Site icon Vistara News

Attiguppe Metro Incident: ಮೆಟ್ರೋ ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

Attiguppe Metro Incident National Law School Student Self Harming

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ರೈಲು ಹಳಿಗೆ (Attiguppe Metro Incident) ಹಾರಿ ನ್ಯಾಷನಲ್‌ ಲಾ ಸ್ಕೂಲ್‌ನ ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ. ಪ್ರಥಮ ವರ್ಷದಲ್ಲಿ ಓದುತ್ತಿದ್ದ 19 ವರ್ಷದ ಧ್ರುವ ಠಕ್ಕರ್‌ ರೈಲಿಗೆ ತಲೆಕೊಟ್ಟಿದ್ದ. ಆತ್ಮಹತ್ಯೆಯ ಕೊನೆ ಕ್ಷಣದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾ.21ರ ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ (Athiguppe Metro) ಬಂದಿದ್ದ ಧ್ರುವ, ರೈಲು ಬರುವುದನ್ನೇ ಕಾದು ನಿಂತಿದ್ದ. ಮಧ್ಯಾಹ್ನದ ಸಮಯವಾಗಿದ್ದರಿಂದ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚು ಇರಲಿಲ್ಲ. ರೈಲು ಬರುವ ಜಾಗದಲ್ಲೇ ಕೆಲ ಹೊತ್ತು ಒಬ್ಬನೇ ನಿಂತಿದ್ದ ಧ್ರುವ ಅಲ್ಲೆ ಅತ್ತಿಂದಿತ್ತ ಓಡಾಡಿದ್ದ.

ನಂತರ ಆತನ ಸಂಪೂರ್ಣ ಗಮನ ರೈಲಿನ ಕಡೆಗೆ ತಿರುಗಿತ್ತು. ರೈಲು ಬರುವುದನ್ನೇ ದಿಟ್ಟಿಸಿ ನೋಡುತ್ತಿದ್ದ ಧ್ರುವ, ಇನ್ನೇನು ರೈಲು ನಿಲ್ದಾಣಕ್ಕೆ ಸಮೀಪಿಸಬೇಕು ಎಂದಾಗ ಒಮ್ಮೆ ಸುತ್ತಲು ಕಣ್ಣಾಡಿಸಿ ಯಾವುದೇ ಭಯವಾಗಲಿ, ಆತಂಕವಾಗಲಿ ಇಲ್ಲದೇ ಹಳಿಗೆ ಇಳಿದಿದ್ದ. ಕೆಳಗಿಳಿದವನೇ ನೇರ ಹಳಿಗೆ ತಲೆಕೊಟ್ಟು ಮಲಗಿಬಿಟ್ಟಿದ್ದ.

ನೋಡ ನೋಡುತ್ತಿದ್ದ ರೈಲು ಆತನ ತಲೆಯನ್ನೇ ಕತ್ತರಿಸಿತ್ತು. ರೈಲಿನಡಿ ಸಿಲುಕಿದ ಧ್ರುವನ ದೇಹ ಹಾಗೂ ತಲೆ ಎರಡು ತುಂಡಾಗಿತ್ತು. ಧ್ರುವ ಟ್ರ್ಯಾಕ್ಟ್‌ಗಿಳಿದು ರೈಲಿಗೆ ತಲೆಕೊಟ್ಟಿದ್ದನ್ನು ಎದುರಿನ ನಿಲ್ದಾಣದಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವತಿ ಕಂಡು ಹೌಹಾರಿದ್ದಳು. ಆಕೆ ಕೂಗಿ ಸಿಬ್ಬಂದಿಯನ್ನು ಕರೆಯುವಷ್ಟರಲ್ಲಿ ರೈಲು ಹರಿದಿತ್ತು. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟ್ರ್ಯಾಕ್‌ ಮೇಲೆ ಬಿದ್ದಿದ್ದ ಮೃತದೇಹವನ್ನು ಹೊರ ತೆಗೆಯಲು ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದರು. ಮುಂಬಯಿ ಮೂಲದ ಧ್ರುವ ಯಾಕಾಗಿ ಆತ್ಮಹತ್ಯೆಗೆ ಶರಣಾದ ಎಂಬುದು ತಿಳಿದು ಬಂದಿಲ್ಲ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸಿದ್ದಾರೆ.

ಸ್ಥಗಿತವಾಗಿದ್ದ ರೈಲು ಓಡಾಟ

ಇನ್ನೂ ಈ ಅವಘಡದಿಂದಾಗಿ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಓಡಾಟ ಸ್ಥಗಿತವಾಗಿತ್ತು. ಮಾಗಡಿ ರೋಡ್‌ನಿಂದ ವೈಟ್ ಫೀಲ್ಡ್‌ವರೆಗೆ ಮಾತ್ರ ಮೆಟ್ರೋ ಸಂಚಾರ ಇತ್ತು. ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸುಮಾರು 2 ಗಂಟೆಗಳ ನಂತರ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ರೈಲುಗಳ ಸಂಚಾರವನ್ನು ಶುರು ಮಾಡಲಾಗಿತ್ತು.

ಇದನ್ನೂ ಓದಿ: Elephant Attack : ಕಾಫಿ ತೋಟಕ್ಕೆ ಹೋದಾಗ ಬೆನ್ನಟ್ಟಿದ ಕಾಡಾನೆ, ಪ್ಲ್ಯಾಂಟರ್‌ ದಾರುಣ ಸಾವು

ಸ್ಕ್ರೀನ್ ಡೋರ್ ಅಳವಡಿಕೆಗೆ ಹೆಚ್ಚಿದ ಒತ್ತಡ

ಮೆಟ್ರೋ ನಿಲ್ದಾಣಗಳಲ್ಲಿ ಸಾಲು ಸಾಲು ಆತ್ಮಹತ್ಯೆ ಪ್ರಕರಣ ವರದಿ ಆದ ಬೆನ್ನಲ್ಲೇ ಫ್ಲಾಟ್ ಫಾರ್ಮ್‌ಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಕೆಗೆ ಒತ್ತಾಯ ಕೇಳಿ ಬಂದಿವೆ. ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಸ್ಕ್ರೀನ್ ಡೋರ್ ವ್ಯವಸ್ಥೆಗೆ ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.

ಭದ್ರತಾ ಸಿಬ್ಬಂದಿ ಹೆಚ್ಚಿಸುವುದರ ಜತೆಗೆ ಪ್ರಯಾಣಿಕರ ಸುರಕ್ಷತೆಗಾಗಿಯು ಗಾರ್ಡರ್ ಅಳವಡಿಕೆಗೆ ನಿರ್ಧರಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ನಿಲ್ದಾಣ ಮಾತ್ರವಲ್ಲದೇ ಎಲ್ಲಾ ನಿಲ್ದಾಣಗಳಿಗೂ ಸಿಬ್ಬಂದಿ ಹೆಚ್ಚಳಕ್ಕೆ ಚಿಂತನೆ ನಡೆದಿದೆ. ಇನ್ನೂ ಅತ್ತಿಗುಪ್ಪೆ ಪ್ರಕರಣದಲ್ಲಿ ವಿದ್ಯಾರ್ಥಿ ಧ್ರುವ ನಿಲ್ದಾಣದ ಪ್ರಾರಂಭದ ಕಾರ್ನರ್ ಬಳಿ ನಿಂತು ಹಳಿಗೆ ಜಿಗಿದಿದ್ದ. ಹೀಗಾಗಿ ಸ್ಟೇಷನ್ ಕಾರ್ನರ್ ಬಳಿ ಸಂಪೂರ್ಣ ತಡೆಗೋಡೆ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಉನ್ನತ ಮೂಲಗಳು ಮಾಹಿತಿ ನೀಡಿವೆ. ಕೆಲವೆಡೆ ಈಗಾಗಲೇ ಅಳವಡಿಕೆ ಮಾಡಲಾಗಿದ್ದು, ಮುಂದುವರಿದ ಭಾಗವಾಗಿ ಮತ್ತಷ್ಟು ನಿಲ್ದಾಣದಲ್ಲೂ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version