ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ರೈಲಿನ ಹಳಿಗೆ (Attiguppe Metro Incident) ಹಾರಿ ಯುವಕ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ. ಇದೀಗ ಮೃತನನ್ನು ನ್ಯಾಷನಲ್ ಲಾ ಸ್ಕೂಲ್‌ನ (National Law School) ವಿದ್ಯಾರ್ಥಿ ಧ್ರುವ ಠಕ್ಕರ್ (19) ಎಂದು ಗುರುತಿಸಲಾಗಿದೆ. ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಧ್ರುವ, ತನ್ನ ಗೆಳೆಯರೊಟ್ಟಿಗೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ.
ರೈಲು ಬರುವ ಮೊದಲೆ ನಿಲ್ದಾಣಕ್ಕೆ ಬಂದಿದ್ದ ಧ್ರುವ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವನೊಟ್ಟಿಗೆ ಒರ್ವ ಯುವತಿ ಹಾಗು ಮತ್ತೊರ್ವ ಯುವಕ ಇದ್ದ ಎನ್ನಲಾಗಿದೆ. ಅವರೊಟ್ಟಿಗೆ ಮಾತನಾಡುತ್ತಲೇ ರೈಲು ಬರುವ ಸಮಯದಲ್ಲಿ ಟ್ರ್ಯಾಕ್ ಮೇಲೆ ಹಾರಲು ಹೋಗಿದ್ದಾನೆ. ಈ ವೇಳೆ ಜತೆಗಿದ್ದವರು ಧ್ರುವನನ್ನು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಇದೇ ವೇಳೆ ರೈಲು ಹತ್ತಿರ ಬಂದಾಗ ಅವನನ್ನು ಬಿಟ್ಟು ದೂರ ಓಡಿದ್ದಾರೆ ಎನ್ನಲಾಗಿದೆ.
ಮೆಟ್ರೋ ರೈಲು ಬಂದ ರಭಸಕ್ಕೆ ಅದರಡಿ ಸಿಲುಕಿದ ಧ್ರುವನನ್ನು ಕೊಂಚ ದೂರ ಎಳೆದುಹೋಗಿದೆ. ರೈಲು ನಿಂತಾಗ ಧ್ರುವನ ದೇಹ ಹಾಗೂ ತಲೆ ಎರಡು ತುಂಡಾಗಿದೆ. ಟ್ರ್ಯಾಕ್ ಮೇಲೆ ಬಿದ್ದಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಧ್ರುವ ಠಕ್ಕರ್, ಮುಂಬಯಿ ಮೂಲದವನೆಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರು ಆತನ ಕುಟುಂಬಕ್ಕೆ ಮತ್ತು ಕಾಲೇಜಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.ಪೊಲೀಸರು ಧ್ರುವ ಠಕ್ಕರ್ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Murder Case : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಿದಳು ಹೆಂಡತಿ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಮೆಟ್ರೋ ಸಂಚಾರ ಶುರು
ಇನ್ನೂ ಈ ಅವಘಡದಿಂದಾಗಿ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಓಡಾಟ ಸ್ಥಗಿತವಾಗಿತ್ತು. ಮಾಗಡಿ ರೋಡ್‌ನಿಂದ ವೈಟ್ ಫೀಲ್ಡ್‌ವರೆಗೆ ಮಾತ್ರ ಮೆಟ್ರೋ ಸಂಚಾರ ಇತ್ತು. ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಇದೀಗ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ರೈಲುಗಳ ಸಂಚಾರವನ್ನು ಶುರು ಮಾಡಲಾಗಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?
ನಮ್ಮ ಮೆಟ್ರೋ (Namma Metro) ರೈಲಿನ ಟ್ರ್ಯಾಕ್‌ಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ (Self harming) ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿತ್ತು. ಮಾ.21ರ ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ (Athiguppe Metro) ಟ್ರೈನ್ ಬರುವಾಗಲೇ ಯುವಕ ಹಳಿಗೆ ಜಿಗಿದಿದ್ದ. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಗಿತ್ತು. ರೈಲಿನಡಿ ಸಿಲುಕಿದ್ದ ಯುವಕನ ಶವವನ್ನು ಹೊರತೆಗೆಯಲು ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನೂ ಈ ಘಟನೆಯಿಂದಾಗಿ ಮೆಟ್ರೋ ಓಡಾಟವನ್ನು ಬಂದ್ ಮಾಡಿ ನಿಲ್ದಾಣದಲ್ಲಿದ್ದ ಹಾಗೂ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ವಾಪಸ್ ಕಳಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ