೋರೆವೆಲ್ ಕೊರೆಸಲು ಇನ್ಮುಂದೆ ಈ ನಿಯಮ ಕಡ್ಡಾಯ!
ಕಳೆದ ತಿಂಗಳು ನಾಗರಾಜ್ ಅವರು ತಮ್ಮ ಎಲೆಕ್ಟ್ರಿಕ್ ಗಾಡಿಯಲ್ಲಿ ಹೋಗುವಾಗ ಯಾರೋ ದೂರದಿಂದ ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಗಮಿಸಿದ್ದಾರೆ. ನಾಗರಾಜ್ ಕೆಂಗೇರಿ ರೈಲ್ವೆ ಅಂಡರ್ ಪಾಸ್ ಬಳಿ ಹೋಗವಾಗ ಬೈಕ್‌ನ ಹಿಂಬದಿ ಸವಾರ ಲಾಂಗ್ ತೆಗೆದು ಹಲ್ಲೆ ಮಾಡುತ್ತಾ ಅವಾಚ್ಯ ಶಬ್ಧಗಳಿಂದ ನಿಂಧಿಸುತ್ತಿದ್ದ. ಆರ್‌ಟಿಐ ಅರ್ಜಿ ಹಾಕುತ್ತೀಯಾ ಎಂದು ಬೆನ್ನಿಗೆ ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ. ಭಯಗೊಂಡ ನಾಗಾರಾಜ್ ಅಲ್ಲಿಂದ ಹೇಗೋ ಪರಾರಿ ಆಗಿ ಆಸ್ಪತ್ರೆಯ ಒಳ ನುಗ್ಗಿ ಬಚಾವಾಗಿದ್ದರು.
ಕೂದಲೆಳೆ ಅಂತರದಲ್ಲಿ ಆರ್‌ಟಿಐ ಕಾರ್ಯಕರ್ತ ನಾಗರಾಜ್ ಸಾವಿನ ದಾವಡೆಯಿಂದ ಪಾರಾಗಿದ್ದರು. ಕೊಲೆ ಯತ್ನ ನಡೆಸಿದ ಸಂಬಂಧ ನಾಗರಾಜ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ . ಬಿಜೆಪಿ ಮುಖಂಡ ಗೋವಿಂದ ರಾಜು , ಮನೀಷ್ ಮೋಹನ್ ಪೂಜಾರಿ, ಕೃಷ್ಣ , ವೇಣುಗೋಪಾಲ, ಸತೀಶ್ ಹಾಗು ಶಶಿಕುಮಾರ್ ರೆಡ್ಡಿ ಎಂಬವರನ್ನು ಕೆಂಗೇರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ ಸಂಬಂಧ ಇನ್ನಿಬ್ಬರು ಪರಾರಿಯಾಗಿದ್ದು, ಹುಡುಕಾಟ ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ