Site icon Vistara News

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Bakrid 2024

ಬೆಂಗಳೂರು: ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಕ್ರೀದ್ (Eid al Adha) ಅಂಗವಾಗಿ ಚಾಮರಾಜಪೇಟೆ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ (Bakrid 2024 ) ಪಾಲ್ಗೊಂಡು ಮಾತನಾಡಿದರು.

ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಒಬ್ಬರಿಗೊಬ್ಬರು ಶುಭಕೋರಿದರು. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಉಪಸ್ಥಿತಿ ಇದ್ದರು. ಮುಸಲ್ಮಾನರ ಅಮಾಮ್ ಶಾಲು (ಟೋಪಿ) ಹಾಕಿ ಸಿದ್ದರಾಮಯ್ಯರಿಗೆ ಸನ್ಮಾನ ಮಾಡಿದರು.

bakrid 2024

ಬಳಿಕ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಇಡೀ ಭಾರತದಲ್ಲಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ನೀವೆಲ್ಲರೂ ಪ್ರಾರ್ಥನೆ ಮಾಡಿದ್ದೀರಿ. ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ಎಲ್ಲಾ ಭಾಷೆ, ಧರ್ಮಕ್ಕೆ ಸಮಾನತೆ ಕೊಡುವ ಬಹುತ್ವದ ದೇಶವಿದು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು. ಆಗಲೇ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು, ಯಾವುದೇ ತಾರತಮ್ಯ ಮಾಡಲ್ಲ ಎಂದರು.

ಕೊಪ್ಪಳದಲ್ಲೂ ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

ಬೆಳಗಾವಿ ಅಂಜುಮಾನ ಮೈದಾನ ಹಾಗೂ ಶಿವಮೊಗ್ಗ, ವಿಜಯನಗರ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಈದ್ಗಾ ಮೈದಾನದಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೂಡಾ ಅಧ್ಯಕ್ಷ ಇಮಾಮ್, ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸೇರಿ ಹಲವರು ಭಾಗಿಯಾಗಿದ್ದರು.

ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಇದೇ ವೇಳೆ ಧರ್ಮಗುರುಗಳಿಂದ ಪ್ರವಾದಿ ಮಹಮದ್ ಪೈಗಂಬರರ ಜೀವನದ ಮಹತ್ವ ಬೋಧನೆ ಮಾಡಲಾಯಿತು. ತ್ಯಾಗ ಹಾಗೂ ಬಲಿದಾನಗಳ ಬಗ್ಗೆ ಧರ್ಮ ಗುರು ವಿವರಿಸಿದರು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿದರು.

ಬಾಗಲಕೋಟೆಯ ಮುಧೋಳ ನಗರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಧೋಳ ಶಾಸಕ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗಿಯಾದರು. ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲೂ ನಮಾಜ್‌ ಮಾಡಲಾಯಿತು.

ಮೈಸೂರು ಹಾಗೂ ಮಂಡ್ಯದಲ್ಲೂ ಬಕ್ರೀದ್ ಅಂಗವಾಗಿ ವಿವಿಧೆಡೆಗಳಲ್ಲಿರುವ ಮಸೀದಿಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೈಸೂರಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಉಸ್ಮಾನ್ ಷರೀಫ್ ಅವರು ಭಾಗಿಯಾಗಿದ್ದರು. ಮಂಡ್ಯದ ಈದ್ಗಾ ಮೈದಾನದಲ್ಲಿ ನಗರಸಭೆ ಸದಸ್ಯ ನಹೀಮ್ ಪ್ರಾರ್ಥನೆ ಸಲ್ಲಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version