ಬೆಂಗಳೂರು: ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದಾಗಿ ಖ್ಯಾತ ಅಧ್ಯಾತ್ಮ ಮಾರ್ಗದರ್ಶಿ ಅವಧೂತ ವಿನಯ್ ಗುರೂಜಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಕುರಿತು ಅವಹೇಳನಕಾರಿಯಾಗಿ ಕಮೆಂಟ್, ಟ್ರೋಲ್ ಮಾಡುತ್ತಿದ್ದಾರೆ ಎಂದು ತಮ್ಮ ಮಾಧ್ಯಮ ಸಮನ್ವಯಕಾರರ ಮೂಲಕ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿನಯ್ ಗುರೂಜಿ ಇತ್ತೀಚೆಗೆ ಒಂದು ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ವಿಡಿಯೊ ಎಲ್ಲೆಡೆ ಹರಿದಾಡಿತ್ತು. ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ವ್ಯಕ್ತಿಯೊಬ್ಬರ ತಲೆ ಮೇಲೆ ವಿನಯ್ ಗುರೂಜಿ ಕಾಲಿಡುತ್ತಿರುವ ವಿಡಿಯೊವನ್ನು ಅನೇಕ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಹಂಚಿಕೊಳ್ಳಲಾಗಿತ್ತು.
ಕೆಪಿಸಿಸಿ ಆನೇಕಲ್ ವಿಭಾಗದ ಸೋಷಿಯಲ್ ಮೀಡಿಯಾ ವಿಂಗ್ ಎಂಬುದೂ ಸೇರಿ ಅನೇಕ ಪೇಜ್‌ಗಳಲ್ಲಿ ಈ ವಿಡಿಯೊವನ್ನು ಹಂಚಿಕೊಂಡು ಕಮೆಂಟ್ ಮಾಡಲಾಗಿತ್ತು. ರಾತ್ರಿ ಕುಡಿದ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ, ನಶೆಯಲ್ಲಿ ನಿಲ್ಲೋಕೂ ಆಗುತ್ತಿಲ್ಲ ಎಂದೆಲ್ಲ ಹೇಳಲಾಗಿತ್ತು. ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದೂ ಅನೇಕ ಕಡೆಗಳಲ್ಲಿ ನಮೂದಿಸಲಾಗಿತ್ತು.
ಇಂತಹ ಟ್ರೋಲ್‌ಗಳಿಂದ ಸ್ವಾಮೀಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲಿಗರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅನಿರೀತ್ ಎಂಬವರು ಮನವಿ ಮಾಡಿದ್ದಾರೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಸುರೇಶ್ ಕೋಣೆಮನೆ, ಹಾಸನ್ ಟ್ರೋಲ್ಸ್, ನನ್ನೂರು ಮೈಸೂರು, ಗಿರೀಶ್ ಗೌಡ, ಕೆಪಿಸಿಸಿ ಆನೇಕಲ್ ವಿಸಿ ಸೋಷಿಯಲ್, ವಿಜಯ ಟಿವಿ 24, ಯಲ್ಲಪ್ಪ ಹೆಗಡೆ, ಕರ್ನಾಟಕ ಲಿಂಗಾಯತ ಒಟ್ಟು 22 ವ್ಯಕ್ತಿ ಅಥವಾ ಪೇಜ್‌ಗಳನ್ನು ಆರೋಪಿ ಪಟ್ಟಿಯಲ್ಲಿ ನಮೂದಿಸಿದ್ದಾರೆ.
ಇದನ್ನೂ ಓದಿ | ಚಂದ್ರಶೇಖರ ಗುರೂಜಿ ಹತ್ಯೆಗೂ ಮುಂಚೆ ವಾಟ್ಸ್‌ಆ್ಯಪ್‌ನಲ್ಲಿ ಕ್ರಿಯೇಟ್ ಆಗಿತ್ತು ಗ್ರೂಪ್!